ಬೆಂಗಳೂರು : ಸುರಕ್ಷಿತ, ಸಮರ್ಪಕ ಹಾಗೂ ಕೈಗೆಟುಕುವ ದರದಲ್ಲಿ ಕುಡಿಯುವ ನೀರು ಪ್ರತಿಯೊಬ್ಬರಿಗೂ ದೊರೆಯಬೇಕೆಂಬ ಉದ್ದೇಶದಿಂದ ‘ವಾಟರ್ ಸತ್ಯಾಗ್ರಹ ನಮ್ಮ ನೀರು ನಮ್ಮ ಹಕ್ಕು’ ಎಂಬ ನಾಗರಿಕರ ಜನಾಂದೋಲನ ಆರಂಭಿಸಲಾಗಿದೆ ಎಂದು ಅಭಿಯಾನದ ರೂವಾರಿ ಎಸ್.ಎ. ಹುಸೇನ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1927ರಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಾರಾಷ್ಟ್ರದ ಮಹಾಡ್ನಲ್ಲಿ ಸಾರ್ವಜನಿಕ ಕೆರೆಯ ನೀರು ಕುಡಿಯುವ ಹಕ್ಕಿಗಾಗಿ ನಡೆಸಿದ ಸತ್ಯಾಗ್ರಹದ ಆಶಯವನ್ನು ಮುಂದುವರಿಸುವ ಪ್ರಯತ್ನ ಇದಾಗಿದೆ. ಇಂದು ಜಾತಿ ತಾರತಮ್ಯದ ಬದಲಿಗೆ ಕಲುಷಿತ ನೀರು, ಅಂತರ್ಜಲ ಕೊರತೆ ಹಾಗೂ ದುಬಾರಿ ಟ್ಯಾಂಕರ್ ನೀರಿನ ದರದಿಂದ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗುತ್ತಿದ್ದು, ಆ ಕುರಿತು ಅಭಿಯಾನದ ಅಗತ್ಯವಿದೆ. ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 400 ದಶಲಕ್ಷ ಲೀಟರ್ ಪೈಪ್ಲೈನ್ ನೀರು ನಷ್ಟವಾಗುತ್ತಿದ್ದು, 772 ದಶಲಕ್ಷ ಲೀಟರ್ ಕೊಳಚೆ ನೀರು ಸಂಸ್ಕರಣೆಯಾಗದೆ ಉಳಿಯುತ್ತಿದೆ. ರಾಜ್ಯದ 240 ತಾಲೂಕುಗಳ ಪೈಕಿ 226 ತಾಲೂಕುಗಳು ಬರಪೀಡಿತವಾಗಿರುವುದು ನೀರಿನ ಬಿಕ್ಕಟ್ಟಿನ ಗಂಭೀರತೆಯನ್ನು ತೋರಿಸುತ್ತದೆ ಎಂದು ವಿವರಿಸಿದರು.
ಶುದ್ಧ ಕುಡಿಯುವ ನೀರು ಮೂಲಭೂತ ಹಕ್ಕು
ಸಂವಿಧಾನದ 21ನೇ ವಿಧಿಯಡಿ ಮಾಲಿನ್ಯರಹಿತ ನೀರು ಪಡೆಯುವುದು ವ್ಯಕ್ತಿಯ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯೂ 2010ರಲ್ಲಿ ಶುದ್ಧ ಕುಡಿಯುವ ನೀರನ್ನು ಮಾನವ ಹಕ್ಕು ಎಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ವಾರ್ಡ್ಗಳಲ್ಲಿ ಮನೆಮನೆ ಸಮೀಕ್ಷೆ ನಡೆಸಿ ನೀರಿನ ಲಭ್ಯತೆ, ಗುಣಮಟ್ಟ ಹಾಗೂ ವೆಚ್ಚದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಾಗರಿಕರ ಬೆಂಬಲ ಕ್ರೋಡೀಕರಿಸಿ ಸರ್ಕಾರದ ಮುಂದೆ ನೀರಿನ ಹಕ್ಕಿನ ಬೇಡಿಕೆಗಳನ್ನು ಮಂಡಿಸಲಾಗುವುದು. ನೀರಿನ ಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ, ಕೊಳಚೆ ನೀರಿನ ಸಂಸ್ಕರಣೆ, ನೀರಿನ ಸೋರಿಕೆ ತಡೆ ಹಾಗೂ ಶುದ್ಧ ಕುಡಿಯುವ ನೀರನ್ನು ಕೈಗೆಟುಕುವ ದರದಲ್ಲಿ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹುಸೇನ್ ವಿವರಿಸಿದರು.