ಮೃತ ಅಮನ್‌ದೀಪ್ ಸಿಂಗ್ ಮತ್ತು ಕುಟುಂಬ 
ದೇಶ

ಪತ್ನಿ, ಅಪ್ರಾಪ್ತ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಬಿಲ್ಡರ್ | Builder Suicide

ಚಂಡೀಗಢ: ಪಂಜಾಬ್​ನ ಫಿರೋಜ್​ಪುರ ಜಿಲ್ಲೆಯಲ್ಲಿ ಬಿಲ್ಡರ್ ಒಬ್ಬರು(Builder Suicide) ತಮ್ಮ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಗುಂಡು ಹಾರಿಸಿ ಕೊಲೆಗೈದು ಬಳಿಕ, ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ(ಜ. 09) ವರದಿಯಾಗಿದೆ.
ಮೃತರನ್ನು 42 ವರ್ಷದ ಅಮನ್‌ದೀಪ್ ಸಿಂಗ್, ಆತನ ಪತ್ನಿ ಜಸ್ವೀರ್ ಕೌರ್(40) ಹಾಗೂ ಹೆಣ್ಣುಮಕ್ಕಳಾದ ಮನ್ವೀರ್ ಕೌರ್(10) ಮತ್ತು ಪರ್ಮೀತ್ ಕೌರ್ (6) ಎನ್ನಲಾಗಿದೆ. ಮೃತದೇಹಗಳ ಬಳಿ ಪಿಸ್ತೂಲ್ ಪತ್ತೆಯಾಗಿದೆ. ಹೀಗಾಗಿ ಮೊದಲು ಪತ್ನಿ ಮತ್ತು ಮಕ್ಕಳ ಮೇಲೆ ಗುಂಡು ಹಾರಿಸಿ ಕೊಂದು ಬಳಿಕ ಸಿಂಗ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಅಮನ್‌ದೀಪ್ ಸಿಂಗ್ ಒಬ್ಬ ಬಿಲ್ಡರ್ ಮತ್ತು ಫೈನಾನ್ಷಿಯರ್ ಆಗಿದ್ದು, ಸಲೂನ್ ನಡೆಸುತ್ತಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಮನೆಯ ಕೆಲಸಗಾರರು ಬಂದಾಗ ಬಾಗಿಲು ತೆಗೆಯದೇ ಒಳಗೆ ಲಾಕ್ ಇರುವುದನ್ನು ಗಮನಿಸಿದ್ದು, ಬಳಿಕ ನೆರೆಹೊರೆಯವರನ್ನು ಕರೆದು ಬಾಗಿಲು ಹೊಡೆದು ನೋಡಿದಾಗ ಮನೆಯಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಭೂಪಿಂದರ್ ಸಿಂಗ್ ಸಿಧು, ಘಟನೆ ಬಗ್ಗೆ ಪ್ರಕರಣ ದಾಖಲಿಸಕೊಂಡು ಪೊಲೀಸರು ಅಪರಾಧದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ಆರಂಭಿಸಿದ್ದಾರೆ. ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ನಿಯೋಜಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಫಿರೋಜ್‌ಪುರದ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).