ದೇಶ

ಎಥೆನಾಲ್ ಯುಗ!

ಸಾಂಪ್ರದಾಯಿಕ ಪೆಟ್ರೋಲ್​ಗೆ ಹೋಲಿಸಿದರೆ ಎಥೆನಾಲ್​ನ ಪಳೆಯುಳಿಕೆ ಕಾರ್ಬನ್ ಹೆಜ್ಜೆಗುರುತು (ಫಾಸಿಲ್ ಕಾರ್ಬನ್ ಫುಟ್​ಪ್ರಿಂಟ್) ಗಣನೀಯವಾಗಿ ಕಡಿಮೆ ಇರುತ್ತದೆ. ಇದರ ಬಳಕೆಯಿಂದ ವಾಹನಗಳ ಎಕ್ಸಾಸ್ಟ್​ನಿಂದ ಹೊರಸೂಸುವ ಕಾರ್ಬನ್ ಮೊನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆಯಲ್ಲಿ ಭಾರಿ ಇಳಿಕೆಯಾಗಲಿದೆ.

ಸಾಂಪ್ರದಾಯಿಕ ಪೆಟ್ರೋಲ್​ಗೆ ಹೋಲಿಸಿದರೆ ಎಥೆನಾಲ್​ನ ಪಳೆಯುಳಿಕೆ ಕಾರ್ಬನ್ ಹೆಜ್ಜೆಗುರುತು (ಫಾಸಿಲ್ ಕಾರ್ಬನ್ ಫುಟ್​ಪ್ರಿಂಟ್) ಗಣನೀಯವಾಗಿ ಕಡಿಮೆ ಇರುತ್ತದೆ. ಇದರ ಬಳಕೆಯಿಂದ ವಾಹನಗಳ ಎಕ್ಸಾಸ್ಟ್​ನಿಂದ ಹೊರಸೂಸುವ ಕಾರ್ಬನ್ ಮೊನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಹೊರಸೂಸುವಿಕೆಯಲ್ಲಿ ಭಾರಿ ಇಳಿಕೆಯಾಗಲಿದೆ. ಅಲ್ಲದೆ, ಎಥೆನಾಲ್ ಬಳಕೆ ಹೆಚ್ಚಾಗುವುದರಿಂದ ಕಚ್ಚಾ ತೈಲದ ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಲಿದ್ದು, ವಿದೇಶಿ ವಿನಿಮಯ ಮೀಸಲು ಉಳಿತಾಯವಾಗಲಿದೆ. ಅಮೆರಿಕ ಮತ್ತು ಬ್ರೆಜಿಲ್​ನಂತಹ ದೇಶಗಳಲ್ಲಿ ಫ್ಲೆಕ್ಸ್-ಫ್ಯೂಯಲ್ ತಂತ್ರಜ್ಞಾನದ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದ್ದು, ಅಲ್ಲಿ ಎಥೆನಾಲ್ ಮಿಶ್ರಿತ ಇಂಧನವು ಸಾಕಷ್ಟು ಜನಪ್ರಿಯವಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಅಥವಾ ಸಿಎನ್​ಜಿಯಿಂದಲೂ ಚಲಿಸದ ಹಾಗೂ ಬ್ಯಾಟರಿಯೂ ಇರದ ಕಾರುಗಳು ರಸ್ತೆಗಳಲ್ಲಿ ಓಡಾಡುವುದನ್ನು ಕಾಣಬಹುದು! ಹೌದು, ಕೇಂದ್ರ ಸರ್ಕಾರವು 100% ಎಥೆನಾಲ್-ಮಿಶ್ರಿತ ಇಂಧನದ (ಇ100) ಬಳಕೆಗೆ ಅನುಮೋದನೆ ನೀಡಿದೆ. ಆದಾಗ್ಯೂ, ಕಂಪನಿಗಳು ವಿಶೇಷವಾಗಿ ಇ100 ಇಂಧನದಿಂದ ಚಲಿಸುವಂತೆ ತಯಾರಿಸಿದ ವಾಹನಗಳಲ್ಲಿ ಮಾತ್ರ ಇದನ್ನು ಬಳಸಬಹುದಾಗಿದೆ. ಹೊಸ ನಿಯಮಗಳು ಇಂತಹ ಕಾರುಗಳ ಪರೀಕ್ಷೆ ಹಾಗೂ ಅವುಗಳ ಸಂಚಾರಕ್ಕೆ ಅನುಮತಿ ಪಡೆಯುವ ಹಾದಿಯನ್ನು ಸುಗಮಗೊಳಿಸಿದ್ದು, ಇದರ ಪರಿಣಾಮಗಳೇನು? ಭಾರತದಲ್ಲಿ ಎಥನಾಲ್ ವಾಹನಗಳ ಸಂಖ್ಯೆ ಹೆಚ್ಚಲಿದೆಯೇ? ಈ ಕುರಿತಾದ ಅವಲೋಕನ ಇಲ್ಲಿದೆ.

ಕೇಂದ್ರ ಸರ್ಕಾರವು ಶೇಕಡ 100ರಷ್ಟು ಎಥೆನಾಲ್ ಹೊಂದಿರುವ ಇ100 ಇಂಧನವನ್ನು, ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳಲ್ಲಿ ಬಳಸಲು ಅನುಮತಿ ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989ಕ್ಕೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಮೂಲಕ ಫ್ಲೆಕ್ಸ್-ಫ್ಯುಯೆಲ್, ಎಮಿಷನ್ ಮಾನದಂಡಗಳಲ್ಲಿ ಈಗಾಗಲೇ ಇದ್ದ ಇ85 (85% ಎಥೆನಾಲ್) ಜೊತೆಗೆ ಈಗ ಇ100 ಅನ್ನು ಸಹ ಸೇರಿಸಲಾಗಿದೆ. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವನ್ನು ಬಳಸುವ ವಾಹನಗಳಿಗೆ ಇದು ಅಧಿಕೃತ ನಿಯಂತ್ರಣ ಚೌಕಟ್ಟನ್ನು ಒದಗಿಸುತ್ತದೆ. ಆದರೆ, ಇದರರ್ಥ ವಾಹನ ಸವಾರರು ತಮ್ಮ ಸಾಮಾನ್ಯ ಪೆಟ್ರೋಲ್ ಕಾರುಗಳಲ್ಲಿ ತಕ್ಷಣವೇ ಇ100 ಇಂಧನ ಬಳಸಬಹುದು ಎಂದಲ್ಲ ಅಥವಾ ಭಾರತದ ಎಲ್ಲ ಪೆಟ್ರೋಲ್ ಬಂಕ್​ಗಳಲ್ಲಿ ಈ ಇಂಧನ ತಕ್ಷಣವೇ ಲಭ್ಯವಾಗಲಿದೆ ಎಂದೂ ಅಲ್ಲ. ಸರ್ಕಾರವು ಸ್ಪಷ್ಟಪಡಿಸಿರುವಂತೆ, ಇ85 ಮತ್ತು ಇ100 ಇವುಗಳಿಗಾಗಿಯೇ ಪ್ರಮಾಣೀಕರಿಸಲ್ಪಟ್ಟ ವಾಹನಗಳಿಗೆ ಮಾತ್ರ ಸೀಮಿತ. ಇ20 ಪೆಟ್ರೋಲ್​ನಲ್ಲಿ ಚಲಿಸುವ ಕಾರುಗಳು ಇ85 ಅಥವಾ ಇ100 ಇಂಧನಕ್ಕೆ ಹೊಂದಿಕೊಳ್ಳುವುದಿಲ್ಲ. ವಾಹನ ಸವಾರರು ತಮ್ಮ ವಾಹನದಲ್ಲಿರುವ ಹೊಂದಾಣಿಕೆಯ ಸ್ಟಿಕ್ಕರ್ (ಇಟಞಟಚಠಿಜಿಚಿಜ್ಝಿಜಿಠಿಢ ಠಠಿಜ್ಚಿkಛ್ಟಿ) ಮತ್ತು ಮಾಲೀಕರ ಕೈಪಿಡಿಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ. ಈ ನಿಯಮ ತಿದ್ದುಪಡಿಯು ಇ100 ಇಂಧನಕ್ಕೆ ಹೊಂದಿಕೆಯಾಗುವ ವಾಹನಗಳ ಪ್ರಮಾಣೀಕರಣಕ್ಕೆ ದಾರಿ ಮಾಡಿಕೊಟ್ಟಿದೆಯೇ ಹೊರತು, ದೇಶಾದ್ಯಂತ ಈ ಇಂಧನದ ಮಾರಾಟ ಪ್ರಾರಂಭದ ದಿನಾಂಕವನ್ನು ನಿಗದಿಪಡಿಸಿಲ್ಲ. ಇ100 ಇಂಧನದ ಲಭ್ಯತೆಯು ಅದರ ಪೂರೈಕೆ ಪ್ರಮಾಣ ಮತ್ತು ಪೆಟ್ರೋಲ್ ಬಂಕ್​ಗಳಲ್ಲಿ ಅದನ್ನು ಸಂಗ್ರಹಿಸಿ ವಿತರಿಸಲು ಬೇಕಾಗುವ ಮೂಲಸೌಕರ್ಯಗಳ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿರುತ್ತದೆ.

ಇ100 ಇಂಧನ ಎಂದರೇನು? ಇದು ಇ85ಗಿಂತ ಹೇಗೆ ಭಿನ್ನ?

ಇ100 ಇಂಧನವು 100% ಶುದ್ಧ ಎಥೆನಾಲ್ ಅನ್ನು ಒಳಗೊಂಡಿರುವ ಇಂಧನವಾಗಿದೆ. ಇ85 ಇಂಧನವು 85% ಎಥೆನಾಲ್ ಮತ್ತು ಉಳಿದ 15% ಪೆಟ್ರೋಲ್ ಅಥವಾ ಇತರ ಅನುಮೋದಿತ ಇಂಧನ ಘಟಕಗಳನ್ನು ಒಳಗೊಂಡಿರುತ್ತದೆ. ಎಥೆನಾಲ್ ಎಂಬುದು ಕೃಷಿ ಬೆಳೆಗಳು ಮತ್ತು ಇತರ ಸಸ್ಯ ಆಧಾರಿತ ಕಚ್ಚಾ ವಸ್ತುಗಳಿಂದ ತಯಾರಿಸಲಾಗುವ ಆಲ್ಕೋಹಾಲ್ ಆಧಾರಿತ ಜೈವಿಕ ಇಂಧನವಾಗಿದೆ. ಈ ಎರಡು ಇಂಧನಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳಲ್ಲಿರುವ ಎಥೆನಾಲ್​ನ ಶೇಕಡವಾರು ಪ್ರಮಾಣ. ಎರಡೂ ಇಂಧನಗಳು ಹೊಂದಾಣಿಕೆಯಾಗುವ ವಾಹನಗಳಿಗಾಗಿ ಮಾತ್ರ ಉದ್ದೇಶಿತವಾಗಿವೆ. ಮುಖ್ಯವಾಗಿ, ಇ100 ಅನ್ನು ಬಳಸಲು ವಾಹನದ ಇಂಜಿನ್ ಮತ್ತು ಸಂಪೂರ್ಣ ಇಂಧನ ವ್ಯವಸ್ಥೆಯನ್ನು ಅದಕ್ಕೆ ತಕ್ಕಂತೆ ವಿಶೇಷವಾಗಿ ವಿನ್ಯಾಸಗೊಳಿಸಿರಬೇಕಾಗುತ್ತದೆ.

ಫ್ಲೆಕ್ಸ್-ಫ್ಯುಯೆಲ್ ವಾಹನಗಳು ಎಂದರೇನು? ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ಫ್ಲೆಕ್ಸ್-ಫ್ಯುಯೆಲ್ ವಾಹನಗಳು (ಎಫ್​ಎಫ್​ವಿ) ಪೆಟ್ರೋಲ್ ಮತ್ತು ವಿವಿಧ ಪ್ರಮಾಣದ ಎಥೆನಾಲ್ ಮಿಶ್ರಣಗಳೆರಡರಲ್ಲೂ ಚಲಿಸುವಂತೆ ವಿನ್ಯಾಸಗೊಳಿಸಲಾದ ವಿಶೇಷ ವಾಹನಗಳಾಗಿವೆ. ಇವು ಸಾಂಪ್ರದಾಯಿಕ ಪೆಟ್ರೋಲ್ ಕಾರುಗಳಿಗಿಂತ ಭಿನ್ನವಾಗಿರುತ್ತವೆ. ಇವುಗಳು ಹೆಚ್ಚಿನ ಸಾಂದ್ರತೆಯ ಎಥೆನಾಲ್ ಅನ್ನು ನಿಭಾಯಿಸಬಲ್ಲ ಇಂಧನ ವ್ಯವಸ್ಥೆಯ ಬಿಡಿಭಾಗಗಳು ಮತ್ತು ಸುಧಾರಿತ ಇಂಜಿನ್ ನಿಯಂತ್ರಣಗಳನ್ನು ಹೊಂದಿರುತ್ತವೆ. ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಈ ವಾಹನಗಳು ಒಂದೇ ಇಂಧನ ಟ್ಯಾಂಕ್ ಬಳಸಿ ವಿವಿಧ ಮಿಶ್ರಣಗಳ ಇಂಧನದಲ್ಲಿ ಚಲಿಸಬಲ್ಲವು. ಟ್ಯಾಂಕ್​ನಲ್ಲಿರುವ ಇಂಧನದ ಮಿಶ್ರಣಕ್ಕೆ ಅನುಗುಣವಾಗಿ ಇಂಜಿನ್​ನ ನಿಯಂತ್ರಣ ವ್ಯವಸ್ಥೆಯು ತನ್ನ ಕಾರ್ಯವೈಖರಿಯನ್ನು ತಾನಾಗಿಯೇ ಹೊಂದಿಸಿಕೊಳ್ಳುತ್ತದೆ.

ಪೆಟ್ರೋಲ್ ಕಾರಿನಲ್ಲಿ ಇ100 ಇಂಧನ ಬಳಸಬಹುದೇ?

ಇಲ್ಲ, ಖಂಡಿತವಾಗಿಯೂ ಬಳಸುವಂತಿಲ್ಲ. ವಾಹನವು ಇ100 ಬಳಕೆಗಾಗಿ ಅಧಿಕೃತವಾಗಿ ವಿನ್ಯಾಸಗೊಂಡು ಪ್ರಮಾಣೀಕರಿಸಲ್ಪಟ್ಟಿಲ್ಲದಿದ್ದರೆ ಇದನ್ನು ಬಳಸಲು ಸಾಧ್ಯವಿಲ್ಲ. ಪ್ರಸ್ತುತ ಇರುವ ಪೆಟ್ರೋಲ್ ವಾಹನಗಳ ಮಾಲೀಕರು ತಮ್ಮ ಕಾರುಗಳನ್ನು ಬದಲಾಯಿಸಿಕೊಳ್ಳಬೇಕೆಂದಾಗಲಿ ಅಥವಾ ಇ100ಗೆ ತಕ್ಕಂತೆ ಮಾರ್ಪಡಿಸಿಕೊಳ್ಳಬೇಕೆಂದಾಗಲಿ ಈ ಹೊಸ ನಿಯಮವು ಕಡ್ಡಾಯಗೊಳಿಸುವುದಿಲ್ಲ.

ಸರ್ಕಾರ ಇ100 ಇಂಧನಕ್ಕೆ ಅನುಮತಿ ನೀಡಿದ್ದೇಕೆ?

ಸಾರಿಗೆ ಕ್ಷೇತ್ರದಲ್ಲಿ ಎಥೆನಾಲ್ ಬಳಕೆಯನ್ನು ಹೆಚ್ಚಿಸಲು ಮತ್ತು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತ ಸರ್ಕಾರ ಕೈಗೊಂಡಿರುವ ಬೃಹತ್ ಯೋಜನೆಯ ಭಾಗ ಇದಾಗಿದೆ.

ಆಮದು ಅವಲಂಬನೆ ಇಳಿಕೆ: ಭಾರತವು ಪೆಟ್ರೋಲಿಯಂ ಆಮದಿಗೆ ಭಾರಿ ಮೊತ್ತವನ್ನು ವ್ಯಯಿಸುತ್ತಿದೆ. ಸ್ಥಳೀಯ ಕೃಷಿ ತ್ಯಾಜ್ಯ ಹಾಗೂ ಸಸ್ಯಜನ್ಯ ವಸ್ತುಗಳಿಂದ ಎಥೆನಾಲ್ ಉತ್ಪಾದಿಸುವುದರಿಂದ ದೇಶೀಯ ಉತ್ಪಾದನೆಗೆ ಬಲ ಸಿಗುತ್ತದೆ ಮತ್ತು ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.

ರೈತರಿಗೆ ಆರ್ಥಿಕ ನೆರವು: ಕೃಷಿ ಆಧಾರಿತ ಕಚ್ಚಾ ಸಾಮಗ್ರಿಗಳಿಂದ ಎಥೆನಾಲ್ ತಯಾರಿಸುವುದರಿಂದ ದೇಶದ ರೈತರಿಗೆ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಆದಾಯದ ಅವಕಾಶಗಳು ದೊರೆಯುತ್ತವೆ.

ಎಥೆನಾಲ್ 25 ವರ್ಷಗಳ ಪಯಣ

2001: ತೈಲ ಆಮದನ್ನು ತಗ್ಗಿಸುವ ಉದ್ದೇಶದಿಂದ ಪೆಟ್ರೋಲ್​ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಪ್ರಾಯೋಗಿಕ ಯೋಜನೆ ಆರಂಭ.

2003-06: ಪೆಟ್ರೋಲ್​ನಲ್ಲಿ 5% ಎಥೆನಾಲ್ ಬೆರೆಸುವ ಯೋಜನೆ ಪ್ರಾರಂಭ.

2018: ಪೆಟ್ರೋಲ್​ನಲ್ಲಿ 2030ರ ವೇಳೆಗೆ 20% ಎಥೆನಾಲ್ ಬೆರೆಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿತು.

2021: 20% ಮಿಶ್ರಣದ ಗುರಿ ತಲುಪುವ ಅವಧಿಯನ್ನು 2025-26ಕ್ಕೆ ಇಳಿಸಲಾಯಿತು.

2023: ಪ್ರಧಾನಿ ನರೇಂದ್ರ ಮೋದಿಯವರು 84 ಪೆಟ್ರೋಲ್ ಬಂಕ್​ಗಳಲ್ಲಿ ಇ20 ಇಂಧನಕ್ಕೆ ಚಾಲನೆ ನೀಡಿದರು. ಇದರಲ್ಲಿ 20% ಎಥೆನಾಲ್ ಮತ್ತು 80% ಪೆಟ್ರೋಲ್ ಇರುತ್ತದೆ.

2025: ವಾಹನಗಳ ಮೈಲೇಜ್ ಕಡಿಮೆಯಾಗುತ್ತಿರುವ ಮತ್ತು ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಬಗ್ಗೆ ವಾಹನ ಮಾಲೀಕರಿಂದ ದೂರುಗಳು. ಸೆಪ್ಟೆಂಬರ್​ನಲ್ಲಿ ಸುಪ್ರೀಂ ಕೋರ್ಟ್ ಇ20 ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು.

2026ರ ಅಕ್ಟೋಬರ್: ಪ್ರಮಾಣೀಕೃತ ಫ್ಲೆಕ್ಸ್-ಫ್ಯುಯೆಲ್ ವಾಹನಗಳಲ್ಲಿ ಇ85 ಮತ್ತು ಇ100 ಬಳಕೆಗೆ ಸರ್ಕಾರ ನಿಯಮಗಳನ್ನು ಬದಲಾಯಿಸಿತು

ಇ20 ವಿರುದ್ಧ ಅಪಪ್ರಚಾರ

ಇ20 ವಿರುದ್ಧ ಹಣ ನೀಡಿ ಪ್ರಾಯೋಜಿತ ಅಪಪ್ರಚಾರ (ಪೊ›ಪಗ್ಯಾಂಡಾ) ನಡೆಸಲಾಯಿತು. ಅನಗತ್ಯವಾಗಿ ಗದ್ದಲ ಸೃಷ್ಟಿಸಲಾಯಿತು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ಮೂರು ತಿಂಗಳ ಹಿಂದೆ ಇ20 ಇಂಧನಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು, ಆದರೆ ಈಗ ಆ ವಿರೋಧ ತಣ್ಣಗಾಗಿದೆ ಎಂದಿದ್ದಾರೆ. ಕೇಂದ್ರ ಸರ್ಕಾರವು 100% ಎಥೆನಾಲ್ ಇಂಧನದ (ಇ100) ಬಳಕೆಗೆ ಅನುಮೋದನೆ ನೀಡಿದ ಮರುದಿನವೇ ಗಡ್ಕರಿ ಅವರಿಂದ ಈ ಹೇಳಿಕೆ ಬಂದಿದೆ. ವಾಸ್ತವವಾಗಿ, ಭಾರತದಲ್ಲಿ 20% ಎಥೆನಾಲ್ ಮತ್ತು 80% ಪೆಟ್ರೋಲ್ ಮಿಶ್ರಣದ (ಇ20) ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. 2023ಕ್ಕಿಂತ ಮೊದಲು ತಯಾರಿಸಲಾದ ಪೆಟ್ರೋಲ್ ವಾಹನಗಳ ಮಾಲೀಕರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ, ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಮತ್ತು ಇಂಜಿನ್ ಬಿಡಿಭಾಗಗಳು ಬೇಗನೆ ಹಾಳಾಗುತ್ತಿವೆ ಎಂದು ದೂರಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲ. ದೇಶದಲ್ಲಿ ಇ19 ಹಾಗೂ ಇ20 ಇಂಧನದಿಂದ 20 ಕೋಟಿಗಿಂತ ಅಧಿಕ ದ್ವಿಚಕ್ರ ವಾಹನ, 3 ಕೋಟಿಗಿಂತ ಅಧಿಕ ಕಾರುಗಳು ಚಲಿಸುತ್ತಿವೆ ಎಂದು ಗಡ್ಕರಿ ಹೇಳಿದ್ದಾರೆ.