ಮನೆ ಬಾಗಿಲಿಗೇ ಬಂತು ಯುದ್ಧ ಸಂಕಷ್ಟ!
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮಗಳು ಇದೀಗ ಭಾರತದ ಹೋಟೆಲ್ ಉದ್ಯಮಕ್ಕೆ ಮತ್ತು ಮನೆಗಳಿಗೆ ತಟ್ಟಲಾರಂಭಿಸಿವೆ. ಮುಂಬೈ, ಕೋಲ್ಕತ್ತಾ, ಬೆಂಗಳೂರು ಮುಂತಾದ ನಗರಗಳಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆ ಉಂಟಾಗಿದ್ದು, ಹಲವಾರು ರೆಸ್ಟೋರೆಂಟ್ಗಳು, ಹೋಟೆಲ್ಗಳು ಸಂಕಷ್ಟಕ್ಕೆ ಸಿಲುಕಿವೆ. ಅಡುಗೆ ಅನಿಲ ಸಿಗದೆ ಕೆಲವು ಹೋಟೆಲ್ಗಳ ಮಾಲೀಕರು ವ್ಯವಹಾರವನ್ನೇ ಸ್ಥಗಿತಗೊಳಿಸಿದ್ದಾರೆ. ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆಗೂ ಈ ಭೌಗೋಳಿಕ ರಾಜಕೀಯ ಪರಿಸ್ಥಿತಿ ದಾರಿ ಮಾಡಿಕೊಟ್ಟಿದೆ. ಈ ಕುರಿತು ವಿಸõತ ಮಾಹಿತಿ ಇಲ್ಲಿದೆ.
ಭಾರತ ಇಡೀ ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಎಲ್ಪಿಜಿ ಆಮದುದಾರ ರಾಷ್ಟ್ರ. ಕಳೆದ ವರ್ಷ ಸುಮಾರು 33.15 ಮಿಲಿಯನ್ ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ದೇಶ ಬಳಕೆ ಮಾಡಿದೆ. ದೇಶದ ಎಲ್ಪಿಜಿ ಬೇಡಿಕೆಯ ಬಹುಪಾಲು ಭಾಗವನ್ನು ಆಮದಿನ ಮೂಲಕವೇ ಪೂರೈಸಲಾಗುತ್ತಿ್ತೆ. ಒಟ್ಟು ಆಮದಿನ ಶೇ. 80ಕ್ಕಿಂತ ಹೆಚ್ಚು ಭಾಗ, ಹಾಮುಜ್ ಜಲಸಂಧಿಯ ಮೂಲಕವೇ ಹಾದುಬರುತ್ತದೆ. ಇದು ಜಾಗತಿಕ ಇಂಧನ ಸಾಗಣೆಯ ಅತ್ಯಂತ ಪ್ರಮುಖ ಮಾರ್ಗ. ಪ್ರಸ್ತುತ ಇರಾನ್-ಇಸ್ರೇಲ್-ಅಮೆರಿಕ ಯುದ್ಧದಿಂದಾಗಿ ಹಾಮುಜ್ ಜಲಸಂಧಿ ಬಹುತೇಕ ಬಂದ್ ಆಗಿದ್ದು, ತೈಲ ಹಡಗುಗಳು ಅಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆಯೇ ಪ್ರಸ್ತುತ ಭಾರತದ ನಗರಗಳಲ್ಲಿ ಉಂಟಾಗಿರುವ ಎಲ್ಪಿಜಿ ಸಿಲಿಂಡರ್ ಕೊರತೆಗೆ ಮುಖ್ಯ ಕಾರಣವಾಗಿದೆ.
ಯಾವ್ಯಾವ ನಗರಗಳಲ್ಲಿ ಏನೇನು ಸಮಸ್ಯೆ?: ಮುಂಬೈನಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಸುಮಾರು ಶೇ. 20ರಷ್ಟು ಹೋಟೆಲ್ಗಳು ಈಗಾಗಲೇ ತಾತ್ಕಾಲಿಕವಾಗಿ ಮುಚ್ಚಿವೆ. ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಎರಡು ದಿನಗಳಲ್ಲಿ ಶೇ. 50ರಷ್ಟು ಹೋಟೆಲ್ಗಳು ಮುಚ್ಚುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಹೋಟೆಲ್ ನಡೆಸುವುದು ಅಸಾಧ್ಯ ಎಂದು ಸಂಘಟನೆಗಳು ಹೇಳಿವೆ. ಕೆಲವು ಹೋಟೆಲ್ಗಳು ತಮ್ಮ ಸೇವೆಯನ್ನು ಕೇವಲ ಟೀ, ಕಾಫಿಗೆ ಸೀಮಿತಗೊಳಿಸಿವೆ. ಇದು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಮೇಲೆ ನೇರ ಪರಿಣಾಮ ಉಂಟು ಮಾಡಿದೆ. ಕೋಲ್ಕತ್ತಾದಲ್ಲಿನ ರೆಸ್ಟೋರೆಂಟ್ಗಳು ಮತ್ತು ಬೇಕರಿಗಳ ದೈನಂದಿನ ಕೆಲಸದ ಮೇಲೆ ತೀವ್ರ ಪರಿಣಾಮವಾಗಿದೆ. ಚೆನ್ನೈ ಹೋಟೆಲ್ ಸಂಘಟನೆ ತುರ್ತು ಪರಿಹಾರ ಕ್ರಮಕ್ಕಾಗಿ ಪ್ರಧಾನಿಗೆ ಪತ್ರ ಬರೆದಿದೆ. ಎಲ್ಪಿಜಿ ಪೂರೈಕೆ ಇಲ್ಲದ ಕಾರಣ ಅನೇಕ ರೆಸ್ಟೋರೆಂಟ್ಗಳು ಮುಚ್ಚುವ ಹಂತದಲ್ಲಿವೆ. ಹೈದರಾಬಾದ್ನಲ್ಲಿ ಹೋಟೆಲ್ಗಳ ಜತೆಗೆ ಪೇಯಿಂಗ್ ಗೆಸ್ಟ್ (ಪಿಜಿ) ಮತ್ತು ಹಾಸ್ಟೆಲ್ಗಳಿಗೂ ಅಡುಗೆ ಅನಿಲದ ಕೊರತೆ ತಟ್ಟಲಾರಂಭಿಸಿದೆ.
ಜೈಪುರ ಸೇರಿದಂತೆ ರಾಜಸ್ಥಾನದ ಹಲವು ಭಾಗಗಳಲ್ಲಿ ವಾಣಿಜ್ಯ ಸಿಲಿಂಡರ್ ಬುಕಿಂಗ್ ತೀವ್ರ ವಿಳಂಬವಾಗುತ್ತಿದೆ. ಇದು ವಿವಾಹ ಸಮಾರಂಭಗಳ ಕೇಟರಿಂಗ್ ಸೇವೆ ಮೇಲೂ ಪರಿಣಾಮ ಬೀರಿದೆ. ದೆಹಲಿ ಮತ್ತು ಗುರುಗ್ರಾಮದಲ್ಲಿನ ಕೆಲವು ಗ್ಯಾಸ್ ಏಜೆನ್ಸಿಗಳು ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ. ಪುಣೆಯಲ್ಲಿ ಎಲ್ಪಿಜಿ ಕೊರತೆಯಿಂದಾಗಿ ಕೆಲವು ಗ್ಯಾಸ್ ಚಿತಾಗಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ರೆಸ್ಟೋರೆಂಟ್ಗಳ ಮಾಲೀಕರು ಅಡುಗೆಮನೆಯ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಪೂರೈಕೆ ವಿಳಂಬ ಹೀಗೆಯೇ ಮುಂದುವರಿದರೆ ಉದ್ಯಮದ ಅಸ್ತಿತ್ವಕ್ಕೇ ಧಕ್ಕೆ ಬರಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಕಾಳಸಂತೆಯಲ್ಲಿ ಮಾರಾಟ ಜೋರು
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ವಿತರಕರು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ವರದಿಗಳು ದೇಶದಾದ್ಯಂತ ಕೇಳಿಬರುತ್ತಿವೆ. ಅಧಿಕೃತವಾಗಿ ವಾಣಿಜ್ಯ ಸಿಲಿಂಡರ್ ಬೆಲೆ -1,850 ರೂಯಿಂದ 1,950ರ ಆಸುಪಾಸಿನಲ್ಲಿದ್ದರೂ, ತುರ್ತು ಅಗತ್ಯವಿರುವ ಹೋಟೆಲ್ಗಳಿಗೆ ಅದನ್ನು ಹೆಚ್ಚಿನ ದರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆಂಧ್ರಪ್ರದೇಶದ ಕರ್ನಲ್, ತಿರುಪತಿ ಮುಂತಾದಡೆ ಇದು 3,200 ರೂವರೆಗೆ ತಲುಪಿದೆ.
ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿತರಕರು ದಾಸ್ತಾನು ಇಲ್ಲ ಎಂಬ ನೆಪವೊಡ್ಡಿ, ಹಿಂಬಾಗಿಲಿನಿಂದ - 3,000 ರೂಪಾಯಿಗೆ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ದೆಹಲಿ-ಎನ್ಸಿಆರ್ನಲ್ಲಿ ಸಣ್ಣ ಹೋಟೆಲ್ಗಳು -2,500ಕ್ಕೂ ಹೆಚ್ಚು ಹಣ ನೀಡಿ ಸಿಲಿಂಡರ್ ಪಡೆಯುತ್ತಿವೆ.
ಹೋಟೆಲ್ಗಳಲ್ಲಿ ಮೆನು ಕಡಿತ
ಗ್ಯಾಸ್ ಉಳಿಸುವ ಉದ್ದೇಶದಿಂದ, ಹೆಚ್ಚಿನ ಸಮಯ ತೆಗೆದುಕೊಳ್ಳುವ ಖಾದ್ಯಗಳನ್ನು (ಸ್ಲೋ ಕುಕಿಂಗ್ ಡಿಷ್) ಹೋಟೆಲ್ಗಳು ತಮ್ಮ ಮೆನುವಿನಿಂದ ತೆಗೆದುಹಾಕುತ್ತಿವೆ. ಕೆಲವು ಹೋಟೆಲ್ಗಳು ತೀರಾ ಅಗತ್ಯವಿರುವ ಕೆಲವೇ ಕೆಲವು ತಿಂಡಿಗಳನ್ನು ಮಾತ್ರ ತಯಾರಿಸಿ ಗ್ರಾಹಕರಿಗೆ ಪೂರೈಸುತ್ತಿವೆ.
ಪರ್ಯಾಯ ಮಾರ್ಗಗಳಿಗೆ ಮೊರೆ: ಕೆಲವು ಹೋಟೆಲ್ಗಳು ಎಲೆಕ್ಟ್ರಿಕ್ ಸ್ಟವ್ಗಳನ್ನು ಬಳಸಲಾರಂಭಿಸಿವೆ. ಇನ್ನು ಕೆಲವರು ಇಂಡಕ್ಷನ್ ಅಡುಗೆ ವಿಧಾನ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಹೆಚ್ಚಿನ ಹೋಟೆಲ್ಗಳ ಅಡುಗೆಮನೆಗಳಲ್ಲಿ ಇದನ್ನು ತಕ್ಷಣವೇ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಇಂಧನ ಉಳಿಸಲು ಕೆಲವು ಹೋಟೆಲ್ಗಳು ತಮ್ಮ ವ್ಯವಹಾರದ ಸಮಯವನ್ನೇ ಕಡಿತಗೊಳಿಸುತ್ತಿವೆ. ಉದಾಹರಣೆಗೆ, ಪುದುಚೇರಿಯ ಕೆಲವು ಹೋಟೆಲ್ಗಳು ಕೇವಲ ಸಂಜೆಯ ಕಾಫಿ-ಟೀಗೆ ಮಾತ್ರ ತಮ್ಮ ವ್ಯವಹಾರವನ್ನು ಸೀಮಿತಗೊಳಿಸಿಕೊಂಡಿವೆ.
ಎಲ್ಪಿಜಿ ಕಾಳಸಂತೆ ಮಾರಾಟದಿಂದಾಗಿ ಹೋಟೆಲ್ ಮಾಲೀಕರು ಅಡುಗೆ ತಯಾರಿಕೆಯ ವೆಚ್ಚವನ್ನು ಭರಿಸಲಾಗದೆ, ಆಹಾರದ ಬೆಲೆಗಳನ್ನು ಶೇ. 10ರಿಂದ 20ರಷ್ಟು ಹೆಚ್ಚಿಸುತ್ತಿದ್ದಾರೆ. ಇದು ನೇರವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಹೋಟೆಲ್ನವರು ವಾಣಿಜ್ಯ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಪಡೆಯುತ್ತಿರುವ ಕಾರಣ, ಪ್ರತಿ ಸಿಲಿಂಡರ್ ಮೇಲೆ 600 ರೂಪಾಯಿಯಿಂದ 1,000ವರೆಗೆ ಹೆಚ್ಚುವರಿ ಹೊರೆ ಬೀಳುತ್ತಿದೆ.
ಸಾಗಾಣಿಕೆ ವೆಚ್ಚ ಹೆಚ್ಚಳದಿಂದಾಗಿ ತರಕಾರಿ, ದಿನಸಿ ಪದಾರ್ಥಗಳ ಬೆಲೆಯೂ ಏರಿದೆ. ಈ ವೆಚ್ಚವನ್ನು ಸರಿದೂಗಿಸಲು ಹೋಟೆಲ್ ಮಾಲೀಕರು ಅನಿವಾರ್ಯವಾಗಿ ತಿಂಡಿ-ಊಟದ ಬೆಲೆ ಹೆಚ್ಚಿಸುತ್ತಿದ್ದಾರೆ. ಬೆಂಗಳೂರು, ಮುಂಬೈನಲ್ಲಿ -50ಕ್ಕೆ ಸಿಗುತ್ತಿದ್ದ ತಿಂಡಿಗಳು ಈಗ 60 ರೂ ಅಥವಾ 65ಕ್ಕೆ ಏರಿವೆ. ಬೆಲೆ ಹೆಚ್ಚಿಸಲು ಇಚ್ಛಿಸದ ಕೆಲವು ಹೋಟೆಲ್ಗಳು ಆಹಾರದ ಪ್ರಮಾಣವನ್ನು (ಕ್ವಾಂಟಿಟಿ) ಕಡಿಮೆ ಮಾಡುತ್ತಿವೆ. ಮೆನುವಿನಿಂದ ಕೆಲವು ದುಬಾರಿ ಖಾದ್ಯಗಳನ್ನೇ ಕೈಬಿಡುತ್ತಿವೆ.
ಸಹಜ ಸ್ಥಿತಿಗೆ ಮರಳುವುದು ಯಾವಾಗ?
ಇದು ಯುದ್ಧ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುವುದರಿಂದ ಈ ವಿಷಯದಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳುವುದು ಕಷ್ಟ. ಪಶ್ಚಿಮ ಏಷ್ಯಾದಲ್ಲಿ ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷ ಸ್ಥಗಿತಗೊಂಡ ಮೇಲೆ ಮತ್ತು ಹಾಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡಚಣೆ ತೆರವಾದ ನಂತರ ಪರಿಸ್ಥಿತಿ ಸುಧಾರಿಸಬಹುದು. ಭಾರತ ತನ್ನ ಎಲ್ಪಿಜಿ ಅಗತ್ಯದ ಶೇ. 60ಕ್ಕಿಂತ ಹೆಚ್ಚು ಭಾಗವನ್ನು ಆಮದಿನ ಮೂಲಕವೇ ಪಡೆಯುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂದ ನಂತರವೇ ಇಲ್ಲಿನ ಪೂರೈಕೆ ಸಹಜ ಸ್ಥಿತಿಗೆ ಮರಳಲು ಸಾಧ್ಯ. ಪ್ರಸ್ತುತ ಭಾರತದ ಬಳಿ ಸುಮಾರು 10ರಿಂದ 12 ದಿನಗಳಿಗೆ ಸಾಕಾಗುವಷ್ಟು ಮಾತ್ರ ಎಲ್ಪಿಜಿ ದಾಸ್ತಾನು ಇದೆ ಎಂದು ಅಂದಾಜಿಸಲಾಗಿದೆ.
ಉದ್ಯೋಗ ನಷ್ಟದ ಭೀತಿ
ಈಗಾಗಲೇ ಸಾಕಷ್ಟು ಸಣ್ಣ ಹೋಟೆಲ್ಗಳು ಮುಚ್ಚಿರುವುದರಿಂದ ಅಲ್ಲಿ ಕೆಲಸ ಮಾಡುವ ಕಾರ್ವಿುಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸ್ಥಳೀಯ ಎಲ್ಪಿಜಿ ಉತ್ಪಾದನೆ ಹೆಚ್ಚಳ
ಮನೆಗಳಿಗೆ ಪೈಪ್ಲೈನ್ ಮೂಲಕ ಸರಬರಾಜಾಗುವ ಅನಿಲ (ಪಿಎನ್ಜಿ) ಮತ್ತು ವಾಹನಗಳಿಗೆ ಬಳಸುವ ಸಿಎನ್ಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದ ಹಾಗೆ ನೂರಕ್ಕೆ ನೂರರಷ್ಟು ಆದ್ಯತೆ ನೀಡಲು ಅಧಿಕಾರಿಗಳಿಗೆ ಮತ್ತು ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ದೇಶೀಯವಾಗಿ ಎಲ್ಪಿಜಿ ಉತ್ಪಾದನೆ ಹೆಚ್ಚಿಸುವಂತೆ ತೈಲ ಶುದ್ಧೀಕರಣ ಘಟಕಗಳಿಗೂ ಸೂಚಿಸಿದ್ದು, ಈಗಾಗಲೇ ಎಲ್ಪಿಜಿ ಉತ್ಪಾದನೆಯಲ್ಲಿ ಶೇ. 10ರಷ್ಟು ಹೆಚ್ಚಳ ಕಂಡುಬಂದಿದೆ.
ಅಕ್ರಮ ಮಾರಾಟ ಹಲವು ಬಗೆ..
ಕೆಲವೆಡೆ ಸಬ್ಸಿಡಿ ದರದ, 14.2 ಕೆಜಿ ತೂಕದ ಗೃಹಬಳಕೆಯ ಸಿಲಿಂಡರ್ಗಳಿಂದ ಅನಿಲವನ್ನು ಅಕ್ರಮವಾಗಿ ವಾಣಿಜ್ಯ ಸಿಲಿಂಡರ್ಗಳಿಗೆ ತುಂಬಿಸಿ ಹೋಟೆಲ್ಗಳಿಗೆ ಮಾರಾಟ ಮಾಡಲಾಗುತ್ತಿದೆ. ಆಮದು ಮಾಡಿಕೊಂಡ ಎಲ್ಪಿಜಿಯನ್ನು ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ನೀಡಬೇಕೆಂಬ ನಿಯಮವಿದ್ದರೂ, ಅದನ್ನು ಅಕ್ರಮವಾಗಿ ಖಾಸಗಿ ಏಜೆಂಟ್ಗಳ ಮೂಲಕ ಹೆಚ್ಚಿನ ಬೆಲೆಗೆ ಹೋಟೆಲ್ಗಳಿಗೆ ಡೈವರ್ಟ್ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಗೃಹಬಳಕೆಗೆ ಆದ್ಯತೆ ವಾಣಿಜ್ಯಕ್ಕೆ ಕಡಿವಾಣ
ಸಾಮಾನ್ಯ ಜನರ ಅಡುಗೆಮನೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ನಿಲ್ಲದಂತೆ ಎಚ್ಚರ ವಹಿಸಿದೆ. ಮನೆಬಳಕೆಗೆ ಸಾಕಷ್ಟು ಅಡುಗೆ ಅನಿಲ ಲಭ್ಯವಿರುವಂತೆ ಮಾಡುವುದಕ್ಕಾಗಿ ವಾಣಿಜ್ಯ ಸಿಲಿಂಡರ್ಗಳ ವಿತರಣೆಯ ವೇಗವನ್ನು ಕಂಪನಿಗಳು ತಾತ್ಕಾಲಿಕವಾಗಿ ಕಡಿಮೆ ಮಾಡಿವೆ.
ಅಗತ್ಯ ವಸ್ತುಗಳ ಕಾಯ್ದೆಯಡಿ ಜಿಲ್ಲಾಡಳಿತಗಳಿಗೆ ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಲು ಮತ್ತು ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ. ತೈಲ ಕಂಪನಿಗಳು ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹೋಟೆಲ್ ಮತ್ತು ಗ್ಯಾಸ್ ಏಜೆನ್ಸಿಗಳ ಮೇಲೆ ಹಠಾತ್ ತಪಾಸಣೆ ನಡೆಸಬೇಕೆಂದು ಸೂಚಿಸಿದೆ.
25 ದಿನಗಳ ಅಂತರದ ನಿಯಮ ಏಕೆ?: ಗೃಹಬಳಕೆಯ ಸಿಲಿಂಡರ್ಗಳ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ಮಾರಾಟವನ್ನು ತಡೆಯಲು ಕೇಂದ್ರ ಸರ್ಕಾರ ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಕನಿಷ್ಠ 25 ದಿನಗಳ ಕಾಲಾವಕಾಶ ಇರಬೇಕು ಎಂದು ನಿಯಮ ರೂಪಿಸಿದೆ.
ವೆಚ್ಚ ದಿಢೀರ್ ಹೆಚ್ಚಳ: ಈ ಎಲ್ಲ ಬೆಳವಣಿಗೆಗಳು ಸಾಮಾನ್ಯ ಜನರ ದೈನಂದಿನ ಮತ್ತು ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರುತ್ತಿವೆ. ಕೆಲವು ನಗರಗಳಲ್ಲಿ ಪಿಜಿ ಮಾಲೀಕರು ಇದೇ ನೆಪದಲ್ಲಿ ಮಾಸಿಕ ಬಾಡಿಗೆಯನ್ನು -500 ರೂಪಾಯಿಯಿಂದ 1,000ದಷ್ಟು ಹೆಚ್ಚಿಸಿದ್ದಾರೆ.
ಪ್ರತಿದಿನ ಹೋಟೆಲ್ನಲ್ಲಿ ಊಟ ಮಾಡುವ ಬ್ಯಾಚಲರ್ಗಳು ಮತ್ತು ಕಾರ್ವಿುಕರ ತಿಂಗಳ ಬಜೆಟ್ ಈ ಬಾರಿ -1,500ರೂಪಾಯಿಯಿಂದ-2,500ರವರೆಗೆ ಹೆಚ್ಚಾಗುವ ಸಾಧ್ಯತೆ ಇದೆ.