ಪ್ರಧಾನಿ ಮೋದಿ ಮತ್ತು ಅಯತೊಲ್ಲಾ ಅಲಿ ಖಮೇನಿ 
ದೇಶ

ಕೊನೆಗೂ ಇರಾನ್ ಸುಪ್ರೀಂ ಲೀಡರ್ ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿದ ಕೇಂದ್ರ; ಇರಾನ್ ರಾಯಭಾರಿ ಭೇಟಿಯಾದ ವಿಕ್ರಮ್ ಮಿಶ್ರಿ | Khamenei

ನವದೆಹಲಿ: ಫೆ. 28ರಂದು ಇಸ್ರೇಲ್​-ಅಮೆರಿಕಾದ ಮಿಸೈಲ್ ದಾಳಿಯಲ್ಲಿ ಹತ್ಯೆಯಾದ ಇರಾನ್​ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ(Khamenei) ಅವರ ನಿಧನಕ್ಕೆ ಕೊನೆಗೂ ಇಂದು(ಮಾ. 05) ಕೇಂದ್ರ ಸರ್ಕಾರ ಸಂತಾಪ ಸೂಚಿಸಿದ್ದು, ನವದೆಹಲಿಯಲ್ಲಿರುವ ಇರಾನ್​ ರಾಯಭಾರಿ ಕಚೇರಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಭೇಟಿ ನೀಡಿದ್ದಾರೆ.
ಖಮೇನಿ ಹತ್ಯೆಯಾದ ಬಳಿಕ ಇಸ್ರೇಲ್-ಅಮೆರಿಕಾದ ವಾಯುದಾಳಿಯನ್ನು ಖಂಡಿಸದೇ ಮತ್ತು ಸಂತಾಪ ಸೂಚಿಸದೇ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಮೌನವಹಿಸಿದ್ದರು. ಈ ನಿಲುವನ್ನು ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ಪ್ರಶ್ನಿಸಿ ಕೇಂದ್ರದ ವಿರುದ್ಧ ಕಿಡಿಕಾರಿದ್ದವು.
ಗುರುವಾರ ಮಧ್ಯಾಹ್ನ ವಿಕ್ರಮ್ ಮಿಶ್ರಿ ಇರಾನ್ ರಾಯಭಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿನ ರಾಯಭಾರಿ ಡಾ. ಮೊಹಮ್ಮದ್ ಫತಾಲಿ ಅವರನ್ನು ಭೇಟಿಯಾಗಿ ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಿದ್ದಾರೆ. ಈ ವೇಳೆ ಫತಾಲಿ ಹಿಂದೂ ಮಹಾಸಾಗರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಮೆರಿಕಾವನ್ನು ಕಟುವಾಗಿ ಟೀಕಿಸಿದ್ದಾರೆ ಎನ್ನಲಾಗಿದೆ. ಆದರೆ ಭಾರತ ಈವರೆಗೂ ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನೂ ಫಿನ್​ಲ್ಯಾಂಡ್ ಅಧ್ಯಕ್ಷರ ಜೊತೆಗಿನ ಮಾತುಕತೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತ ಯಾವಾಗಲೂ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕವೇ ಕರೆ ನೀಡಿದೆ. ಎಲ್ಲದಕ್ಕೂ ಮಿಲಿಟರಿ ಕಾರ್ಯಾಚರಣೆ ಪರಿಹಾರವಲ್ಲ ಎಂದಿದ್ದಾರೆ (ಏಜೆನ್ಸೀಸ್).