ಚಿನ್ನ ಖರೀದಿಸಬೇಡಿ ಎಂದಿದ್ದೇ ಸುಳ್ಳು! ಇಂದಿರಾ ಗಾಂಧಿ ಕುರಿತ ವೈರಲ್ ಪೋಸ್ಟರ್ ಹಿಂದಿನ ಅಸಲಿ ಸತ್ಯ ಇಲ್ಲಿದೆ 
ದೇಶ

ನಕಲಿ ಪೋಸ್ಟರ್ ವೈರಲ್​ ಬೆನ್ನಲ್ಲೇ ಬೆಳಕಿಗೆ ಬಂತು ಅಸಲಿ ವರದಿ! ಚಿನ್ನದ ಸುತ್ತ ಭುಗಿಲೆದಿದ್ದ ವಿವಾದಕ್ಕೆ ಕೊನೆಗೂ ಬ್ರೇಕ್

ಪ್ರಮುಖ ಮುಖ್ಯಾಂಶಗಳು

  • 1967ರ ಇಂದಿರಾ ಗಾಂಧಿಯವರ ಚಿನ್ನದ ಕುರಿತ ಪೋಸ್ಟರ್ ನಕಲಿ ಎಂದು 'ದಿ ಹಿಂದೂ' ಪತ್ರಿಕೆ ಸ್ಪಷ್ಟಪಡಿಸಿದೆ
  • ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಚಿನ್ನ ಖರೀದಿ ಮಾಡದಂತೆ ಯಾವುದೇ ಮನವಿ ಮಾಡಿಲ್ಲ
  • ವಿದೇಶಿ ವಿನಿಮಯ ಉಳಿಸಲು ಪ್ರಧಾನಿ ಮೋದಿ ಒಂದು ವರ್ಷ ಚಿನ್ನ ಖರೀದಿಸದಂತೆ ಜನರಲ್ಲಿ ಮನವಿ ಮಾಡಿದ್ದಾರೆ
  • ಅಸಲಿ ಮತ್ತು ನಕಲಿ ಎರಡೂ ಒಂದೇ ತಕ್ಕಡಿಯಲ್ಲಿ ತೂಕ ಹಾಕಿದಂತೆ ಜನರ ಮುಂದಿದೆ
ಮಧ್ಯಪ್ರಾಚ್ಯ ಉದ್ವಿಗ್ನ ಹಿನ್ನೆಲೆ ಒಂದು ವರ್ಷ ಚಿನ್ನವನ್ನು ಖರೀದಿಸಬೇಡಿ, ಮನೆಯಿಂದಲೇ ಕೆಲಸ, ಮೆಟ್ರೋ-ಸಾರಿಗೆ ಬಸ್​ನಲ್ಲಿ ಪ್ರಯಾಣಿಸಿ, ಇಂಧನವನ್ನು ಮಿತವಾಗಿ ಬಳಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದರು. ಮೋದಿ ಹೀಗೇಳುತ್ತಿದ್ದಂತೆ 1967ರಲ್ಲಿ ಇಂದಿರಾ ಗಾಂಧಿ ಕೂಡ ಜನರಿಗೆ ಚಿನ್ನ ಖರೀದಿ ಮರೆತುಬಿಡಿ ಎಂದಿದ್ದರು ಎನ್ನಲಾದ ದಿ ಹಿಂದೂ ಪತ್ರಿಕೆಯ ವರದಿಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.   
"ಚಿನ್ನ ಖರೀದಿಸಬೇಡಿ, ಇಂದಿರಾ ಮನವಿ; ರಾಷ್ಟ್ರೀಯ ಶಿಸ್ತಿಗಾಗಿ ಕರೆ" ಎಂಬ ಶೀರ್ಷಿಕೆಯಡಿ ದಿ ಹಿಂದೂ ಪತ್ರಿಕೆಯಲ್ಲಿ 1967, ಜೂನ್​ 6ರಂದು ಪ್ರಕಟವಾಗಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಆರಂಭದಲ್ಲಿ ದೊಡ್ಡ ಸುದ್ದಿಗೆ ಕಾರಣವಾಯಿತು. ಆದರೀಗ, ಇದೊಂದು ನಕಲಿ ಫೋಟೋ ಎಂಬುದು ಸ್ಪಷ್ಟವಾಗಿದೆ. ಸ್ವತಃ ದಿ ಹಿಂದೂ ಪತ್ರಿಕೆಯೇ ಇದಕ್ಕೆ ಸ್ಪಷ್ಟನೆ ನೀಡಿದ್ದು, ಇದು ಅಕ್ಷರಶಃ ನಕಲಿ ಎಂದಿದೆ. 

ಎಚ್ಚರಿಕೆಯ ಗಂಟೆ

ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ವಿದೇಶಿ ವಿನಿಮಯದ ಕೊರತೆಯನ್ನು ನೀಗಿಸಲು ಜನರು ಚಿನ್ನವನ್ನು ಖರೀದಿಸಬಾರದು ಎಂದು ಮನವಿ ಮಾಡಿದ್ದಾರೆ ಎಂಬ ಶೀರ್ಷಿಕೆಯಿದೆ. ಆದರೆ, ಪೋಸ್ಟರ್​​ ನಕಲಿ ಎಂದು ಕಂಡು ಬಂದಿರುವುದು ಸದ್ಯ ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಅಧಿಕೃತ ಮೂಲಗಳಿಂದ​ ​ಹೊರಬೀಳದ ಮಾಹಿತಿ, ಫೋಟೋ ಅಥವಾ ವಿಡಿಯೋಗಳನ್ನು ಜನರು ಕುರುಡರಂತೆ ನಂಬಬಾರದು ಎಂಬುದಕ್ಕೆ ಒಂದೊಳ್ಳೆ ಉದಾಹರಣೆ ಇದಾಗಿದೆ.

'ದಿ ಹಿಂದೂ' ಸ್ಪಷ್ಟನೆ, ಮನವಿ

ಇಂತಹ ಹಳೆಯ ಪತ್ರಿಕೆಯ ಕ್ಲಿಪಿಂಗ್‌ಗಳ ಹೆಸರಿನಲ್ಲಿ ಹರಿದಾಡುವ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪತ್ರಿಕೆ ವಿನಂತಿಸಿದೆ. ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಗತ್ಯವಾಗಿದ್ದು, ತಪ್ಪುದಾರಿಗೆಳೆಯುವ ಇಂತಹ ಡಿಜಿಟಲ್ ಮಾರ್ಪಾಡಿತ ಚಿತ್ರಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. 

ಅಷ್ಟಕ್ಕೂ ಇಂದಿರಾ ಗಾಂಧಿ ಹೇಳಿದ್ದೇನು?

ವರದಿಗಳ ಪ್ರಕಾರ, ಇಂದಿರಾ ಗಾಂಧಿ ಅವರು ದೇಶದ ಜನತೆಗೆ ಚಿನ್ನವನ್ನು ಖರೀದಿಸಬೇಡಿ ಎಂದು ಎಲ್ಲಿಯೂ ಹೇಳಿಲ್ಲ. 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಅಂದಿನ ಪ್ರಧಾನಿ ಜವಹರಲಾಲ್​ ನೆಹರೂ ಅವರು ಚಿನ್ನವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದರು. ರಕ್ಷಣಾ ಸಚಿವಾಲಯವು 2009ರಲ್ಲಿ ಪ್ರಕಟಿಸಿದ ಕಾಫಿ ಟೇಬಲ್ ಪುಸ್ತಕದ ಪ್ರಕಾರ, ಯುದ್ಧದ ಸಮಯದಲ್ಲಿ ಇಂದಿರಾ ಗಾಂಧಿಯವರು ರಾಷ್ಟ್ರೀಯ ಪರಿಹಾರ ನಿಧಿಗೆ 367 ಗ್ರಾಂ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡಿದ್ದರು. ಆದರೆ, ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಆ ರೀತಿಯಾದ ಯಾವುದೇ ಘೋಷಣೆಯನ್ನು ಮಾಡಿರಲಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
ಅಸಲಿ ಸುದ್ದಿ ರಿವೀಲ್​
ಆರಂಭದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಪತ್ರಿಕೆಯ ಪೋಸ್ಟರ್​ ನಕಲಿ ಎಂದು ಹೇಳಿರುವ ದಿ ಹಿಂದೂ, ಇದು ಸುಳ್ಳು ಸುದ್ದಿ ಎಂದಿತು. ಅಷ್ಟಕ್ಕೂ ಜೂನ್​ 06ರಂದು ಪ್ರಕಟಗೊಂಡ ಪತ್ರಿಕೆಯ ಅಸಲಿ ಮುಖಪುಟ ಈಗ ಹೊರಬಿದ್ದಿದೆ. ಈ ಮೂಲಕ ಯಾವುದು ಅಸಲಿ ಮತ್ತು ನಕಲಿ ಎಂಬುದು ಒಂದೇ ತಕ್ಕಡಿಯಲ್ಲಿ ತೂಕ ಹಾಕಿದಂತಿದೆ. ಇದು ಹಲವರಿಗೆ ಕಣ್ಣು ತೆರೆಸುವ ಘಟನೆ ಎಂದೇ ಹೇಳಬಹುದು,(ಏಜೆನ್ಸೀಸ್).