ತೆಲಂಗಾಣದಲ್ಲಿ 2028ರ ಎಲೆಕ್ಷನ್ ಫೈಟ್ ಈಗಲೇ ಶುರು: ಸಿಎಂ ರೇವಂತ್ ರೆಡ್ಡಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ನಡುವೆ ಜಟಾಪಟಿ! Revanth Reddy Vs Nitin Nabin
ಹೈದರಾಬಾದ್: ತೆಲಂಗಾಣದಲ್ಲಿ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನು 2 ವರ್ಷ ಬಾಕಿ ಇರುವಾಗಲೇ ರಾಜಕೀಯ ರಣಕಣ ರಂಗೇರಿದೆ. ಸಿಎಂ ರೇವಂತ್ ರೆಡ್ಡಿ ಹಾಗೂ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್(Revanth Reddy Vs NitinNabin) ನಡುವೆ ಆರಂಭವಾಗಿರುವ ಶಬ್ದಗಳ ಸಮರ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಬೃಹತ್ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ತೆಲಂಗಾಣ ಸರ್ಕಾರವನ್ನು ದೆಹಲಿ ನಾಯಕರ ವೈಯಕ್ತಿಕ ಎಟಿಎಂ ಎಂದು ಬಿಜೆಪಿ ಟೀಕಿಸಿದರೆ, ನಿತಿನ್ ನವೀನ್ ಅಂದರೆ ಯಾರು ಎಂದೇ ನನಗೆ ಗೊತ್ತಿಲ್ಲ ಎಂದು ರೇವಂತ್ ರೆಡ್ಡಿ ತಿರುಗೇಟು ನೀಡಿದ್ದಾರೆ.
ಮೂರು ದಿನಗಳ ತೆಲಂಗಾಣ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ರಾಜ್ಯದಲ್ಲಿ ಪಕ್ಷದ ಸಂಘಟನಾ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಸಭೆಗಳನ್ನು ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದೇ ಈ ಇಡೀ ವಿವಾದಕ್ಕೆ ಕಿಡಿ ಹೊತ್ತಿಸಿತು.
ಕಾಂಗ್ರೆಸ್ ಸರ್ಕಾರ ದೆಹಲಿಯ 'ಎಟಿಎಂ': ನಿತಿನ್ ನವೀನ್ ವಾಗ್ದಾಳಿ
ಹೈದರಾಬಾದ್‌ನಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, 2024ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಶೇ. 35 ರಷ್ಟು ಮತ ಹಂಚಿಕೆ ಪಡೆದುಕೊಂಡಿರುವುದನ್ನು ನೆನಪಿಸಿದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೇಗೆ ಶೂನ್ಯದಿಂದ ಎದ್ದುಬಂದು ಪ್ರಮುಖ ಶಕ್ತಿಯಾಗಿ ಬೆಳೆಯಿತೋ, ಅದೇ ತಂತ್ರಜ್ಞಾನವನ್ನು ತೆಲಂಗಾಣದಲ್ಲೂ ಬಳಸಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು. ಮುಂಬರುವ 2028ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಅಧಿಕಾರ ಹಿಡಿಯುವುದು ಖಚಿತ. ಇದರ ಮುನ್ನುಡಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೇ ಬರೆಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ನವೀನ್, ರಾಹುಲ್ ಗಾಂಧಿ ಒಬ್ಬ ಪಾರ್ಟ್-ಟೈಮ್ ರಾಜಕಾರಣಿ. ಆದರೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಫುಲ್-ಟೈಮ್ ರಾಜಕಾರಣಿಯಾಗಿದ್ದು, ಜನರ ಸೇವೆ ಮಾಡುತ್ತಾನೆ. ತೆಲಂಗಾಣದ ಇಂದಿನ ಕಾಂಗ್ರೆಸ್ ಸರ್ಕಾರಕ್ಕೆ ಜನರ ಚಿಂತೆಯಿಲ್ಲ. ಅವರಿಗೆ ಕೇವಲ ತಮ್ಮ ಕುಟುಂಬ ಮತ್ತು ದೆಹಲಿ ಹೈಕಮಾಂಡ್ ಮುಖ್ಯವಾಗಿದೆ. ತೆಲಂಗಾಣವನ್ನು ದೆಹಲಿ ನಾಯಕರ ವೈಯಕ್ತಿಕ ಎಟಿಎಂ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
'ನಬಿನ್ ಅಂದರೆ ಯಾರು?': ರೇವಂತ್ ರೆಡ್ಡಿ ವ್ಯಂಗ್ಯ
ಬಿಜೆಪಿ ಅಧ್ಯಕ್ಷರ ಈ ಕಠಿಣ ಆರೋಪಗಳಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತಮ್ಮದೇ ಶೈಲಿಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ನಿತಿನ್ ನಬಿನ್ ಅಂದರೆ ಯಾರು, ಆ ಹೆಸರನ್ನು ನಾನು ಕೇಳಿಯೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಳಿಕ ಬಿಜೆಪಿಯ ಸವಾಲುಗಳನ್ನು ತಳ್ಳಿಹಾಕಿದ ಸಿಎಂ, ಹೊರಗಿನಿಂದ ಯಾರೋ ಬಂದು ರಾಜಕೀಯ ಹಸ್ತಕ್ಷೇಪ ಮಾಡುವುದಕ್ಕೆ ತೆಲಂಗಾಣದ ಜನ ಮರಳಾಗುವುದಿಲ್ಲ. ಬಿಜೆಪಿಯ ಯಾವುದೇ ಸವಾಲುಗಳನ್ನು ಎದುರಿಸಲು ಮತ್ತು ಧೂಳೀಪಟ ಮಾಡಲು ನಮ್ಮ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರೇ ಸಾಕು. ಇದಕ್ಕೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತೆಲಂಗಾಣ ಸಿಎಂ ತಿರುಗೇಟು ನೀಡಿದ್ದಾರೆ.
ರೇವಂತ್ ರೆಡ್ಡಿ ಅಹಂಕಾರದ ಪರಮಾವಧಿ: ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಆಕ್ರೋಶ
ತಮ್ಮ ರಾಷ್ಟ್ರೀಯ ಅಧ್ಯಕ್ಷರನ್ನೇ ಸಿಎಂ ರೇವಂತ್ ರೆಡ್ಡಿ ಲೇವಡಿ ಮಾಡಿರುವುದಕ್ಕೆ ದೆಹಲಿ ಮಟ್ಟದಲ್ಲಿ ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಬಿಜೆಪಿಯ ಪ್ರಮುಖ ಸಂಸದ ಸಂಬಿತ್ ಪಾತ್ರಾ ಅವರು ರೇವಂತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರನ್ನು ಸಿಎಂ ರೇವಂತ್ ರೆಡ್ಡಿ ಸಾರ್ವಜನಿಕವಾಗಿ ಅಪಹಾಸ್ಯ ಮಾಡಲು ಯತ್ನಿಸಿದ್ದಾರೆ. ರೇವಂತ್ ಬಳಸಿರುವ ಪದಗಳು ಆಕ್ಷೇಪಾರ್ಹ ಮತ್ತು ಖಂಡನೀಯ ಮಾತ್ರವಲ್ಲ, ಇದು ಅವರ ಅಹಂಕಾರ ಮತ್ತು ಕಾಂಗ್ರೆಸ್ ಪಕ್ಷದ ಗುಲಾಮಿ ಸಂಸ್ಕೃತಿಯನ್ನು ತೋರಿಸುತ್ತದೆ. ಒಂದೇ ಕುಟುಂಬಕ್ಕೆ ಸಾಷ್ಟಾಂಗ ನಮಸ್ಕಾರ ಹಾಕುವ ಕಾಂಗ್ರೆಸ್ಸಿಗರಿಗೆ ದೇಶದ ಇತರ ನಾಯಕರ ಗೌರವ ತಿಳಿಯುವುದಿಲ್ಲ ಎಂದು ಸಂಬಿತ್ ಪಾತ್ರಾ ಆಕ್ರೋಶ ಹೊರಹಾಕಿದ್ದಾರೆ.
ಮಿಸ್ಟರ್ ರೇವಂತ್ ರೆಡ್ಡಿ ಅವರೇ, ದೇಶದ ಅತಿ ದೊಡ್ಡ ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹೆಸರೇ ನಿಮಗೆ ಗೊತ್ತಿಲ್ಲ ಎಂದಾದರೆ, ನೀವು ಭಾರತೀಯ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಲು ಕೂಡ ಅನರ್ಹರು ಎಂದು ಸಂಬಿತ್ ಪಾತ್ರಾ ತೀಕ್ಷ್ಣವಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ, 2028ರ ಮಹಾಸಮರಕ್ಕೆ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈಗಿನಿಂದಲೇ ಭೀಕರ ಪೋಸ್ಟರ್ ಮತ್ತು ಶಬ್ದಗಳ ಯುದ್ಧ ಆರಂಭವಾಗಿರುವುದಂತೂ ಸತ್ಯ,(ಏಜೆನ್ಸೀಸ್).