ಅಡುಗೆ ಮನೆಗೆ ಬೆಂಕಿ ಬಿದ್ದಿದೆ, ಕೇಂದ್ರ ಎಲ್ಲಿ ಅಡಗಿದೆ! ಗ್ಯಾಸ್ ಬಿಕ್ಕಟ್ಟಿನ ಹಿಂದೆ ದೀದಿ ಬಯಲು ಮಾಡಿದ ಆ ಸ್ಫೋಟಕ ಸತ್ಯವೇನು..? 
ದೇಶ

ಅಡುಗೆ ಮನೆಗೆ ಬೆಂಕಿ ಬಿದ್ದಿದೆ, ಕೇಂದ್ರ ಎಲ್ಲಿ ಅಡಗಿದೆ! ಗ್ಯಾಸ್ ಬಿಕ್ಕಟ್ಟಿನ ಹಿಂದೆ ದೀದಿ ಬಯಲು ಮಾಡಿದ ಆ ಸ್ಫೋಟಕ ಸತ್ಯವೇನು..? Mamata Banerjee

ಕೋಲ್ಕತ್ತಾ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಅಡುಗೆ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಎದುರಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಗುಡುಗಿದ್ದಾರೆ. 
ಈ ಬಗ್ಗೆ ಮಾತನಾಡಿದ ಮಮತಾ, ದೇಶದ ಜನರಿಗೆ ಅಗತ್ಯವಿರುವಷ್ಟು ಎಲ್‌ಪಿಜಿ ಮತ್ತು ತೈಲ ದಾಸ್ತಾನು ಮಾಡಿಕೊಳ್ಳದೆ ನಿರ್ಬಂಧ ಹೇರಿರುವುದು ಜನಸಾಮಾನ್ಯರಿಗೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದ್ದಾರೆ.

ದೀದಿ ಗಂಭೀರ ಆರೋಪಗಳೇನು.?

ಈ ಬಗ್ಗೆ ಬುಧವಾರ ಬೆಂಗಾಲಿ ಸುದ್ಧಿ ವಾಹಿನಿಯೊಂದರ ಜೊತೆ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.
ದಾಸ್ತಾನು ಕೊರತೆ: ಪಶ್ಚಿಮ ಏಷ್ಯಾದ ಬಿಕ್ಕಟ್ಟು ಎದುರಾಗಬಹುದು ಎಂಬ ಮುನ್ಸೂಚನೆ ಇದ್ದರೂ, ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯಾಗಿ ಎಲ್‌ಪಿಜಿ ಮತ್ತು ತೈಲದ ಬೃಹತ್ ಸಂಗ್ರಹವನ್ನು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಬಂಗಾಳ ಸಿಎಂ ಕೇಂದ್ರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಸಮರ್ಪಕ ಯೋಜನೆ: ಯಾವುದೇ ಪೂರ್ವಸಿದ್ಧತೆ ಇಲ್ಲದೆ ಗ್ಯಾಸ್ ಬಳಕೆಯ ಮೇಲೆ ನಿರ್ಬಂಧ ಹೇರಲಾಗಿದೆ. ಇದರಿಂದ ಜನಸಾಮಾನ್ಯರು ಅಡುಗೆ ಮಾಡಲು ಪರದಾಡುವಂತಾಗಿದೆ. ನಿರ್ಬಂಧ ಹೇರುವ ಮೊದಲು ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು ಎಂದು ಮಮತಾ ಆಗ್ರಹಿಸಿದ್ದಾರೆ.
ರಾಜಕೀಯ ವರ್ಸಸ್ ರಾಷ್ಟ್ರಹಿತ: ಕೇಂದ್ರ ಸರ್ಕಾರವು ದೇಶದ ಆರ್ಥಿಕ ಮತ್ತು ಇಂಧನ ಭದ್ರತೆಗಿಂತ ರಾಜಕೀಯಕ್ಕೇ ಹೆಚ್ಚು ಒತ್ತು ನೀಡುತ್ತಿದೆ. ಕೇಂದ್ರ ಸರ್ಕಾರವು ಎಸ್‌ಐಆರ್ ನಡೆಸಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವುದರಲ್ಲಿ ಬ್ಯುಸಿಯಾಗಿದೆ, ಆದರೆ ದೇಶದ ಗ್ಯಾಸ್ ಮತ್ತು ತೈಲ ದಾಸ್ತಾನು ನಿರ್ವಹಣೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕಪ್ಪು ಮಾರುಕಟ್ಟೆಗೆ ಪ್ರೋತ್ಸಾಹ..?

ಕೇಂದ್ರದ ಈ ಅಸ್ಪಷ್ಟ ನೀತಿಗಳಿಂದಾಗಿ ದೇಶದಲ್ಲಿ ಅಡುಗೆ ಅನಿಲದ ಕಾಳಸಂತೆ ಅಥವಾ ಕಪ್ಪು ಮಾರುಕಟ್ಟೆ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ. ಕೇಂದ್ರದ ಬಳಿ ಸರಿಯಾದ ನೀತಿ ಚೌಕಟ್ಟು ಇಲ್ಲದಿರುವುದು ಪರೋಕ್ಷವಾಗಿ ಕಾಳಸಂತೆಕೋರರಿಗೆ ಸಹಾಯ ಮಾಡುತ್ತಿದೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಬೆಲೆ ತೆತ್ತು ಗ್ಯಾಸ್ ಖರೀದಿಸುವಂತಾಗಿದೆ ಎಂದು ದೀದಿ ದೂರಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ವಾಗ್ದಾಳಿ

ಚುನಾವಣಾ ಆಯೋಗವು ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಬಗ್ಗೆಯೂ ಮಮತಾ ಬ್ಯಾನರ್ಜಿ ಅನುಮಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಜನರ ಹಸಿವು ಮತ್ತು ಇಂಧನದ ಅಗತ್ಯಕ್ಕಿಂತ ಮತದಾರರ ಪಟ್ಟಿಯ ಮೇಲೆ ಕಣ್ಣಿಡುವುದೇ ಮುಖ್ಯವಾಗಿದೆ. ದೇಶದ ಆಡಳಿತ ಸುಗಮವಾಗಿ ನಡೆಸಲು ಸಾಧ್ಯವಾಗದವರು ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಸಂಚು ಹೂಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ತೈಲ ಬೆಲೆ ಏರಿಕೆಯ ಆತಂಕ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದು ಭಾರತದ ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡುತ್ತಿದೆ. ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾರಿಗೆ ವೆಚ್ಚ ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆಯು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರದ ಇಂಧನ ಸಚಿವಾಲಯವು ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮುಂದಿನ ಹಂತ..?

ಕೇಂದ್ರ ಸರ್ಕಾರವು ಇಂಧನ ಬಿಕ್ಕಟ್ಟು ತಗ್ಗಿಸಲು ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ತೃಣಮೂಲ ಕಾಂಗ್ರೆಸ್ (TMC) ಎಚ್ಚರಿಕೆ ನೀಡಿದೆ. ಅತ್ತ ಕೇಂದ್ರ ಸರ್ಕಾರವು ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿ ಪೂರೈಕೆ ಸರಪಳಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೊಳ್ಳುತ್ತಿದೆ,(ಏಜೆನ್ಸೀಸ್).