ಪುಟ್ಟ ಶಾಲಾ ಬಾಲಕಿ ನಿರ್ಗತಿಕ ವ್ಯಕ್ತಿಯ ಕೈಗೆ ರಾಖಿ ಕಟ್ಟುತ್ತಿರುವ ಭಾವುಕ ದೃಶ್ಯ 
ದೇಶ

ಭಿಕ್ಷುಕನಿಗೆ ರಾಖಿ ಕಟ್ಟಿದ ಬಾಲಕಿ ... ಆತ ಕೊಟ್ಟ ಉಡುಗೊರೆ ಕಂಡು ನೆಟ್ಟಿಗರು ಭಾವುಕ! | Rakhi from a girl to a beggar

ಪ್ರಮುಖ ಮುಖ್ಯಾಂಶಗಳು

  • ನಿರ್ಗತಿಕ ವ್ಯಕ್ತಿಗೆ ರಾಖಿ ಕಟ್ಟಿದ ಪುಟ್ಟ ಶಾಲಾ ಬಾಲಕಿ
  • ರಾಖಿಗೆ ಪ್ರತಿಯಾಗಿ ಬಾಲಕಿ ಉಡುಗೊರೆ ನೀಡಿದ ವ್ಯಕ್ತಿ
  • ಬಾಲಕಿಯ ನಿಷ್ಕಲ್ಮಶ ಪ್ರೀತಿ ಕಂಡು ಭಾವುಕರಾದ ಭಿಕ್ಷುಕ
Raksha Bandhan:  ರಕ್ಷಾಬಂಧನ ಅಂದರೆ ಅಣ್ಣ-ತಂಗಿಯ ನಡುವಿನ ಪ್ರೀತಿ, ಅಕ್ಕರೆ ಮತ್ತು ಬಾಂಧವ್ಯದ ಹಬ್ಬ. ಆದರೆ ಕೆಲವೊಮ್ಮೆ ರಕ್ತ ಸಂಬಂಧವಿಲ್ಲದವರ ನಡುವೆಯೂ ಮಾನವೀಯತೆಯೊಂದು ಹೊಸ ಬಾಂಧವ್ಯವನ್ನು ಬೆಸೆಯುತ್ತದೆ.  ಇದೀಗ ಅಂಥದ್ದೇ ಒಂದು ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣಂಚಿನಲ್ಲಿ ನೀರು ತರಿಸಿದೆ.
 ವೈರಲ್​ ವಿಡಿಯೋದಲ್ಲಿ, ರಕ್ಷಾಬಂಧನದ ಮುನ್ನಾದಿನ ರಸ್ತೆಯ ಬದಿಯಲ್ಲಿರುವ ಅಂಗಡಿಯೊಂದರ ಮುಂದೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮಾನಸಿಕವಾಗಿ ಅಸ್ವಸ್ಥರಂತೆ ಕಾಣುತ್ತಿದ್ದ ನಿರ್ಗತಿಕ ವ್ಯಕ್ತಿಯೊಬ್ಬರು ಕೈಯಲ್ಲಿ ರಾಖಿ ಹಿಡಿದುಕೊಂಡು, ಯಾರಾದರೂ ತಮ್ಮ ಕೈಗೆ ರಾಖಿ ಕಟ್ಟುವಂತೆ ಅಲ್ಲಿದ್ದವರ ಬಳಿ ಮನವಿ ಮಾಡುತ್ತಿದ್ದರು.
ಆದರೆ ವ್ಯಕ್ತಿಯ ಇದ್ದ ಸ್ಥಿತಿ ಕಂಡು ರಸ್ತೆಯಲ್ಲಿ ಓಡಾಡುತ್ತಿದ್ದ ಹಲವರು ಅವರ ಬಳಿ ಹೋಗಲು ಹಿಂದೇಟು ಹಾಕಿದ್ದಾರೆ. ಇದೇ ವೇಳೆ ಶಾಲಾ ಸಮವಸ್ತ್ರ ಧರಿಸಿದ್ದ ಪುಟ್ಟ ಬಾಲಕಿ ಅವರ ಅಲ್ಲಿಗೆ ಬಂದಿದ್ದಾಳೆ. ಮೊದಲಿಗೆ ಕೊಂಚ ಹಿಂಜರಿದ ಬಾಲಕಿ, ಬಳಿಕ ಧೈರ್ಯವಾಗಿ ಆ ವ್ಯಕ್ತಿಗೆ ಯಾವುದೇ ಹಿಂಜರಿಕೆಯಿಲ್ಲದೆ ಅವರ ಕೈಗೆ ರಾಖಿ ಕಟ್ಟಿದ್ದಾಳೆ. ಬಾಲಕಿಯ ಈ ನಿಷ್ಕಲ್ಮಶ ಪ್ರೀತಿಯಿಂದ ಆ ವ್ಯಕ್ತಿ ಭಾವುಕರಾಗಿದ್ದಾರೆ.

ಉಡುಗೊರೆ ನೀಡಲು ಏನೂ ಇರಲಿಲ್ಲ

ರಾಖಿ ಕಟ್ಟಿದ ಬಾಲಕಿಗೆ ಉಡುಗೊರೆ ನೀಡಲು ತಮ್ಮ ಬಳಿ ಹಣವಿಲ್ಲದ ವ್ಯಕ್ತಿ, ಆಕೆಯ ಪಾದ ಮುಟ್ಟಿ ನಮಸ್ಕಾರ ಮಾಡಿದ್ದಾನೆ. ಬಳಿಕ ತಾನು ನಡೆಯಲು ಆಸರೆಯಾಗಿದ್ದ ನಡಿಗೆಯ ಕೋಲನ್ನೇ ಬಾಲಕಿಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಬಳಿ ಇದ್ದ ಅಮೂಲ್ಯ ವಸ್ತುವನ್ನೇ ರಾಖಿಯ ಪ್ರತಿಯಾಗಿ ನೀಡಿದ ಆ ಕ್ಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಲಕಿಯ ನಡೆಗೆ ನೆಟ್ಟಿಗರು ಮೆಚ್ಚುಗೆ 

ಹಣದಿಂದ ಖರೀದಿಸಲಾಗದ ಪ್ರೀತಿ ಮತ್ತು ಮಾನವೀಯತೆಯ ಬೆಲೆ ಎಷ್ಟೆಂಬುದನ್ನು ಪುಟ್ಟ ಬಾಲಕಿ ತನ್ನ ನಡೆ ಮೂಲಕ ತೋರಿಸಿದ್ದಾಳೆ. ಮತ್ತೊಂದೆಡೆ, ತನ್ನ ಬದುಕಿಗೆ ಆಧಾರವಾಗಿದ್ದ ವಸ್ತುವನ್ನೇ ಉಡುಗೊರೆಯಾಗಿ ನೀಡಿದ ವ್ಯಕ್ತಿ ಕೂಡ ರಕ್ಷಾಬಂಧನದ ಅರ್ಥವನ್ನು ಮತ್ತೊಂದು ರೀತಿಯಲ್ಲಿ ತೋರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಾಲಕಿಯ ಮಾನವೀಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮನುಷ್ಯತ್ವಕ್ಕೆ ಹಣ ಬೇಕಿಲ್ಲ

‘ಇದೇ ನಿಜವಾದ ರಕ್ಷಾಬಂಧನಕ್ಕೆ, ಮನುಷ್ಯತ್ವಕ್ಕೆ ಹಣ ಬೇಕಿಲ್ಲ’, ‘ಈ ಪುಟ್ಟ ಹುಡುಗಿಯಿಂದ ದೊಡ್ಡ ಪಾಠ ಕಲಿಯಬೇಕು’ ಎಂಬಂತಹ ಪ್ರತಿಕ್ರಿಯೆಗಳು ಬರುತ್ತಿವೆ. ಸಂಬಂಧಗಳು ಕೇವಲ ರಕ್ತದಿಂದಲೇ ಹುಟ್ಟಬೇಕು ಎಂದೇನಿಲ್ಲ. ಕೆಲವೊಮ್ಮೆ ಒಂದು ರಾಖಿ, ಒಂದು ನಗು, ಒಂದು ಮಮತೆಯ ಸ್ಪರ್ಶವೇ ಅಪರಿಚಿತರ ನಡುವೆಯೂ ಸಹೋದರ-ಸಹೋದರಿಯ ಬಾಂಧವ್ಯವನ್ನು ಬೆಳೆಸಬಹುದು. ಈ ಪುಟ್ಟ ಬಾಲಕಿಯ ನಡೆ ಅದಕ್ಕೊಂದು ಸುಂದರ ಉದಾಹರಣೆಯಾಗಿದೆ.