ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ
ನವದೆಹಲಿ: ಮುಂದಿನ ಭಾರತೀಯ ಸೇನೆ ಮೂರು ದಳದ ದಕ್ಷಣಾ ಸಿಬ್ಬಂದಿಯ ಮುಖಸ್ಥರಾಗಿ(CDS) ನಿವೃತ್ತ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ಶನಿವಾರ (ಮೇ 09) ನೇಮಕ ಮಾಡಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿ ಮೇ 30 ರಂದು ಪೂರ್ಣಗೊಳ್ಳಲಿದೆ. ಬಳಿಕ ಮುಂದಿನ ಸಿಡಿಎಸ್ ಆಗಿ ಎನ್ ಎಸ್ ರಾಜಾ ಸುಬ್ರಮಣಿ ಅವರನ್ನು ನೇಮಿಸಿದೆ. ಜೊತೆಗೆ ಭಾರತ ಸರ್ಕಾರದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ.
ಅದೇ ರೀತಿ ಮೇ 31ರಂದು ಸೇವೆಯಿಂದ ನಿವೃತ್ತರಾಗಲಿರುವ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರ ಉತ್ತರಾಧಿಕಾರಿಯಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ನೌಕಾಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಪ್ರಸ್ತುತ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು 2025 ಸೆಪ್ಟೆಂಬರ್ 1ರಿಂದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೂ ಮೊದಲು, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಮತ್ತು ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ ಎನ್.ಎಸ್. ರಾಜಾ ಸುಬ್ರಮಣಿ ಅವರು ವಿವಿಧ ಸಂಘರ್ಷ ವಲಯಗಳು ಮತ್ತು ಭೂಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮತ್ತು ಹಲವಾರು ಕಮಾಂಡ್, ಸಿಬ್ಬಂದಿ ಮತ್ತು ಬೋಧನಾ ನೇಮಕಾತಿಗಳನ್ನು ನಿರ್ವಹಿಸಿದ್ದಾರೆ (ಏಜೆನ್ಸೀಸ್).