ಕೊಲೆಯಾದ ಯುವಕ (ಎಡ), ಪ್ರಿಯಾ ಸೇಥ್​, ಆಕೆಯ ಪ್ರಿಯಕರ (ಬಲ) 
ದೇಶ

ಟಿಂಡರ್​ ಮ್ಯಾಚ್​, ಸೂಟ್​ಕೇಸ್​, ಮದುವೆ! ಯಾರೀ ಪ್ರಿಯಾ ಸೇಥ್​?​ ಭೀಕರ ಹತ್ಯೆ ಹಿಂದಿರುವ ಕಿರಾತಕಿ ಸಾಮಾನ್ಯ ವಧುವಲ್ಲ...

ಪ್ರಮುಖ ಮುಖ್ಯಾಂಶಗಳು

  • ಜೈಲಿನಲ್ಲಿ ಅರಳಿದ ಅಪರಾಧಿಗಳ ಪ್ರೇಮ, ಈಗ ಮದುವೆಯತ್ತ
  • ಚೆಂದದ ಬೊಂಬೆಯಂತೆ ಕಾಣುವ ಅಪರಾಧಿಯ ಕರಾಳ ಮುಖವಿದು
  • ಈಕೆಯ ಸೂಟ್​ಕೇಸ್​ ಕೊಲೆಯ ಸ್ಟೋರಿ ಕೇಳಿದ್ರೆ ಬೆರಗಾಗೋದು ಖಚಿತ
ರಾಜಸ್ಥಾನ: ಇತ್ತೀಚೆಗಷ್ಟೇ, ಮಾಧ್ಯಮಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ ಕೊಲೆ ಅಪರಾಧಿಗಳ ಮದುವೆ ವಿಚಾರ ಸದ್ಯ ಹಲವರ ಹುಬ್ಬೇರಿಸಿದೆ. ಭೀಕರ ಹತ್ಯೆ ಕೇಸ್​ನಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಪ್ರಿಯಾ ಸೇತ್​, ಇದೀಗ ತಾನಿದ್ದ ಜೈಲಿನ ಸಹ ಖೈದಿಯನ್ನೇ ಪ್ರೀತಿಸಿ, 15 ದಿನಗಳ ಪೆರೋಲ್ ಮೇಲೆ ಆತನೊಂದಿಗೆ ಮದುವೆಯಾಗಲು ಮುಂದಾಗಿದ್ದಾಳೆ. ಇದೆಂಥಾ ವಿಚಿತ್ರ? ಕೊಲೆಗೈದ ಕಿರಾತಕಿಗೆ ಯಾವ ನಂಬಿಕೆ ಮೇಲೆ ಆತ ತಾಳಿ ಕಟ್ಟಲಿದ್ದಾನೆ ಎಂಬ ಪ್ರಶ್ನೆಗಳು ಹಲವರಲ್ಲಿ ಮೂಡಿವೆ. ಈ ಮಧ್ಯೆ, ಪ್ರಿಯಾ ಬಗ್ಗೆ ಒಂದಷ್ಟು ಬೆರಗಾಗಿಸುವ ಸಂಗತಿಗಳು ಈಗ ಬೆಳಕಿಗೆ ಬಂದಿವೆ.    
ಪ್ರಸ್ತುತ, ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೊಲೆಗಾತಿಯ ಮದುವೆಯ ಸಿದ್ಧತೆಗಳು ಸದ್ದಿಲ್ಲದೆ ಸಾಗಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಈಕೆ, ರಾಜಸ್ಥಾನದ ಸಂಗನೇರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೊಲೆ ಅಪರಾಧಿ ಹನುಮಾನ್ ಪ್ರಸಾದ್ ಜತೆಗೆ ಪ್ರೀತಿಯಲ್ಲಿ ಬಿದ್ದು, ಕಂಕಣ ಕಟ್ಟಿಸಿಕೊಳ್ಳಲು ಪೆರೋಲ್​ ಪಡೆದಿದ್ದಾಳೆ. ಇದೇನೋ ಒಂದು ಕಡೆಯಾದರೆ, ಮತ್ತೊಂದೆಡೆ ಈ ಕ್ರಿಮಿನಲ್​ ಮಹಿಳೆಯ ಹಿನ್ನೆಲೆ ತಿಳಿದರೆ ನಿಜಕ್ಕೂ ಎಂಥವರ ಮೈನಡುಗುತ್ತದೆ. 

ಯಾರೀ ಪ್ರಿಯಾ ಸೇಥ್?

ವಧುವಾಗಲು ಸಿದ್ಧವಾಗಿರುವ ಈಕೆಯ ಹೆಸರು ಪ್ರಿಯಾ ಸೇಥ್​(34). ನೋಡಲು ಚೆಂದದ ಬೊಂಬೆಯಂತೆ ಕಾಣುವ ಈ ಕಿರಾತಕಿ ಸಾಮಾನ್ಯ ವಧುವಲ್ಲ ಬಿಡಿ. ಅತ್ಯಂತ ಭಯಾನಕ ಕೊಲೆ ಕೇಸ್​ನಲ್ಲಿ ಅಪರಾಧಿಯಾಗಿರುವ ಪ್ರಿಯಾ, ಟಿಂಡರ್​ ಡೇಟಿಂಗ್​ ಆ್ಯಪ್​ನಲ್ಲಿ ಓರ್ವ ಯುವಕನನ್ನು ಪ್ರೀತಿ ಹೆಸರಲ್ಲಿ ನಂಬಿಸಿ, ಆತನನ್ನು ತನ್ನ ಬಲೆಗೆ ಕಡೆವಿಕೊಂಡು, ಕಡೆಗೆ ಸೂಟ್​ಕೇಸ್​ನಲ್ಲಿ ಯಮಲೋಕಕ್ಕೆ ಕಳುಹಿಸಿದ ಕೊಲೆಗಾತಿ. 

ಏನಿದು ಸೂಟ್​ಕೇಸ್​ ಕೊಲೆ ಕೇಸ್​?

2018ರ ಆರಂಭದಲ್ಲಿ, ಉದ್ಯಮಿ ದುಷ್ಯಂತ್ ಶರ್ಮಾ (27), ಡೇಟಿಂಗ್​ ಆ್ಯಪ್​ನಲ್ಲಿ ಪ್ರಿಯಾ ಸೇಥ್ ಜತೆ ಮ್ಯಾಚ್​ ಮಾಡಿಕೊಂಡ. ಅದಾದ ಬಳಿಕ ಇಬ್ಬರ ನಡುವೆ ಸಾಕಷ್ಟು ಸಂಭಾಷಣೆಗಳು ವಾರಗಳವರೆಗೆ ನಡೆಯಿತು. ಇಬ್ಬರೂ ತಮ್ಮ ತಮ್ಮ ಆಕಾಂಕ್ಷೆ, ಬದುಕು ಮತ್ತು ಪ್ರೀತಿಯ ಬಗ್ಗೆ ಮುಕ್ತವಾಗಿ ಹಂಚಿಕೊಂಡರು. ಈ ಎಲ್ಲ ಬೆಳವಣಿಗೆಯಿಂದ ಪ್ರಿಯಾ ಮೇಲೆ ನಂಬಿಕೆ ಹೆಚ್ಚಿಸಿಕೊಂಡ ದುಷ್ಯಂತ್, ಇವಳೇ ನನಗೆ ರೈಟ್​ ಮ್ಯಾಚ್​ ಎಂದು ಭಾವಿಸಿದ. ಆದರೆ, ಅಲ್ಲಿ ಪ್ರಿಯಾಳದ್ದು ಬೇರೆಯೇ ಲೆಕ್ಕಾಚಾರವಿತ್ತು. ಅದು ಅಮಾಯಕನ ಪ್ರಾಣವನ್ನೇ ಬಲಿಪಡೆದಿದ್ದು ದುರಂತ.
ತನ್ನ ಪ್ರಿಯಕರ ದಿಕ್ಷಾಂತ್ ಕಮ್ರಾ ಜತೆ ಸೇರಿ 21 ಲಕ್ಷ ರೂ. ಸಾಲದ ಸುಳಿಯಲ್ಲಿ ಸಿಲುಕಿದ್ದ ಪ್ರಿಯಾ, ದುಷ್ಯಂತ್​ನನ್ನು ಕಿಡ್ನ್ಯಾಪ್​ ಮಾಡಿ, ಆತನಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದಳು. ಆನ್‌ಲೈನ್‌ನಲ್ಲಿ ಆತನ ಬಯೋದಲ್ಲಿ ಉದ್ಯಮಿ ಎಂದು ತಿಳಿಸಲಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು, ತನ್ನ ಫ್ಲಾಟ್​ಗೆ ಬರುವಂತೆ ಕರೆದ ಪ್ರಿಯಾ, ದುಷ್ಯಂತನನ್ನು ಲಾಕ್​ ಮಾಡಿ, 10 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದಳು. ಇದರಿಂದ ಕಂಗಾಲಾದ ಆತ, ಮುಂದೇನು ಮಾಡಬೇಕೆಂದು ತಿಳಿಯದೆ, ತನ್ನ ತಂದೆಗೆ ಕರೆ ಮಾಡಿ ಸಹಾಯ ಕೋರಿದ.  

ಕತ್ತು ಹಿಸುಕಿದರೂ ಸಾಯಲಿಲ್ಲ...

"ಅಪ್ಪಾ, ಇವರು ನನ್ನನ್ನು ಕೊಲ್ತಾರೆ. ದಯವಿಟ್ಟು 10 ಲಕ್ಷ ರೂ. ಕೊಡಿ" ಎಂದು ದುಷ್ಯಂತ್ ಅಂಗಲಾಚಿದ. ಆದರೆ, ತುರ್ತಾಗಿ ಅಷ್ಟೊಂದು ಹಣ ಹೊಂದಿಸಲು ಪರದಾಡಿದ ದುಷ್ಯಂತ ತಂದೆ, ಕೇವಲ 3 ಲಕ್ಷ ರೂ. ಇದೆ ಎಂದರು. ಆ ಹಣವನ್ನು ತಕ್ಷಣವೇ ಅಪರಾಧಿಗಳ ಖಾತೆಗೆ ವರ್ಗಾಯಿಸಲಾಯಿತು. ಆದರೆ ಇದು ಅವರಿಗೆ ಸಾಕಾಗಲಿಲ್ಲ. ಇವನನ್ನು ಬಿಟ್ಟರೆ, ನಮಗೆ ಅಪಾಯ ಎಂದು ಚಿಂತಿಸಿದ ಕಿಡಿಗೇಡಿಗಳು, ದುಷ್ಯಂತ್​ಗೆ ಥಳಿಸಿ, ಕತ್ತು ಹಿಸುಕಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದರು. 
ಇಷ್ಟಾದರೂ ಸಹ ಆತ ಜೀವಂತವಾಗಿರುವುದು ಕಂಡು ಕಡೆಗೆ ಕತ್ತು ಸೀಳಿಬಿಟ್ಟರು. ದುಷ್ಯಂತ್ ಮೃತಪಟ್ಟ ಬಳಿಕ ಆತನ ದೇಹವನ್ನು ತುಂಡರಿಸಿ, ಸೂಟ್‌ಕೇಸ್‌ನಲ್ಲಿ ತುಂಬಿಸಿ, ಜೈಪುರದ ಹೊರವಲಯದಲ್ಲಿ ಎಸೆದು ಹೋದರು. ಕೆಲವು ದಿನಗಳ ನಂತರ ಸೂಟ್‌ಕೇಸ್ ಪತ್ತೆಯಾದಾಗ, ಆ ಭೀಕರತೆ ಕಂಡು ಇಡೀ ದೇಶವೇ ಬೆಚ್ಚಿಬಿದ್ದಿತು. 

ತಪ್ಪೊಪ್ಪಿಗೆ, ಜೀವಾವಧಿ ಶಿಕ್ಷೆ

2023ರಲ್ಲಿ, ಕೊಲೆಯನ್ನು ನಿರ್ದಯ, ಪೂರ್ವಯೋಜಿತ ಮತ್ತು ಕ್ರೂರ ಎಂದ ಜೈಪುರ ನ್ಯಾಯಾಲಯವು, ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರಿಯಾ ಮತ್ತು ಆಕೆಯ ಸ್ನೇಹಿತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಅಪರಾಧಿಗಳು ಎಂದು ಘೋಷಿಸಿತು. ರಾಜಸ್ಥಾನದ ಸಂಗನೇರ್ ಜೈಲಿಗೆ ಪ್ರಿಯಾಳನ್ನು ಕೋರ್ಟ್​ ವರ್ಗಾಯಿಸಿತು. ಅಲ್ಲಿಂದ ಈ ಪ್ರೀತಿ, ಮದುವೆ ಎಲ್ಲವೂ. ಇಷ್ಟೆಲ್ಲ ಕೇಳಿದ ಮೇಲೆ ಜೈಲಿನಲ್ಲಿ ಆಕೆಯ ಪ್ರೇಮ, ಮದುವೆ ಸುದ್ದಿ ನಿಜಕ್ಕೂ ಮತ್ತೊಂದು ದುರಂತವೇ ಎಂಬುದನ್ನು ಸೂಚಿಸುತ್ತಿದೆ,(ಏಜೆನ್ಸೀಸ್).