ಜೀವಕ್ಕೆ ಕುತ್ತಾದ ಪಟಾಕಿ ಉದ್ಯಮ 
ದೇಶ

ಜೀವಕ್ಕೆ ಕುತ್ತಾದ ಪಟಾಕಿ ಉದ್ಯಮ

ಪಟಾಕಿ ತಯಾರಿಕೆ ದೇಶದಲ್ಲಿ ದೊಡ್ಡ ಉದ್ಯಮವೇನೋ ಸರಿ. ಆದರೆ, ದೇಶದ ಬಹುತೇಕ ಉದ್ಯಮಗಳು ತಂತ್ರಜ್ಞಾನ ಅಳವಡಿಸಿಕೊಂಡು ಮಾನವ ಹಸ್ತಕ್ಷೇಪ ಕಡಿಮೆ ಮಾಡುತ್ತಿವೆ. ಪಟಾಕಿ ತಯಾರಿಕೆಯಲ್ಲೂ ರಾಸಾಯನಿಕಗಳ ಮಿಶ್ರಣ ಸೇರಿದಂತೆ ಹಲವು ಚಟುವಟಿಕೆಗಳಿಗೆ ತಂತ್ರಜ್ಞಾನದ ನೆರವು ಪಡೆದರೆ, ಅವಘಡಗಳನ್ನು ತಪ್ಪಿಸಬಹುದು. ಆದರೆ, ಇಂಥ ಅಪಾಯಕಾರಿ ಕೆಲಸಕ್ಕೆ ವ್ಯಕ್ತಿಗಳನ್ನೇ ನಿಯೋಜಿಸಲಾಗುತ್ತಿರುವುದು ನಿಜಕ್ಕೂ ದುರಂತ. ಪಟಾಕಿ ತಯಾರಿಕೆ ಕಾರ್ಖಾನೆಗಳಲ್ಲಿ ಮೇಲಿಂದ ಮೇಲೆ ಅವಘಡಗಳು ಸಂಭವಿಸುತ್ತಿದ್ದು, ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ. ಪ್ರತಿಬಾರಿಯೂ ಇಂಥ ಘಟನೆಗಳು ಆದಾಗ ಬಡ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಅವರ ಕುಟುಂಬಗಳ ಸ್ಥಿತಿ ನಿಜಕ್ಕೂ ದಯನೀಯ. ಸುರಕ್ಷಾ ಮಾರ್ಗಸೂಚಿ ಪಾಲಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಅತ್ಯಗತ್ಯ.

ಪಟಾಕಿ ತಯಾರಿಕಾ ಕಾರ್ಖಾನೆಗಳು ಅತ್ಯಂತ ಅಪಾಯಕಾರಿ ವಲಯಗಳಾಗಿರುವುದರಿಂದ, ಅಲ್ಲಿ ಕಟ್ಟುನಿಟ್ಟಾದ ಸುರಕ್ಷಾ ಮಾನದಂಡಗಳನ್ನು ಪಾಲಿಸುವುದು ಅನಿವಾರ್ಯ. ಭಾರತೀಯ ಸ್ಫೋಟಕಗಳ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಈ ಕೆಳಗಿನ ಪ್ರಮುಖ ಸುರಕ್ಷಾ ಕ್ರಮಗಳನ್ನು ಅಳವಡಿಸಬೇಕು.

ಕಾರ್ಖಾನೆಯ ವಿನ್ಯಾಸ ಮತ್ತು ಸ್ಥಳ: ಒಂದು ಉತ್ಪಾದನಾ ಘಟಕದಿಂದ ಮತ್ತೊಂದು ಘಟಕಕ್ಕೆ ನಿರ್ದಿಷ್ಟ ಅಂತರವಿರಬೇಕು. ಇದರಿಂದ ಒಂದು ಕಡೆ ಅನಾಹುತವಾದರೆ ಅದು ಪಕ್ಕದ ಕೊಠಡಿಗಳಿಗೆ ಹರಡುವುದಿಲ್ಲ. ಕೊಠಡಿಗಳಲ್ಲಿ ಸಾಕಷ್ಟು ಕಿಟಕಿಗಳಿರಬೇಕು ಮತ್ತು ಗಾಳಿಯಾಡುವಂತಿರಬೇಕು. ಪ್ರತಿಯೊಂದು ಕೊಠಡಿಯಲ್ಲೂ ಕನಿಷ್ಠ ಎರಡು ನಿರ್ಗಮನ ದಾರಿಗಳಿರಬೇಕು ಮತ್ತು ಅವು ಯಾವಾಗಲೂ ತೆರೆದಿರಬೇಕು.

ಸಿಬ್ಬಂದಿ ಸುರಕ್ಷತೆ: ಕಾರ್ಮಿಕರು ಕಡ್ಡಾಯವಾಗಿ ಹತ್ತಿ ಬಟ್ಟೆಗಳನ್ನು ಧರಿಸಬೇಕು. ರಬ್ಬರ್ ಅಥವಾ ಮರದ ಪಾದರಕ್ಷೆಗಳನ್ನು ಬಳಸಬೇಕು. ಲೋಹದ ಮೊಳೆಗಳಿರುವ ಪಾದರಕ್ಷೆಗಳನ್ನು ಬಳಸಬಾರದು (ಕಿಡಿ ಉಂಟಾಗುವ ಸಾಧ್ಯತೆ ಇರುತ್ತದೆ). ಸ್ಫೋಟಕಗಳನ್ನು ನಿರ್ವಹಿಸುವ ಬಗ್ಗೆ ಎಲ್ಲ ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಿರಬೇಕು.

ಕಾರ್ಯಾಚರಣೆಯ ನಿಯಮಗಳು: ಒಂದು ಕೊಠಡಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಕೆಲಸ ಮಾಡಬಾರದು. ಕೆಲಸ ಮಾಡುವ ಜಾಗದಲ್ಲಿ ಅತಿ ಹೆಚ್ಚು ಪ್ರಮಾಣದ ಮದ್ದುಗುಂಡುಗಳನ್ನು ಸಂಗ್ರಹಿಸಿಡಬಾರದು. ಅಂದಿನ ಕೆಲಸಕ್ಕೆ ಬೇಕಾದಷ್ಟು ಮಾತ್ರ ಇಟ್ಟುಕೊಳ್ಳಬೇಕು. ಅತಿಯಾದ ತಾಪಮಾನ ಇರುವಾಗ ಅಥವಾ ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಅಪಾಯಕಾರಿ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು. ಪ್ರತಿ ಘಟಕದ ಹತ್ತಿರ ನೀರಿನ ಟ್ಯಾಂಕ್‌ಗಳು ಮತ್ತು ಮರಳಿನ ಬಕೆಟ್‌ಗಳನ್ನು ಇಟ್ಟಿರಬೇಕು. ಅಗ್ನಿಶಾಮಕ ಉಪಕರಣಗಳು ಸುಸ್ಥಿತಿಯಲ್ಲಿರಬೇಕು ಮತ್ತು ಅವುಗಳನ್ನು ಬಳಸಲು ಎಲ್ಲರಿಗೂ ತಿಳಿದಿರಬೇಕು. ತುರ್ತು ಸಂದರ್ಭದಲ್ಲಿ ಎಲ್ಲರಿಗೂ ಎಚ್ಚರಿಕೆ ನೀಡಲು ಸೈರನ್ ಅಥವಾ ಅಲಾರಂ ವ್ಯವಸ್ಥೆ ಇರಬೇಕು.

ನಿಷೇಧಿತ ವಸ್ತುಗಳು: ಕಾರ್ಖಾನೆಯ ಆವರಣದೊಳಗೆ ಬೆಂಕಿಪೆಟ್ಟಿಗೆ, ಲೈಟರ್, ಮೊಬೈಲ್ ಫೋನ್ ಮತ್ತು ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಒಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

ಕಾನೂನಾತ್ಮಕ ಕ್ರಮಗಳು: ಕಾರ್ಖಾನೆಯು ಮಾನ್ಯತೆ ಪಡೆದ ಪರವಾನಗಿಯನ್ನು ಹೊಂದಿರಬೇಕು. ನಿಗದಿತ ಕಾಲಮಿತಿಯಲ್ಲಿ ಅಗ್ನಿಶಾಮಕ ದಳದವರಿಂದ ‘ಸುರಕ್ಷತಾ ತಪಾಸಣೆ’ ಮಾಡಿಸಬೇಕು.

ಸುರಕ್ಷಾ ನಿಯಮಗಳ ಉಲ್ಲಂಘನೆ

ಅನಧಿಕೃತ ಘಟಕಗಳು: ಪರವಾನಗಿ ಇಲ್ಲದ ಅನೇಕ ಸಣ್ಣ ಘಟಕಗಳು ಜನವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆ ಇರುವುದಿಲ್ಲ.

ಬಾಲಕಾರ್ಮಿಕರ ಬಳಕೆ: ಸಣ್ಣ ಕೈಗಳು ಪಟಾಕಿ ಸುರುಳಿಗಳನ್ನು ಸಿದ್ಧಪಡಿಸಲು ಅನುಕೂಲ ಎಂಬ ಕಾರಣಕ್ಕೆ ಮತ್ತು ಕಡಿಮೆ ಕೂಲಿಗೆ ಸಿಗುತ್ತಾರೆಂದು ಅಪಾಯಕಾರಿ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.

ಮಿತಿ ಮೀರಿದ ಸಂಗ್ರಹಣೆ: ಅನುಮತಿ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸ್ಫೋಟಕ ರಾಸಾಯನಿಕಗಳನ್ನು ಒಂದೇ ಜಾಗದಲ್ಲಿ ಸಂಗ್ರಹಿಸಿಡುವುದು ಸ್ಫೋಟದ ತೀವ್ರತೆಯನ್ನು ಹೆಚ್ಚಿಸುತ್ತದೆ.

ರಕ್ಷಣಾ ಕವಚಗಳ ಕೊರತೆ: ಕಾರ್ಮಿಕರಿಗೆ ಗ್ಲೌಸ್, ಮಾಸ್ಕ್ ಅಥವಾ ಬೆಂಕಿನಿರೋಧಕ ಬಟ್ಟೆಗಳನ್ನು ನೀಡದಿರುವುದು ದೊಡ್ಡ ತಪ್ಪು.

ತರಬೇತಿಯ ಕೊರತೆ: ರಾಸಾಯನಿಕಗಳನ್ನು ಹೇಗೆ ಸುರಕ್ಷಿತವಾಗಿ ಬೆರೆಸಬೇಕು ಎಂದು ಗೊತ್ತಿಲ್ಲದ ಕೌಶಲರಹಿತ ಕಾರ್ಮಿಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಅಲ್ಲದೆ, ಕೆಲಸಕ್ಕೆ ನೇಮಿಸಿದ ಮೇಲೆ ಅವರಿಗೆ ಸರಿಯಾದ ತರಬೇತಿ ನೀಡದೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ನಿರ್ಲಕ್ಷ್ಯ ಧೋರಣೆ ತಳೆಯುತ್ತಿವೆ.

ದುರಂತಗಳು ಮರುಕಳಿಸುತ್ತಿರುವುದೇಕೆ?

ಪಟಾಕಿ ತಯಾರಿಕೆಯಲ್ಲಿ ಬಳಸುವ ಗಂಧಕ, ಅಲ್ಯೂಮಿನಿಯಂ ಪುಡಿ ಮತ್ತು ಪೊಟ್ಯಾಷಿಯಮ್ ಕ್ಲೋರೈಡ್‌ಗಳು ಅತ್ಯಂತ ಸಂವೇದನಾಶೀಲ ವಸ್ತುಗಳು. ಸಣ್ಣ ಘರ್ಷಣೆ ಅಥವಾ ಉಷ್ಣಾಂಶ ಹೆಚ್ಚಾದರೂ ಇಡೀ ಘಟಕ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಪಟಾಕಿ ಸಿಡಿತದಿಂದ ಮಾತ್ರವಲ್ಲ, ಅದರ ತಯಾರಿಕಾ ಹಂತದಲ್ಲಿಯೂ ಭಾರಿ ಪ್ರಮಾಣದ ವಿಷಕಾರಿ ತ್ಯಾಜ್ಯವು ನೀರು ಮತ್ತು ಗಾಳಿಗೆ ಸೇರುತ್ತದೆ. ಕಾರ್ಮಿಕರು ಯಾವುದೇ ರಕ್ಷಣಾತ್ಮಕ ಕವಚಗಳಿಲ್ಲದೆ ರಾಸಾಯನಿಕಗಳನ್ನು ಬಳಸುವುದರಿಂದ ಶ್ವಾಸಕೋಶದ ಕಾಯಿಲೆಗಳು, ಚರ್ಮದ ಅಲರ್ಜಿ ಮತ್ತು ಕಣ್ಣಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.

ಭೀಕರ ಪರಿಣಾಮಗಳು

ಸ್ಫೋಟದಲ್ಲಿ ಸಿಲುಕಿದವರು ಸುಟ್ಟ ಗಂಭೀರ ಗಾಯಗಳನ್ನು ಅನುಭವಿಸುತ್ತಾರೆ. ಅನೇಕರು ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದು, ಕೈಕಾಲುಗಳನ್ನು ಕಳೆದುಕೊಂಡು ಜೀವನಪರ್ಯಂತ ಪರಾವಲಂಬಿಗಳಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ಪಟಾಕಿ ತಯಾರಿಕೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಬಡತನ ರೇಖೆಗಿಂತ ಕೆಳಗಿರುವವರು. ಮನೆಯ ಯಜಮಾನ ಅಥವಾ ದುಡಿಯುವ ವ್ಯಕ್ತಿ ಸಾವನ್ನಪ್ಪಿದರೆ ಇಡೀ ಕುಟುಂಬ ಆರ್ಥಿಕವಾಗಿ ಕುಸಿದುಹೋಗುತ್ತದೆ. ಸ್ಫೋಟದಿಂದ ಬದುಕುಳಿದವರು ಮತ್ತು ಹತ್ತಿರದ ನಿವಾಸಿಗಳು ತೀವ್ರವಾದ ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ. ಶಬ್ದ ಕೇಳಿದ ತಕ್ಷಣ ಭಯಭೀತರಾಗುತ್ತಾರೆ ಇಲ್ಲವೆ ಗಲಿಬಿಲಿಯಾಗುತ್ತಾರೆ.

ಸ್ಫೋಟದ ಸಮಯದಲ್ಲಿ ಹೊರಬರುವ ವಿಷಕಾರಿ ರಾಸಾಯನಿಕಗಳು (ಗಂಧಕ, ಪೊಟ್ಯಾಷಿಯಂ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್) ವಾಯುಮಂಡಲವನ್ನು ಸೇರಿ ದೀರ್ಘಕಾಲದವರೆಗೆ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತವೆ.

ಅಗತ್ಯ ಕ್ರಮಗಳು

ಪಟಾಕಿ ತಯಾರಿಕೆ ಕಾರ್ಖಾನೆಗಳಲ್ಲಿ ನಿಯಮಿತ ತಪಾಸಣೆ ನಡೆಯಬೇಕು. ಸಂಬಂಧಪಟ್ಟ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ, ಸುರಕ್ಷಾ ಮಾನದಂಡಗಳ ಅಳವಡಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಅಸಡ್ಡೆ ತೋರುವ ಕಾರ್ಖಾನೆ ಆಡಳಿತ ಮಂಡಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

ಜನವಸತಿ ಪ್ರದೇಶಗಳಲ್ಲಿ ಪಟಾಕಿ ತಯಾರಿಕೆ ಅಥವಾ ಪಟಾಕಿ ದಾಸ್ತಾನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಜನವಸತಿ ಪ್ರದೇಶಗಳಲ್ಲಿ ಪಟಾಕಿ ತಯಾರಿಕೆ ಅಥವಾ ಸಂಗ್ರಹದ ನಿದರ್ಶನಗಳು ಕಂಡುಬಂದಲ್ಲಿ ಸ್ಥಳೀಯರು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

ಪಟಾಕಿ ತಯಾರಿಕೆಗೆ ‘ಗ್ರೀನ್ ಫೈರ್ ಕ್ರ್ಯಾಕರ್ಸ್’ (ಹಸಿರು ಪಟಾಕಿ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜಿಸಬೇಕು. ಇದರಿಂದ ಅಪಾಯದ ಪ್ರಮಾಣ ಸ್ವಲ್ಪಮಟ್ಟಿಗಾದರೂ ತಗ್ಗಬಹುದು.

ಇತ್ತೀಚಿನ ಪ್ರಮುಖ ಘಟನೆಗಳು (2024-2026)

ತಮಿಳುನಾಡಿನ ವಿರುಧುನಗರ ಜಿಲ್ಲೆಯ ವನಜಾ ಪಟಾಕಿ ಕಾರ್ಖಾನೆಯಲ್ಲಿ ಏಪ್ರಿಲ್ 19ರಂದು ನಡೆದ ಸ್ಫೋಟದ ಭೀಕರ ಅನಾಹುತದಲ್ಲಿ 25 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ರಜೆ ದಿನವಾದ ಭಾನುವಾರವೂ ಅನುಮತಿಯಿಲ್ಲದೆ ಕೆಲಸ ನಡೆಸುತ್ತಿದ್ದುದು ಈ ದುರಂತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.

ಆಂಧ್ರಪ್ರದೇಶದ ಕಾಕಿನಾಡದ ಪಟಾಕಿ ಕಾರ್ಖಾನೆಯೊಂದರಲ್ಲಿ ಇದೇ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 21 ಜನರು ಮೃತಪಟ್ಟರು. 30 ಜನರು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಈ ಅನಾಹುತ ನಡೆದಿತ್ತು.

ಗುಜರಾತ್‌ನ ಬನಾಸ್ಕಾಂತಾ ದೀಸಾ ಉಪನಗರದ ಪಟಾಕಿ ಗೋದಾಮಿನಲ್ಲಿ 2025ರ ಏಪ್ರಿಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 21 ಜನರು ದುರ್ಮರಣ ಹೊಂದಿದರು. ಮೃತರ ಪೈಕಿ 7ಕ್ಕೂ ಹೆಚ್ಚು ಮಕ್ಕಳು ಸೇರಿದ್ದರು ಎಂಬುದು ನೋವಿನ ಸಂಗತಿ. ಪರವಾನಗಿ ಅವಧಿ ಮುಗಿದಿದ್ದರೂ ಅಕ್ರಮವಾಗಿ ಅಲ್ಯೂಮಿನಿಯಂ ಪೌಡರ್ ಸಂಗ್ರಹಿಸಿದ್ದೇ ಇಲ್ಲಿನ ಸ್ಫೋಟಕ್ಕೆ ಕಾರಣವಾಗಿತ್ತು.

ಮಧ್ಯಪ್ರದೇಶದ ಹರ್ದಾ ನಗರದ ಪಟಾಕಿ ಕಾರ್ಖಾನೆಯಲ್ಲಿ 2024ರ ಫೆಬ್ರವರಿಯಲ್ಲಿ ಸರಣಿ ಸ್ಫೋಟಗಳು ಸಂಭವಿಸಿ 11 ಜನರು ಮರಣ ಹೊಂದಿದರು ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ 15 ಕಿ.ಮೀ. ದೂರದವರೆಗೆ ಭೂಮಿ ಕಂಪಿಸಿದ ಅನುಭವವಾಗಿತ್ತು ಮತ್ತು ಸುತ್ತಮುತ್ತಲಿನ 60ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದವು.