ಕೆಲವೇ ದಿನಗಳಲ್ಲಿ 2025ಕ್ಕೆ ವಿದಾಯ ಹೇಳಲಿದ್ದೇವೆ. ಸಾಧನೆ&ವೇದನೆಯ ಸಮ್ಮಿಶ್ರವಾಗಿದ್ದ ಈ ವರ್ಷ ಹಲವು ಮಹತ್ವದ ಬೆಳವಣಿಗೆ, ಸ್ಥಿತ್ಯಂತರಗಳಿಗೆ ಸಾಕ್ಷೀಯಾಗಿದೆ. ಬರಲಿರುವ ಹೊಸ ವರ್ಷ (2026) ಹೆಚ್ಚು ಸಂತೋಷ, ಸಂತೃಪ್ತಿ, ನೆಮ್ಮದಿಯನ್ನು ತರಲಿ ಎಂಬ ಸದಾಶಯದೊಂದಿಗೆ ವಿಜಯವಾಣಿ ಈ ವರ್ಷದ ವಿದ್ಯಮಾನಗಳನ್ನು ಕಟ್ಟಿಕೊಡುತ್ತಿದೆ. ಕಳೆದ ಹದಿಮೂರು ವರ್ಷಗಳಿಂದ ಓದುಗರ ಮೆಚ್ಚುಗೆಗೆ ಪಾತ್ರವಾಗಿರುವ ಈ "ಸಮಗ್ರ ನೋಟ' ಸರಣಿ ಡಿಸೆಂಬರ್ 31ರವರೆಗೆ ಮುಂದುವರಿಯಲಿದೆ.
27 ವರ್ಷಗಳ ಬಳಿಕ ದೆಹಲಿ ಗದ್ದುಗೆಗೆ ಬಿಜೆಪಿ
ಫೆಬ್ರವರಿಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರದ ಗದ್ದುಗೆ ಏರಿತು. ಎರಡು ಬಾರಿ ಆಡಳಿತ ನಡೆಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೋಲನ್ನು ಅನುಭವಿಸಿತು. ಒಟ್ಟು 70 ಕ್ಷೇತ್ರಗಳ ಪೈಕಿ 47 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದರೆ, 23 ಕ್ಷೇತ್ರಗಳನ್ನು ಗೆದ್ದು ಆಮ್ ಆದ್ಮಿ ಪಕ್ಷ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಮುಖಭಂಗ ಅನುಭವಿಸಿತು. ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿಯೂ ಒಂದೇ ಒಂದು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ತನ್ನ ಖಾತೆ ತೆರೆಯುವಲ್ಲಿ ವಿಫಲವಾಯಿತು. ಶಾಲಿಮಾರ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಗೊಂಡ ರೇಖಾ ಗುಪ್ತಾ ಮುಖ್ಯಮಂತ್ರಿಯಾದರು. ಈ ಮೂಲಕ ದೆಹಲಿಯಲ್ಲಿ ಮಹಿಳಾ ಸಿಎಂ ಪರಂಪರೆ (ಈ ಹಿಂದೆ ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಸಿಎಂ ಆಗಿದ್ದರು) ಮುಂದುವರಿಯಿತು.
ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿಸಿದ ಬಿಹಾರ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧವಾಗಿ ತೀವ್ರ ಸುದ್ದಿಯಲ್ಲಿದ್ದ ಬಿಹಾರ ರಾಜಕಾರಣ, ಚುನಾವಣೆಯಲ್ಲೂ ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಗಾಗಿಸಿತು. 243 ಕ್ಷೇತ್ರಗಳ ಪೈಕಿ 200ಕ್ಕೂ ಅಧಿಕ ಸ್ಥಾನ ಗಳಿಸುವಲ್ಲಿ ಎನ್ಡಿಎ ಮೈತ್ರಿಕೂಟ ಯಶಸ್ವಿಯಾದರೆ, ಕಳೆದ ಬಾರಿಗಿಂತಲೂ ಕಡಿಮೆ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಇಂಡಿ ಮೈತ್ರಿಕೂಟ ಮುಖಭಂಗ ಅನುಭವಿಸಿತು. 2005ರಿಂದ ನಿರಂತರವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿರುವ ನಿತೀಶ್ ಕುಮಾರ್, 10ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದರು. "ವೋಟ್ ಚೋರಿ'ಯನ್ನೇ ಅಸ್ತ್ರ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಬಿಹಾರದಲ್ಲಿ ಈ ಆರೋಪ ಅವರ ಕೈ ಹಿಡಿಯದಂತಾಯಿತು.
ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ
ಜಮ್ಮು&ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರವಾಸಿತಾಣವಾದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ವಿದೇಶಿಯರು ಸೇರಿದಂತೆ 26 ಮಂದಿ ಬಲಿಯಾದರು. 2019ರಲ್ಲಿ ಪುಲ್ವಾಮಾ ದಾಳಿಯ ಬಳಿಕ ಉಗ್ರರು, ಕಣಿವೆಯಲ್ಲಿ ನಡೆಸಿದ ಭೀಕರ ದಾಳಿ ಇದಾಗಿತ್ತು. ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಉಗ್ರರು, ಈ ಬಾರಿ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದರು. ಈ ದಾಳಿಯ ವೇಳೆ ಪುರುಷರನ್ನು ಹಿಂದೂಗಳೆಂದು ಖಚಿತಪಡಿಸಿಕೊಂಡು ಹತ್ಯೆಗೈದರು. ಈ ದಾಳಿಯಲ್ಲಿ ಕನ್ನಡಿಗರಾದ ಶಿವಮೊಗ್ಗ ಮೂಲದ ಮಂಜುನಾಥ್ ಹಾಗೂ ಬೆಂಗಳೂರು ನಿವಾಸಿ ಭರತ್ ಭೂಷಣ್ ಮೃತಪಟ್ಟರು.
ಈ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ತೀರ್ಮಾನಿಸಿದ ಭಾರತ ಸರ್ಕಾರ ಹಾಗೂ ಭಾರತೀಯ ಸೇನೆ, ಪಹಲ್ಗಾಮ್ನಲ್ಲಿ ನಡೆದ ದಾಳಿಯ 15ನೇ ದಿನಕ್ಕೆ ಆಪರೇಷನ್ ಸಿಂಧೂರ ಕೈಗೊಂಡು ಪಾಕಿಸ್ತಾನಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿತು. ಮೇ 7&8ರ ಮಧ್ಯರಾತ್ರಿ 1.05 ರಿಂದ 1.30ರ ನಡುವೆ ಸೇನೆ ಅಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಸ್ಥಳಗಳಲ್ಲಿ 24 ಕ್ಷಿಪಣಿ ದಾಳಿಗಳನ್ನು ನಡೆಸುವ ಮೂಲಕ ಉಗ್ರರ ಶಿಬಿರಗಳನ್ನು ನಾಶಗೊಳಿಸಿತು. ಈ ಕಾರ್ಯಾಚರಣೆಯಲ್ಲಿ 70 ಭಯೋತ್ಪಾದಕರು ಹತರಾದರು.
ಸಿಂಧೂ ಒಪ್ಪಂದ ರದ್ದು
ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತ ಸರ್ಕಾರ, ಮೊದಲ ಕ್ರಮವಾಗಿ, ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿತು. ಅಲ್ಲದೆ ಪಂಜಾಬಿನಲ್ಲಿರುವ ಅಟ್ಟಾರಿ ಗಡಿಯಲ್ಲಿನ ಸಮಗ್ರ್ರ ತಪಾಸಣಾ ಕೇಂದ್ರವನ್ನು ಮುಚ್ಚಿ, ಆಮದು ಹಾಗೂ ರ್ತನ್ನು ಬಂದ್ ಮಾಡಲಾಯಿತು.
ಜನಗಣತಿಯೊಂದಿಗೆ ಜಾತಿಗಣತಿ
ಜನಗಣತಿ ಮತ್ತು ಜಾತಿಗಣತಿಯನ್ನು 2027ರ ಮಾರ್ಚ್ 1ರಿಂದ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಈ ವರ್ಷದ ಜೂನ್ ತಿಂಗಳಿನಲ್ಲಿ ಘೋಷಣೆ ಮಾಡಿದೆ. 2021ರಲ್ಲಿ ನಡೆಯಬೇಕಿದ್ದ ಗಣತಿ, ಕೋವಿಡ್ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದು, ಹಿಮಾಲಯ ರಾಜ್ಯಗಳಲ್ಲಿ 2026ರ ಅ.1ರಿಂದ ಹಾಗೂ ಇನ್ನುಳಿದ ರಾಜ್ಯಗಳಲ್ಲಿ 2027ರಲ್ಲಿ ಪ್ರಾರಂಭಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಹೊಸ ಉಪರಾಷ್ಟ್ರಪತಿ
ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಿತು. ಎನ್ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಜಯ ಸಾಧಿಸುವ ಮೂಲಕ ದೇಶದ 17ನೇ ಉಪರಾಷ್ಟ್ರಪತಿಯಾಗಿ ಆಯ್ಕೆಗೊಂಡರು. 1957ರಲ್ಲಿ ತಮಿಳುನಾಡಿನ ಕೊಂಗು ಪ್ರದೇಶದ ತಿರುಪ್ಪೂರಿನಲ್ಲಿ ಜನಿಸಿದ್ದ ಸಿ.ಪಿ ರಾಧಾಕೃಷ್ಣನ್, 2024ರ ಜುಲೈನಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.
ವಕ್ಫ್ ಕೋಲಾಹಲ
"ವಕ್ಫ್ (ತಿದ್ದುಪಡಿ) ಕಾಯ್ದೆ, 2025' ರಾಜಕೀಯವಾಗಿ ಭಾರಿ ಕೋಲಾಹಲ ಸೃಷ್ಟಿಸಿತು. ಲೋಕಸಭೆಯಲ್ಲಿ ಏಪ್ರಿಲ್ 2ರಂದು ಹಾಗೂ ರಾಜ್ಯಸಭೆಯಲ್ಲಿ ಏಪ್ರಿಲ್ 3ರಂದು ಮಂಡಿಸಿದ್ದ ವಕ್ಫ್ ತಿದ್ದುಪಡಿ ಮಸೂದೆ ಬಹುಮತದೊಂದಿಗೆ ಅಂಗೀಕಾರಗೊಂಡಿತು. ಏಪ್ರಿಲ್ 5ರಂದು ರಾಷ್ಟ್ರಪತಿಗಳು ಈ ಮಸೂದೆಗೆ ಅಂಕಿತ ಹಾಕುವ ಮೂಲಕ ಕಾಯ್ದೆಯಾಗಿ ಬದಲಾಯಿತು. ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆಯೂ ಈ ಕಾಯ್ದೆ ತರಲು ಸರ್ಕಾರ ಯಶಸ್ವಿಯಾಯಿತು. ವಕ್ಫ್ ಮಂಡಳಿಗಳ ಕಾರ್ಯಗಳನ್ನು ಸುಧಾರಿಸುವುದು ಮತ್ತು ಆಸ್ತಿಗಳ ನಿರ್ವಹಣೆಯಲ್ಲಿ ದಕ್ಷತೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ.
ಕೇರಳದಲ್ಲಿ ಖಾತೆ ತೆರೆದ ಬಿಜೆಪಿ
ಕೇರಳದ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ವಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ರಾಜ್ಯಾದ್ಯಂತ ಭರ್ಜರಿ ಜಯಭೇರಿ ಬಾರಿಸಿದ್ದರೆ, ಆಡಳಿತಾರೂಢ ಎಲ್ಡಿಎ್ ಸೋಲು ಅನುಭವಿಸಿತು. ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಐತಿಹಾಸಿಕ ಜಯ ಸಾಧಿಸುವ ಮೂಲಕ ಎಡಪಕ್ಷಗಳ 45 ವರ್ಷದ ಭದ್ರಕೋಟೆಯನ್ನು ಛಿದ್ರಗೊಳಿಸಿತು. ತಿರುವ ನಂತಪುರಂ ಪಾಲಿಕೆಯಲ್ಲಿ ಎನ್ಡಿಎ ಮೈತ್ರಿಕೂಟ 50 ವಾರ್ಡ್ಗಳನ್ನು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ.
ಶತಮಾನ ಕಂಡ ಆರ್ಎಸ್ಎಸ್
1925ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ವರ್ಷದ ಅಕ್ಟೋಬರ್ನಲ್ಲಿ ನೂರು ವರ್ಷಗಳನ್ನು ಪೂರೈಸಿತು. ಈ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಭಾರತ ಮಾತೆಯ ಚಿತ್ರವಿರುವ 100 ರೂ. ನಾಣ್ಯ ಹಾಗೂ ಅಂಚೆಚೀಟಿಯನ್ನು ಬಿಡುಗಡೆ ಗೊಳಿಸಿದರು. ರಾಷ್ಟ್ರಾದ್ಯಂತ ವಿವಿಧ ಕಾರ್ಯಕ್ರಮಗಳು ಶತಮಾನೋತ್ಸವ ನಿಮಿತ್ತ ನಡೆದವು.
ಸಂಘಟನೆಗೆ ಯುವಮುಖ
ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರದ ಸಚಿವ ನಿತೀನ್ ನಬಿನ್ರನ್ನು ಬಿಜೆಪಿ ಸಂಸದೀಯ ಮಂಡಳಿ ಈ ವರ್ಷಾಂತ್ಯದ ವೇಳೆಗೆ ನೇಮಿಸುವ ಮೂಲಕ ಯುವ ನಾಯಕನಿಗೆ ಪಕ್ಷ ಸಂಟನೆಯ ಹೊಣೆ ಹೊರಿಸಿತು. ಬಿಜೆಪಿ ಪಕ್ಷದ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ವ್ಯಕ್ತಿ ನಿತಿನ್ ನಬಿನ್ ಆಗಿದ್ದಾರೆ. ಇದಕ್ಕೂ ಮೊದಲು ಬಿಜೆಪಿಯ ಹಾಲಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. 2019ರಿಂದ ಈ ಹುದ್ದೆಯು ಬಿಜೆಪಿ ರಾಷ್ಟ್ರಾಧ್ಯಕ್ಷರ ಹುದ್ದೆ ವಹಿಸಿಕೊಳ್ಳುವ ಮೊದಲ ಹೆಜ್ಜೆಯಾಗಿದೆ. 2019ರ ಜೂನ್ನಲ್ಲಿ, ಅಮಿತ್ ಷಾ ಕೇಂದ್ರ ಗೃಹ ಸಚಿವರಾದ ನಂತರ ನಡ್ಡಾ ಅವರನ್ನು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ರನ್ನಾಗಿ ನೇಮಿಸಲಾಗಿತ್ತು. 6 ತಿಂಗಳುಗಳ ಕಾಲ ಈ ಹುದ್ದೆಯಲ್ಲ್ಲಿದ್ದು, 2020ರ ಜವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಡ್ಡಾ ಆಯ್ಕೆಯಾದರು.
ಮಿತ್ರಪಕ್ಷಗಳ ನಡುವೆ ಬಿರುಕು
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಪತ್ನಿ ಕಲ್ಪನಾ ಸೊರೆನ್ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿದ್ದು, ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಪಕ್ಷ ಕಾಂಗ್ರೆಸ್ ಜತೆಗಿನ ಮೈತ್ರಿ ಕಡಿದುಕೊಂಡು ಎನ್ಡಿಎ ಜತೆ ಸರ್ಕಾರ ರಚಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದ್ದು, ಜಾರ್ಖಂಡ್ ರಾಜ್ಯಪಾಲ ಸಂತೋಷ್ ಗಂಗ್ವಾರ್, ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಭೇಟಿಯಾಗಿರುವುದು ಕೂಡ ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.
2024ರ ಜೂನ್ನಲ್ಲಿ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ, ಈ ವರ್ಷ ನಡೆದ ಎರಡು ರಾಜ್ಯಗಳ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಜಯ ದಾಖಲಿಸಿತು. ಈ ಮೂಲಕ ಮೈತ್ರಿಕೂಟ ಮತ್ತಷ್ಟು ಭದ್ರಗೊಂಡಿದೆ. ಫೆಬ್ರವರಿಯಲ್ಲಿ ನಡೆದ ದೆಹಲಿ ಚುನಾವಣೆಯಲ್ಲಿ ಕಮಲ ಪಡೆ ಜಯ ಸಾಧಿಸಿದರೆ, ನವೆಂಬರ್ನಲ್ಲಿ ದೇಶದ ಗಮನ ಸೆಳೆದ ಬಿಹಾರ ಚುನಾವಣೆಯಲ್ಲಿಯೂ ಎನ್ಡಿಎ ಮೈತ್ರಿಕೂಟ ಭರ್ಜರಿ ಬಹುಮತ ಪಡೆದುಕೊಂಡಿತು. ಇನ್ನು "ಆಪರೇಶನ್ ಸಿಂಧೂರ' ಕಾರ್ಯಾಚರಣೆಯ ಮೂಲಕ ಇಡೀ ವಿಶ್ವವೇ ತಿರುಗಿ ನೋಡುವ ರೀತಿಯಲ್ಲಿ ಭಾರತ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿತು. ಅಲ್ಲದೆ, ಪಾಕಿಸ್ತಾನದ ಕುಟಿಲ ನೀತಿಗಳನ್ನು ವಿಶ್ವದ ಮುಂದೆ ತೆರೆದಿಡುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.