ಬರೇಲಿ/ಪಿಲಿಭಿತ್: ರಸ್ತೆಯಲ್ಲಿರುವ ಗುಂಡಿಗಳು ಸಾವು-ನೋವಿಗೆ ಕಾರಣವಾಗುತ್ತವೆ ಎಂಬುದು ನಮಗೆಲ್ಲ ಗೊತ್ತು. ಆದರೆ, ಇದೇ ರಸ್ತೆ ಗುಂಡಿಯೊಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರಿಗೆ ಮರುಜೀವ ನೀಡಿದ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವೈದ್ಯಕೀಯ ಲೋಕವೇ ಬೆರಗಾಗುವಂತೆ 'ಬ್ರೈನ್ ಡೆಡ್' (brain dead) ಎಂದು ಘೋಷಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಈಗ ಪ್ರಾಣಾಪಾಯದಿಂದ ಪಾರಾಗಿ ಮನೆಯವರೊಂದಿಗೆ ಮಾತನಾಡುತ್ತಿದ್ದಾರೆ.
ಹೌದು, ಪಿಲಿಭಿತ್‌ನ ನ್ಯಾಯಾಲಯದಲ್ಲಿ ಹಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿರುವ 50 ವರ್ಷದ ವಿನೀತಾ ಶುಕ್ಲಾ ಅವರು ಫೆಬ್ರವರಿ 22 ರಂದು ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಬರೇಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ವಿನೀತಾ ಅವರ ಮೆದುಳು ನಿಷ್ಕ್ರಿಯಗೊಂಡಿದೆ (Brain Dead) ಎಂದು ಘೋಷಿಸಿದ್ದರು. ಅವರ ಗ್ಲ್ಯಾಸ್ಗೋ ಕೋಮಾ ಸ್ಕೇಲ್ (GCS) ಕೇವಲ 3ಕ್ಕೆ ಕುಸಿದಿತ್ತು (ಸಾಮಾನ್ಯವಾಗಿ ಇದು 15 ಇರಬೇಕು). ಅವರ ಕಣ್ಣುಗಳು ಪ್ರತಿಕ್ರಿಯಿಸುತ್ತಿರಲಿಲ್ಲ ಮತ್ತು ಉಸಿರಾಟವೂ ನಿಂತಿತ್ತು. ವೈದ್ಯರು ಬದುಕುಳಿಯುವ ಯಾವುದೇ ಭರವಸೆ ಇಲ್ಲ ಎಂದು ಹೇಳಿದಾಗ, ಪತಿ ಕುಲದೀಪ್ ಕುಮಾರ್ ಶುಕ್ಲಾ ಅವರು ಅಂತಿಮ ಸಂಸ್ಕಾರದ ತಯಾರಿ ನಡೆಸುವಂತೆ ಮನೆಗೆ ತಿಳಿಸಿ, ಆಂಬ್ಯುಲೆನ್ಸ್ ಮೂಲಕ ಪತ್ನಿಯನ್ನು ಮನೆಗೆ ಕರೆತರುತ್ತಿದ್ದರು.
ಹಫೀಜ್‌ಗಂಜ್ ಬಳಿಯ ಪವಾಡ!
ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ಆಂಬ್ಯುಲೆನ್ಸ್ ಚಲಿಸುತ್ತಿದ್ದಾಗ, ಹಫೀಜ್‌ಗಂಜ್ ಬಳಿ ರಸ್ತೆಯಲ್ಲಿದ್ದ ಒಂದು ಭಾರಿ ಗಾತ್ರದ ಗುಂಡಿಗೆ ಆಂಬ್ಯುಲೆನ್ಸ್ ವೇಗವಾಗಿ ಅಪ್ಪಳಿಸಿತು. ಈ ಭೀಕರವಾದ ಆಘಾತ (Violent Jerk) ಇಡೀ ವಾಹನವನ್ನು ಅಲುಗಾಡಿಸಿತು. ಆದರೆ, ಈ ಆಘಾತವೇ ವಿನೀತಾ ಅವರಿಗೆ ಮಂತ್ರದಂತೆ ಕೆಲಸ ಮಾಡಿತು! ಆ ದೊಡ್ಡ ಜರ್ಕ್‌ನಿಂದಾಗಿ ವಿನೀತಾ ಅವರಿಗೆ ಪ್ರಜ್ಞೆ ಮರಳಿತು ಮತ್ತು ತಕ್ಷಣವೇ ಉಸಿರಾಟ ಆರಂಭವಾಯಿತು.
ವೈದ್ಯರು ಹೇಳುವುದೇನು?
ಪತ್ನಿಯು ಉಸಿರಾಡುತ್ತಿರುವುದನ್ನು ಕಂಡ ಪತಿ ತಕ್ಷಣವೇ ಅಂತ್ಯಕ್ರಿಯೆ ರದ್ದುಗೊಳಿಸಿ ಪಿಲಿಭಿತ್‌ನ ನ್ಯೂರೋಸಿಟಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ನ್ಯೂರೋ ಸರ್ಜನ್ ಡಾ. ರಾಕೇಶ್ ಸಿಂಗ್ ಅವರು ಪರೀಕ್ಷಿಸಿದಾಗ, ವಿನೀತಾ ಅವರ ರಕ್ತದಲ್ಲಿ ಮತ್ತು ದುಗ್ಧರಸ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದ ನ್ಯೂರೋಟಾಕ್ಸಿನ್‌ಗಳು (ವಿಷಕಾರಿ ಅಂಶಗಳು) ಇರುವುದು ಪತ್ತೆಯಾಯಿತು.
ಸುಮಾರು ಎರಡು ವಾರಗಳ ತೀವ್ರ ನಿಗಾ ಘಟಕದ (ICU) ಚಿಕಿತ್ಸೆಯ ನಂತರ ವಿನೀತಾ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. "ಇದು ನಿಜಕ್ಕೂ ಪವಾಡ. ರಸ್ತೆಯ ಗುಂಡಿಯಿಂದ ಸಿಕ್ಕ ಆ ತೀವ್ರವಾದ ಆಘಾತವೇ ಅವರ ಮೆದುಳಿನ ಕಾರ್ಯಚಟುವಟಿಕೆಯನ್ನು ಮರುಪ್ರಾರಂಭಿಸಲು ಕಾರಣವಾಗಿರಬಹುದು" ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).