- 30 ಸೆಕೆಂಡುಗಳಲ್ಲಿ 34 ಬಾರಿ ಚಾಕುವಿನಿಂದ ಇರಿದು ಬರ್ಬರ ಹತ್ಯೆ
- ಫರಿದಾಬಾದ್‌ನ ಖಾಸಗಿ ಶಾಲೆಯ ಗೇಟ್ ಎದುರೇ ಶಿಕ್ಷಕಿಯ ಕೊಲೆ
- ಕಳೆದ ಎರಡು ವರ್ಷಗಳಿಂದ ಶಿಕ್ಷಕಿಯ ಹಿಂದೆ ಬಿದ್ದಿದ್ದ ಆರೋಪಿ
ಹರಿಯಾಣ: ಖಾಸಗಿ ಶಾಲೆಯ ಶಿಕ್ಷಕಿಯನ್ನು ಶಾಲೆಯ ಗೇಟ್ ಎದುರೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಫರಿದಾಬಾದ್‌ನಲ್ಲಿ ವರದಿಯಾಗಿದೆ. ಮೃತ ಸಂಧ್ಯಾಳನ್ನು (29) ಕೇವಲ 30 ಸೆಕೆಂಡುಗಳಲ್ಲಿ 34 ಬಾರಿ ಚಾಕುವಿನಿಂದ ಇರಿದ ಮುಸುಕುಧಾರಿ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಹಲ್ಲೆಗೈದ ಭಯಾನಕ ಘಟನೆ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬುಧವಾರ ಬೆಳಗ್ಗೆ ಫರಿದಾಬಾದ್‌ನ ಸಿಕ್ರೋನಾ ಗ್ರಾಮದ ಖಾಸಗಿ ಶಾಲೆಗೆ ಬಂದಿದ್ದ ಯುವಕ, ಶಿಕ್ಷಕಿಯ ಹೆಸರನ್ನು ಕೇಳಿ ಮಾತನಾಡಬೇಕಿದೆ ಎಂದು ಹೇಳಿದ. ಶಾಲಾ ಸಿಬ್ಬಂದಿಯ ಸೂಚನೆಯಂತೆ ಸಂಧ್ಯಾ ಗೇಟ್ ಬಳಿ ಬಂದ ಕೂಡಲೇ, ಆರೋಪಿ ತಾನು ತಂದಿದ್ದ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಸಿಸಿಟಿವಿ ದೃಶ್ಯಗಳಲ್ಲಿ, ಆರೋಪಿ ಕೇವಲ ಅರ್ಧ ನಿಮಿಷದಲ್ಲಿ ಶಿಕ್ಷಕಿಯ ಮುಖ, ಕುತ್ತಿಗೆ ಹಾಗೂ ಎದೆ ಭಾಗಕ್ಕೆ 34 ಬಾರಿ ಚಾಕುವಿನಿಂದ ಇರಿದಿದ್ದಾನೆ. ಸಂಧ್ಯಾ ಕಿರುಚಾಟ ಕೇಳಿ ಶಾಲಾ ಸಿಬ್ಬಂದಿ ಸ್ಥಳಕ್ಕೆ ಓಡಿ ಬಂದಿದ್ದೇ ಆದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಆರೋಪಿ ಸಹಾಯಕ್ಕೆ ಬಂದವರ ಮೇಲೆಯೂ ದಾಳಿ ಮಾಡಲು ಯತ್ನಿಸಿದ. ಬಳಿಕ ನಂಬರ್ ಪ್ಲೇಟ್ ಇಲ್ಲದ ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದ.
ಕೊಲೆ ಆರೋಪ ಒಪ್ಪಿಕೊಂಡ ಕಿರಾತಕ
ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ ನಡೆದಿರುವುದು ಸ್ಥಳೀಯರಲ್ಲಿ ಭಾರಿ ಆತಂಕ ಸೃಷ್ಟಿಸಿತು. ಘಟನೆಯ ಬಳಿಕ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಸುಮಾರು ಎರಡೇ ಗಂಟೆಯೊಳಗೆ 21 ವರ್ಷದ ಅಮಿತ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರೀತ್ಸೇ-ಪ್ರೀತ್ಸೇ ಅಂತ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ
ಪ್ರಾಥಮಿಕ ತನಿಖೆಯಲ್ಲಿ, ಅಮಿತ್ ಕಳೆದ ಎರಡು ವರ್ಷಗಳಿಂದ ತನ್ನನ್ನು ಪ್ರೀತಿಸುವಂತೆ ಸಂಧ್ಯಾಳ ಹಿಂದೆ ಬಿದ್ದಿದ್ದನಂತೆ. ಆಕೆಯೊಂದಿಗೆ ಸಲುಗೆ ಬೆಳೆಸಲು ನಿರಂತರವಾಗಿ ಸರ್ಕಸ್ ಮಾಡುತ್ತಿದ್ದನೆಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಮಿತ್ ಕಿರುಕುಳಕ್ಕೆ ಬೇಸತ್ತಿದ್ದ ಸಂಧ್ಯಾ ಕೆಲ ದಿನಗಳ ಹಿಂದಷ್ಟೇ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಸಂಧ್ಯಾ ತನ್ನ ಪ್ರೇಮ ನಿವೇದನೆ ಒಪ್ಪಿಕೊಳ್ಳದೆ ದೂರು ಕೊಟ್ಟ ಕೋಪಕ್ಕೆ, ಆಕೆಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅಮಿತ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಫರಿದಾಬಾದ್ ಖಾಕಿ ಪಡೆ ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕಲು ತನಿಖೆಯನ್ನು ಚುರುಕುಗೊಳಿಸಿದೆ,(ಏಜೆನ್ಸೀಸ್)