ನವದೆಹಲಿ: ಭಾರತ ಸರ್ಕಾರದ ಬೆಂಬಲಿತ ಭಾರತ್ ಟ್ಯಾಕ್ಸಿ ಆ್ಯಪ್ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಹೌದು, ಈ ಆ್ಯಪ್‌ಗೆ ಈಗಾಗ್ಲೇ 4 ಲಕ್ಷಕ್ಕೂ ಹೆಚ್ಚು ಬಳಕೆದಾರರು ನೋಂದಣಿ ಮಾಡಿಕೊಂಡಿದ್ದು, ಕಳೆದ ಎರಡು ದಿನಗಳಲ್ಲಿ ಪ್ರತಿ ದಿನ ಸುಮಾರು 40,000 ರಿಂದ 45,000 ಹೊಸ ಬಳಕೆದಾರರು ಸೇರ್ಪಡೆಯಾಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದು ಆ್ಯಪ್‌ನ ಜನಪ್ರಿಯತೆಯನ್ನು ತೋರಿಸುತ್ತದೆ ಮತ್ತು 2026ರಲ್ಲಿ ದೇಶಾದ್ಯಂತ ವಿಸ್ತರಣೆಗೆ ಸಿದ್ಧತೆ ನಡೆಸುತ್ತಿದೆ. ಭಾರತ್ ಟ್ಯಾಕ್ಸಿ ಏನು ಎಂಬುದು ತಿಳಿಯೋಣ..
ಏನಿದು ಟ್ಯಾಕ್ಸಿ ಆ್ಯಪ್..?
ಇದು ಭಾರತದ ಮೊದಲ ಸಹಕಾರಿ ಮಾದರಿಯ ರೈಡ್-ಹೇಲಿಂಗ್ ಆ್ಯಪ್ ಆಗಿದ್ದು, ಸಹಕಾರ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್ ನಡೆಸುತ್ತದೆ. ಅಮುಲ್ (ಜಿಸಿಎಂಎಂಎಫ್), ಐಎಫ್‌ಎಫ್‌ಸಿಒ, ಕೃಭಕೋ, ನಾಬಾರ್ಡ್, ಎನ್‌ಡಿಡಿಬಿ ಮುಂತಾದ ಪ್ರಮುಖ ಸಹಕಾರಿ ಸಂಸ್ಥೆಗಳ ಬೆಂಬಲವಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ "ಸಹಕಾರ್ ಸೇ ಸಮೃದ್ಧಿ" ದೃಷ್ಟಿಯಡಿ ಇದನ್ನು ಆತ್ಮನಿರ್ಭರ ಭಾರತದ ಭಾಗವಾಗಿ ಪರಿಚಯಿಸಲಾಗಿದೆ. ಓಲಾ, ಊಬರ್ ನಂತಹ ಖಾಸಗಿ ಆ್ಯಪ್‌ಗಳಿಗೆ ಪರ್ಯಾಯವಾಗಿ ಇದು ಚಾಲಕರ ಹಿತವನ್ನು ರಕ್ಷಿಸುವ ಮಾದರಿಯನ್ನು ಹೊಂದಿದೆ.
ವಿಶೇಷತೆಗಳು
ಶೂನ್ಯ ಕಮಿಷನ್: ಚಾಲಕರು ಪ್ರತಿ ರೈಡ್‌ನಿಂದ 100% ಹಣ ಪಡೆಯುತ್ತಾರೆ. ಖಾಸಗಿ ಆ್ಯಪ್‌ಗಳು 20-30% ಕಮಿಷನ್ ಪಡೆಯುವುದಕ್ಕೆ ವ್ಯತಿರಿಕ್ತವಾಗಿ ಇದು ಚಾಲಕರಿಗೆ ಪೂರ್ಣ ಆದಾಯ ನೀಡುತ್ತದೆ.
ಸುರಕ್ಷತೆ: ಪೊಲೀಸ್ ವೆರಿಫೈಡ್ ಚಾಲಕರು, ತುರ್ತು ಬಟನ್, ಎಮರ್ಜೆನ್ಸಿ ಕಾಂಟ್ಯಾಕ್ಟ್‌ಗಳು, ಸೈರನ್ ಮುಂತಾದ ಸೌಲಭ್ಯಗಳು.
ಸರಳ ಬುಕಿಂಗ್: ಕ್ಯಾಬ್, ಆಟೋ, ಬೈಕ್ ಟ್ಯಾಕ್ಸಿ, ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ರೈಡ್ ಆಯ್ಕೆಗಳು. ರಿಯಲ್-ಟೈಮ್ ಟ್ರ್ಯಾಕಿಂಗ್, ಮಲ್ಟಿ-ಲ್ಯಾಂಗ್ವೇಜ್ ಬೆಂಬಲ, 24/7 ಕಸ್ಟಮರ್ ಸಪೋರ್ಟ್ ಇರುತ್ತದೆ.
ಯಾವ ನಗರಗಳಲ್ಲಿ ಲಭ್ಯ..?
ಭಾರತ್ ಟ್ಯಾಕ್ಸಿ ಒಮ್ಮೆ ಆರಂಭವಾದರೆ, ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾದಂತಹ ಪ್ರಮುಖ ಮಹಾನಗರಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ದೆಹಲಿ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಪ್ರಾಯೋಗಿಕ ಚಾಲನೆಗಳು ಮತ್ತು ಆರಂಭಿಕ ಪರೀಕ್ಷೆಗಳು ನಡೆದಿವೆ ಎಂದು ವರದಿಯಾಗಿದೆ.
2025ರ ಡಿಸೆಂಬರ್‌ನಲ್ಲಿ ದೆಹಲಿ ಮತ್ತು ಗುಜರಾತ್‌ನಲ್ಲಿ ಪೈಲಟ್ ಆರಂಭವಾಗಿ, ಈಗಾಗ್ಲೇ 1.4 ಲಕ್ಷಕ್ಕೂ ಹೆಚ್ಚು ಚಾಲಕರು ನೋಂದಣಿ ಮಾಡಿಕೊಂಡಿದ್ದಾರೆ. ಸಾಫ್ಟ್ ಲಾಂಚ್‌ನಲ್ಲಿ ದಿನಕ್ಕೆ ಸರಾಸರಿ 5,500 ರೈಡ್‌ಗಳು ನಡೆದಿವೆ. ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 9ನೇ ಸ್ಥಾನ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ 13ನೇ ಸ್ಥಾನ ಪಡೆದಿದೆ,(ಏಜೆನ್ಸೀಸ್).