ಇತ್ತೀಚೆಗೆ ಫೇಸ್ಬುಕ್ನಲ್ಲಿ ಕನ್ನಡ ಲೇಖಕರೊಬ್ಬರು ಹೀಗೊಂದು ಟಿಪ್ಪಣಿ ಬರೆದಿದ್ದರು: ‘ಯಾರ್ರೀ ಅದು ಡಿಕ್ಷನರಿ ಕಡೆಯವರು... ಬನ್ರಿ ಇಲ್ಲಿ ಸರಿಯಾಗಿ ನೋಟ್ ಮಾಡ್ಕೊಳ್ಳಿ. ಇನ್ನು ಮುಂದೆ Pron ಎಂಬ ಇಂಗ್ಲಿಷ್ ಪದದ ಕನ್ನಡ ಅರ್ಥ ‘ಪ್ರವಣ’ ಎಂದು ತಿಳಿಯತಕ್ಕದ್ದು. ಹಾಗಂತ NJ 66ರಲ್ಲಿ ಹತ್ತಾರು ಬೋರ್ಡಗಳು ಕಾಣಿಸುತ್ತಿವೆ. ಅಲ್ಲಾ ಸಾರ್, ಗೊತ್ತಿಲ್ಲ ಅಂತ ಗೊತ್ತಿಲ್ಲದಿರೋದು ನಮ್ಮ ಈವತ್ತಿನ ಶಿಕ್ಷಣ ವ್ಯವಸ್ಥೆಯ ದೊಡ್ಡ ಸಮಸ್ಯೆ (ನನ್ನನ್ನೂ ಸೇರಿಸಿ ಹೇಳ್ತಿದ್ದೇನೆ). ಇಂತಹದೊಂದು ಬೋರ್ಡ ಬರೆದು, ಅನುಮೋದಿಸಿ, ಮುದ್ರಿಸಿ, ಸ್ಥಾಪಿಸಿದವರ ಧೈರ್ಯ, ಆತ್ಮವಿಶ್ವಾಸಕ್ಕೆ ಉದ್ದಂಡ ನಮಸ್ಕಾರ! ಕನಿಷ್ಠಪಕ್ಷ ಒಬ್ಬರು ಕನ್ನಡಶಾಲೆ ಮೇಷ್ಟ್ರಿಗಾದರೂ ತೋರಿಸಿ ಅಪೂ›ವ್ ಮಾಡಬಹುದಿತ್ತಲ್ಲ? ನಾಚಿಕೆಯಾಗಬೇಕು ಭಾರತದ ರಾಷ್ಟ್ರೀಯ ಹೆದ್ದಾರಿ ನಿಗಮಕ್ಕೆ!’
ಅವರು ಆ ಟಿಪ್ಪಣಿಯ ಜೊತೆಗೆ ಸೂಚನಾಫಲಕದ ಒಂದು ಚಿತ್ರವನ್ನೂ ಹಾಕಿದ್ದರು. ಜತೆಯಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಸಕ್ತ ಅಧ್ಯಕ್ಷರ ಗಮನವನ್ನೂ ಸೆಳೆದಿದ್ದರು, ‘ರಾಷ್ಟ್ರೀಯ ಹೆದ್ದಾರಿ ನಿಗಮದವರು ಕನ್ನಡ ಕಲಿಯಬಹುದಾ ನೋಡಿ’ ಎಂಬ ಕೋರಿಕೆಯೊಂದಿಗೆ. ಸೂಕ್ಷ್ಮವಾಗಿ ಗಮನಿಸಿದರೆ ಆ ಟಿಪ್ಪಣಿಯಲ್ಲಿ ಕನ್ನಡ ಭಾಷೆಯ ಬಗೆಗಿನ ಕಾಳಜಿಗಿಂತ ಹೆಚ್ಚಾಗಿ ಕೇಂದ್ರ ಸರ್ಕಾರದತ್ತ ಕುಹಕ ಮತ್ತು ಕಿಡಿ ಕಾರುವಿಕೆಯೇ ಕಾಣಿಸುತ್ತಿತ್ತು. ಪ್ರವಣ ಎಂಬೊಂದು ಅರ್ಥಹೀನ(?) ಪದ ಬಳಸಿ ರಾಷ್ಟ್ರೀಯ ಹೆದ್ದಾರಿ ನಿಗಮವು ಏನೋ ಮಹಾಪರಾಧ ಮಾಡಿದೆಯೆಂಬಂತೆ ಬಿಂಬಿಸಲಾಗಿತ್ತು. ಅದಕ್ಕೆ ತಕ್ಕಂತೆ ಆ ಟಿಪ್ಪಣಿಗೆ ಬಂದಿದ್ದ ಪ್ರತಿಕ್ರಿಯೆಗಳೂ ಅದೇ ಧಾಟಿಯಲ್ಲಿದ್ದುವು. ಇರಲಿ, ಅವರವರ ವ್ಯಕ್ತಿಗತ ನಿಲುವುಗಳು, ವಿವೇಚನೆ, ಮತ್ತು ತಿಳಿವಳಿಕೆಯ ಮಟ್ಟಗಳು.
ಆದರೆ ಅವರಿಗೆಲ್ಲ ಗೊತ್ತಿಲ್ಲದಿರುವ ನಿಜಾಂಶವೇನೆಂದರೆ, Pronಗೆ ಸಮಾನಾರ್ಥಕವಾಗಿ ‘ಪ್ರವಣ’ ಸರಿಯೇ ಇದೆ! ಅರ್ಥವಷ್ಟೇ ಅಲ್ಲ, ಇವೆರಡು ಪದಗಳಲ್ಲಿ ಧ್ವನಿಸಾದೃಶ್ಯವೂ ಇದೆ. ನಿಘಂಟುತಜ್ಞ ಪೊ›. ಜಿ. ವೆಂಕಟಸುಬ್ಬಯ್ಯನವರ ಸಂಪಾದಕತ್ವದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ Pron ಎಂಬ ಪದಕ್ಕೆ- ಸಂಭವವಿರುವ, ಪ್ರವೃತ್ತಿಯ, ಒಲವುಳ್ಳ, ಗುರಿಯಾಗುವ ಮುಂತಾದ ಅರ್ಥಗಳೊಂದಿಗೆ ‘ಪ್ರವಣ’ ಎಂದು ಕೂಡ ಕೊಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಎಂಟು ಸಂಪುಟಗಳ ಬೃಹತ್ ಕನ್ನಡ-ಕನ್ನಡ ನಿಘಂಟು ತೆರೆದು ನೋಡಿದರೆ ಪ್ರವಣ ಪದಕ್ಕೆ ಇಳಿಜಾರಾದ, ಬಾಗಿದ, ಬಗ್ಗಿರುವ, ಆಸಕ್ತ, ತತ್ಪರ ಇತ್ಯಾದಿ ಅರ್ಥಗಳಿವೆ. ಹಳಗನ್ನಡದಿಂದ ಹಿಡಿದು ಬೇರೆಬೇರೆ ಸಾಹಿತ್ಯಪ್ರಕಾರಗಳಲ್ಲಿ ಈ ಪದ ಬಳಕೆಯಾಗಿರುವ ಉದಾಹರಣೆಗಳೂ ಇವೆ. ಅಲ್ಲದೇ ಇಳಿಜಾರಾದ, ಬಾಗಿರುವ, ಆಸಕ್ತ ಮುಂತಾದ ಅರ್ಥಗಳು ಇಂಗ್ಲಿಷ್ನಲ್ಲಿ Pron ಪದಕ್ಕಿರುವ Naturally inclined to have or do somthing ಎಂಬ ಅರ್ಥಕ್ಕೆ ಅನುಗುಣವಾಗಿಯೇ ಇವೆ. ರಸ್ತೆಯ ಸಂದರ್ಭದಲ್ಲಾದರೆ ಇಳಿಜಾರಾದ ಎಂದು ಭೌತಿಕ ಲಕ್ಷಣವೇ ಆಗಬೇಕಿಲ್ಲ; ಅಪಘಾತ ಸಂಭವಿಸುವಿಕೆಯತ್ತ ಬಾಗಿರುವ, ಅಂದರೆ ಅಪಘಾತದ ಸಂಭವಿಸುವಿಕೆಗೆ ಹೆಚ್ಚು ಅನುಕೂಲಕರ ಮತ್ತು ಸಾಧ್ಯತೆಗಳಿರುವ ಪ್ರದೇಶ ಎಂದು ಕೂಡ ಆಗುತ್ತದೆ. ಅದನ್ನು ‘ಅಪಘಾತ ಪ್ರವಣ ಪ್ರದೇಶ’ ಎಂದು ಪರಿಣಾಮಕಾರಿಯಾಗಿ ಗುರುತಿಸಿದರೆ ತಪ್ಪೇನಿಲ್ಲ. ಮಾತ್ರವಲ್ಲ, ಬರೀ ಕೋಶಗಳೊಳಗೆ ಬೆಚ್ಚಗೆ ಅವಿತುಕೊಂಡಿದ್ದ ಪದವನ್ನು ಅಕ್ಷರಶಃ ಬೀದಿಗೆ ತಂದು ಜನಸಾಮಾನ್ಯರಿಗೆ ಪರಿಚಯಿಸಿದ ರಾಷ್ಟ್ರೀಯ ಹೆದ್ದಾರಿ ನಿಗಮವನ್ನು ಅಭಿನಂದಿಸಿದರೆ ಒಳ್ಳೆಯದು!
ಆದ್ದರಿಂದ, ನಾವು ಕೂಡ ಇಲ್ಲಿ Pronಗೆ ಸಮಾನಾರ್ಥಕವಾಗಿ ‘ಪ್ರವಣ’ ಎಂಬ ಆಯ್ಕೆಗೇ ಪ್ರಾಶಸ್ಱ ನೀಡೋಣ. ಸೂಚಿಸಿದವರು: ಸುಧೀರ ಎಸ್.ಎನ್., ಸುಜನಾ ನಿಟ್ಟೂರು, ವಾಸವಿ ಗುಡೂರ, ಮಾದು ಬಾಲಕೃಷ್ಣ ಕದಂ ಮತ್ತು ಶಿವಶಂಕರ ಪ್ರಭು. ಬಹಳಷ್ಟು ಪ್ರವೇಶಿಕೆಗಳಲ್ಲಿ ಬಂದಿರುವ ‘ಸಂಭವನೀಯ’ (ಶಿವಯೋಗಿ ಸಿಂಧೂರ್, ಭವಾನಿ ಪ್ರಸಾದ್, ಆರ್.ವಿ. ಮೂರ್ತಿ, ಬಿ.ಆರ್. ಚಂದ್ರಮೌಳಿ, ಪ್ರೀತಿ ಸತೀಶ್, ಎನ್.ವಿ. ಶಂಕರ್, ಗಗನ ಮತ್ತು ಜ್ಯೋತಿಕಾ ಶಿವಮೊಗ್ಗ, ಶೋಭಾ ಎಚ್.ಜಿ., ರಾಧಿಕಾ ವಾದಿರಾಜ, ಪರಮೇಶ್ವರ ಭಟ್ಟ, ರಶ್ಮಿ ರಾಜೇಂದ್ರ, ಭ.ನಿಂ. ಗೋಪಿನಾಥ್, ಸಿದ್ದನಗೌಡ ಮುದಿಗೌಡ್ರ, ಎಂ.ಟಿ. ಉಪಾಧ್ಯ ಮತ್ತಿತರರು), ಅಥವಾ ‘ಸಂಭಾವ್ಯ’ (ಚಂದ್ರಶೇಖರ್ ಕೆ., ಬಸವರಾಜ ಅಂಗಡಿ, ಎಂ.ಕೆ. ರಮೇಶ್, ನರಸಿಂಹ ಪ್ರಸಾದ್, ವಿರೂಪಾಕ್ಷಪ್ಪ ಶಾಂತಗೇರಿ, ಅಂಜಲಿ ಬರ್ವೆ, ಎಂ. ಬಾಲಕೃಷ್ಣ ಭಟ್, ದತ್ತಾತ್ರೇಯ ಎನ್., ನಿತ್ಯಾನಂದ ಬ್ರಹ್ಮಾವರ, ಗಾಯತ್ರಿ ಇಂದಾವರ, ಎಸ್.ಕೆ. ಬೇಳೆ, ಮೀನಾಕ್ಷಿ ಟಕ್ಕಳಕಿ, ಶೋಭಾ ಪಿ. ಭಟ್ಟ, ರೇಖಾ ರಾಮಕೃಷ್ಣ, ಗಂಗಾ ದತ್ತಾತ್ರೇಯ ಹೆಗಡೆ, ಡಾ. ವೇಣುಗೋಪಾಲ್, ವಿ. ವಿಜಯೇಂದ್ರ ರಾವ್, ಸೂರಿ ಲಿಂಗದಹಳ್ಳಿ ಮುಂತಾದವರು) ಸಹ ಮಾನ್ಯವೇ. ಕೆಲವರು ‘ಪೀಡಿತ’, ‘ಬಾಧಿತ’ ಪದಗಳನ್ನು ತಿಳಿಸಿದ್ದಾರೆ. ಈಗಾಗಲೇ ನಡೆದಿರುವುದಕ್ಕೆ, ಅಂದರೆ ಭೂತಕಾಲವನ್ನು ಸೂಚಿಸುವುದಕ್ಕೆ ಪೀಡಿತ, ಬಾಧಿತ ಸರಿಹೋಗುತ್ತವೆ. ಏಕೆಂದರೆ ಅವುಗಳಲ್ಲಿ ನಿರ್ದಿಷ್ಟತೆ ಇದೆ. ಆದರೆ Pron ಪದ ಬಳಕೆಯಾಗುವುದು- ನಡೆಯಬಹುದಾದ, ಸಂಭವಿಸಬಹುದಾದ ಎಂದು ಭವಿಷ್ಯತ್ಕಾಲದ ಅರ್ಥದಲ್ಲಿ. ಅಲ್ಲಿ ನಿರ್ದಿಷ್ಟತೆ ಇಲ್ಲ, ಸಂಭವನೀಯತೆ ಮಾತ್ರ ಇರುವುದು.
ಕಳೆದ ಸಲ ಕೇಳಿದ್ದ ಇನ್ನೊಂದು ಪದಪುಂಜ High Drama. ಪದಪುಂಜ ಎಂದಿದ್ದೇಕೆಂದರೆ ಇಂಗ್ಲಿಷ್ನಲ್ಲಿದು ಎರಡು ಪ್ರತ್ಯೇಕ ಪದಗಳಿಂದಾದ ನುಡಿಗಟ್ಟು. ಆದರೆ ಈಗಿನ ಕನ್ನಡ ಸುದ್ದಿಮಾಧ್ಯಮಗಳು ‘ಹೈಡ್ರಾಮಾ’ ಎಂದು ಒಂದೇ ಪದವಾಗಿ ಬಳಸುತ್ತವೆ. ‘ಕೋಲ್ಕತಾದಲ್ಲಿ ಫುಟ್ಬಾಲ್ ಸೂಪರ್ಸ್ಟಾರ್ ಮೆಸ್ಸಿ ಭಾರತ ಭೇಟಿ ವೇಳೆ ಹೈಡ್ರಾಮಾ’, ‘ಚಿಕ್ಕಮಗಳೂರಿನ ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟುವ ಶುಭಗಳಿಗೆಯಲ್ಲಿ ಮಾಜಿ ಪ್ರೇಯಸಿಯಿಂದ ಹೈಡ್ರಾಮಾ’, ‘ಏರ್ಪೋರ್ಟ್ ರ್ಪಾಂಗ್ ರೂಲ್ಸ್ಗೆ ಸಿಡಿದೆದ್ದ ಚಾಲಕರು; ಟೋಲ್ ಬಳಿ ಹೈಡ್ರಾಮಾ’, ‘ಮುಖ್ಯಮಂತ್ರಿ ಕುರ್ಚಿಗೆ ಜಂಗಿಕುಸ್ತಿ; ಉಭಯ ನಾಯಕರ ಬೆಂಬಲಿಗರಿಂದ ಹೈಡ್ರಾಮಾ’ ಮುಂತಾದುವೆಲ್ಲ ಅಚ್ಚುಮೆಚ್ಚಿನವು. ಪ್ರತಿದಿನವೂ ಪತ್ರಿಕೆಗಳಲ್ಲಿ ನೋಡಿ ಅಭ್ಯಾಸ ಆಗಿಹೋಗಿರುವ ತಲೆಬರಹಗಳು. ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿಬೀಳುವ ಭಯದಲ್ಲಿ ಭ್ರಷ್ಟ ಅಧಿಕಾರಿಯೊಬ್ಬ ಕಂತೆಕಂತೆ ಹಣವನ್ನು ಪಾಯಿಖಾನೆಗೆ ಹಾಕಿದ್ದನ್ನೂ ಮಾಧ್ಯಮಗಳು ‘ಹೈಡ್ರಾಮಾ’ ಎಂದೇ ಬಣ್ಣಿಸಿವೆ. ಹೈಡ್ರಾಮಾದಲ್ಲಿ ‘ಡ್ರಾಮಾ’ ಭಾಗವು ನಾಟಕೀಯ ಬೆಳವಣಿಗೆಗಳ ಅಥವಾ ಸುಳ್ಸುಳ್ಳೇ ನಟನೆಯ ದ್ಯೋತಕವೇ ಆಗಿದೆ. ರಾಜಕಾರಣಿಗಳು ಮತ್ತಿತರ ಗಣ್ಯರು ಮಾಡಿದಾಗ- ಅಪ್ಪಿತಪ್ಪಿ ಶಿಕ್ಷೆಗೆ ಗುರಿಯಾದಾಗಲೇ ಅವರಿಗೆ ತೀವ್ರ ಅನಾರೋಗ್ಯ ಕಾಡುವುದು, ಆಸ್ಪತ್ರೆಗೆ ದಾಖಲಾಗುವುದು ಇತ್ಯಾದಿ- ಅದು ಮತ್ತಷ್ಟು ಬಣ್ಣ ಪಡೆಯುತ್ತದೆ. ಎನ್.ಟಿ. ರಾಮರಾವು ಆಂಧ್ರಪ್ರದೇಶದ ರಾಜಕಾರಣದಲ್ಲಿದ್ದಾಗ ಡ್ರಾಮಾರಾವು ಎಂದೇ ಹೆಸರಾಗಿದ್ದರು. ಒಟ್ಟಾರೆಯಾಗಿ ಹೈಡ್ರಾಮಾ ಯಾವುದೇ ಥರದ ನಾಚಿಕೆಯಿಲ್ಲದೆ ಭಂಡತನದಿಂದ ಮಾಡುವುದಾದ್ದರಿಂದ ‘ಭಂಡಾಟ’ ಕನ್ನಡದಲ್ಲಿ ಹೆಚ್ಚು ಸಮಂಜಸ ಪದ ಎನಿಸುತ್ತದೆ. ಸೂಚಿಸಿದವರು: ಅನಿಲಕುಮಾರ ಕೋಣಂದೂರು ಮತ್ತು ವೆಂಕಟೇಶಮೂರ್ತಿ ಕೊಳ್ಳೇಗಾಲ. ಭಂಡತನದ ಪ್ರದರ್ಶನದಲ್ಲಿ ಸಾಕಷ್ಟು ರಂಪ-ರಗಳೆ ಕೂಡ ಇರುವುದರಿಂದ ‘ರಂಪಾಟ’ (ಕಡೂರು ದೇವೇಂದ್ರ) ಸಹ ಹೊಂದುತ್ತದೆ. ಬೇಕಿದ್ದರೆ ಮೇಲೆ ಕೊಟ್ಟಿರುವ ಸುದ್ದಿಶೀರ್ಷಿಕೆಗಳಲ್ಲಿ ಹೈಡ್ರಾಮಾ ಬದಲಿಗೆ ಭಂಡಾಟ/ರಂಪಾಟ ಬಳಸಿ ನೋಡಿ. ಅಲ್ಲದೇ ಬಾಲ್ಯದ ದಿನಗಳಲ್ಲಿ, ಶಾಲೆಗೆ ಹೊರಡುವಾಗಲೇ ತಾತ್ಕಾಲಿಕವಾದೊಂದು ಹೊಟ್ಟೆನೋವು, ಹಲ್ಲುನೋವು, ಕಿವಿನೋವು, ಆ ನೋವು ಈ ನೋವು ತೀವ್ರವಾಗಿ ಕಾಡುತ್ತಿದ್ದದ್ದು, ‘ಆಯ್ತು ಈವತ್ತು ಶಾಲೆಗೆ ಹೋಗುವುದು ಬೇಡ, ಮನೆಯಲ್ಲೇ ಇರು’ ಎಂದು ಅಪ್ಪ-ಅಮ್ಮ ಹೇಳಿದೊಡನೆ ನೋವು ತತ್ಕ್ಷಣವೇ ಮಾಯವಾಗುತ್ತಿದ್ದದ್ದು... ಇದೆಲ್ಲ ನಿಮಗೂ ಇತ್ತಾದರೆ ಹೈಡ್ರಾಮಾ ಅಥವಾ ರಂಪಾಟ ಏನೆಂದು ನಿಮಗೆ ಗೊತ್ತೇ ಇರುತ್ತದೆ! ಬೃಹನ್ನಾಟಕ, ಬೂಟಾಟಿಕೆ, ಅತಿರೇಕ, ದೊಡ್ಡಾಟ, ಕೋಲಾಹಲ ಮುಂತಾದ ಪದಗಳೂ ಕೆಲವು ಪ್ರವೇಶಿಕೆಗಳಲ್ಲಿ ಬಂದಿವೆ. ಆದರೆ ಭಂಡಾಟ-ರಂಪಾಟಗಳಷ್ಟು ಅವು ಸರಿಹೊಂದಲಾರವು.
ಕೊನೆಯದಾಗಿ Standing ovation. ಅತ್ಯುತ್ತಮವಾದೊಂದು ಲಲಿತಕಲಾ ಪ್ರಸ್ತುತಿಯೋ, ಭಾಷಣ ಅಥವಾ ಉಪನ್ಯಾಸವೋ, ಕ್ರೀಡಾಪ್ರದರ್ಶನವೋ ಮುಗಿದಾಗ ಪ್ರೇಕ್ಷಕರೆಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುತ್ತ ಮೆಚ್ಚುಗೆ ಮತ್ತು ಗೌರವ ಸೂಚಿಸುವ ರೀತಿ. ಮೊನ್ನೆ ಇಥಿಯೋಪಿಯಾದ ಸಂಸತ್ತಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮುಗಿಸಿದಾಗ, ಅದರಲ್ಲೂ ಅಲ್ಲಿನ ಅಮ್ಹರಿಕ್ ಭಾಷೆಯಲ್ಲೇ ಸಭಿಕರನ್ನು ವಂದಿಸಿದಾಗ, ಎಲ್ಲರೂ ಎದ್ದು ನಿಂತು ಐದಾರು ನಿಮಿಷಗಳ ಕಾಲ ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟುತ್ತ ಮೆಚ್ಚುಗೆ ಸೂಚಿಸಿದರಲ್ಲ ಆ ರೀತಿ. ಭಾರತದಲ್ಲಿ ಈ ಪದ್ಧತಿ ಅಷ್ಟೇನೂ ರೂಢಿಯಲ್ಲಿಲ್ಲವೆಂದು ಕಾಣುತ್ತದೆ, ಅಮೆರಿಕದಲ್ಲಾದರೆ ಸಂಸತ್ತಿನಲ್ಲಿ ರಾಷ್ಟ್ರಾಧ್ಯಕ್ಷನ ಭಾಷಣಕ್ಕೆ ಎಷ್ಟು ಸರ್ತಿ ಎಲ್ಲರೂ ಎದ್ದುನಿಂತು ಚಪ್ಪಾಳೆ ಸಲ್ಲಿಸಿದರೆನ್ನುವುದು ಆತನ ಜನಪ್ರಿಯತೆಯ ಮಾನದಂಡ ಆಗುವುದಿದೆ. ಮಾರನೆದಿನ ಪತ್ರಿಕೆಗಳಲ್ಲೂ ಅದರ ಉಲ್ಲೇಖವಿರುತ್ತದೆ. ನ್ಯೂಯಾರ್ಕ್ನ
ಬ್ರಾಡ್ವೇ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೆ Standing ovation ಸಿಗುವುದು ಆಶ್ಚರ್ಯವೇ ಅಲ್ಲ, ಅಷ್ಟೂ ಉತ್ಕೃಷ್ಟ ಮಟ್ಟದಲ್ಲಿರುತ್ತವೆ ಆ ಪ್ರಸ್ತುತಿಗಳು. ಒಟ್ಟಾರೆಯಾಗಿ ಲಲಿತಕಲೆಗಳ ಪ್ರಸ್ತುತಿಯ ವಿಚಾರಕ್ಕೆ ಬಂದರೆ, Standing ovation ನಡೆಯಿತೆಂದರೆ ಅದು ಭಾವೋತ್ಕರ್ಷದ ತುರೀಯಾವಸ್ಥೆಯ ಕ್ಷಣ. ಪ್ರೇಕ್ಷಕರಿಗೆ ಕಲೆಯನ್ನು ಮನತುಂಬ ಆಸ್ವಾದಿಸಿದ ಸಂತೃಪ್ತಿಯಾದರೆ, ವೇದಿಕೆಯ ಮೇಲಿರುವ ಕಲಾವಿದರಿಗೆ ತಮ್ಮ ಕಲಾಪ್ರತಿಭೆಯನ್ನು ಸಾದರಪಡಿಸುವಲ್ಲಿ ಉತ್ತುಂಗ ಶಿಖರವೇರಿದ ಧನ್ಯತೆ. ಆದರೆ ಇದು ಅತ್ಯಂತ ಸಹಜವಾಗಿ ಎಂಬಂತೆ ಸಂಭವಿಸಿದರೆ ಸೊಗಸು. ಹಾಗಲ್ಲದೆ ಈಗಿನ ಕೆಲವು ಸಾಂಸ್ಕೃತಿಕ ಸಮಾರಂಭಗಳಲ್ಲಿ, ಸಂಗೀತ-ನಾಟಕ-ಯಕ್ಷಗಾನ ಪ್ರದರ್ಶನಗಳಲ್ಲಿ, ವಾಚಾಳಿ ನಿರೂಪಕರು ‘ಇನ್ನೊಮ್ಮೆ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ’ ಅಂತೆಲ್ಲ ಪ್ರೇಕ್ಷಕರನ್ನು ಕಾಡಿಬೇಡಿ ಪೀಡಿಸಿದರೆ ನಿಜಕ್ಕೂ ಕಿರಿಕಿರಿಯೆನಿಸುತ್ತದೆ.
ಕನ್ನಡದಲ್ಲಿ Standing ovationಗೆ ಸಂವಾದಿಯಾಗಬಲ್ಲ ಒಳ್ಳೊಳ್ಳೆಯ ಪದಗಳು ಓದುಗರಿಂದ ಬಂದಿವೆ. ‘ನಿಲುಮೆಚ್ಚುಗೆ’ (ಸಿ.ಆರ್. ಸೀತಾರಾಘವ, ಅನಂತರಾಮಯ್ಯ ಅಮೃತಹಳ್ಳಿ, ಎಂ.ಕೆ. ಬದರಿನಾಥ್, ಪ್ರಭುಪ್ರಸಾದ್ ನಡುತೋಟ, ಕಸ್ತೂರಿ ನಾಯಕ್), ‘ಬಲ್ಮೆಚ್ಚುಗೆ’ (ಅನಂತಕೃಷ್ಣ ಶಿವಮೊಗ್ಗ), ‘ಮೇರು ಮೆಚ್ಚುಗೆ’ (ಪ್ರಹ್ಲಾದ ಬಿ.ಆರ್.), ‘ಮೇಲ್ಚಪ್ಪಾಳೆ’ (ಜಿ.ಎಚ್. ಸಂಕಪ್ಪ, ಪ್ರಸನ್ನ ಶೆಂಡ್ಯೆ), ‘ನಿಂತೊಪ್ಪಿಗೆ’ (ಗಿರೀಶ ಕೆ.ಎಸ್.), ‘ಹಷೋತ್ಥಾನ’ (ವಾಸುದೇವನ್ ಮೈಸೂರು) ‘ಉತ್ತಿಷ್ಠಾದರ’ (ಪೂರ್ಣಿಮಾ ಭಟ್ ಹಾಸನ)- ಇವೆಲ್ಲವೂ Standing ovationಅನ್ನು ಸಮರ್ಥವಾಗಿ ಪ್ರತಿಬಿಂಬಿಸಬಲ್ಲವು.
ಈ ವಾರದ ಮೂರು ಪದಗಳು:
1. Callsheet : ಚಿತ್ರರಂಗದ ಸುದ್ದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದು. ನಟನಟಿಯರ ಲಭ್ಯತೆಯ ವೇಳಾಪಟ್ಟಿ. ಅದನ್ನು ಹೊಂದಿಸುವುದು ನಿರ್ವಪಕರಿಗೆ ದೊಡ್ಡ ಸವಾಲು.
2. Catalogue : ಪುಸ್ತಕ, ವಸ್ತು, ವ್ಯಕ್ತಿ ಇತ್ಯಾದಿಗಳ ಪಟ್ಟಿ ಸಿದ್ಧಗೊಳಿಸಿಟ್ಟಿರುವುದು. ಕ್ಯಾಟಲಾಗು ಎಂದು ಉಕಾರಕ್ಕೆ ಜೋತುಬೀಳದೆ ಬೇರೆ ಪದ ಸಾಧ್ಯವೇ?
3. Cockpit : ವಿಮಾನದಲ್ಲಿ ಚಾಲಕರು ಕುಳಿತು ವಿಮಾನದ ಚಲನವಲನ ನಿರ್ವಹಿಸಲಿಕ್ಕೆಂದೇ ಇರುವ ಪ್ರತ್ಯೇಕ ಭಾಗ. ಇದಕ್ಕೊಂದು ಕನ್ನಡ ಪದ ಬೇಕಿದೆ.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
-(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)