Sanju Samson | ಸಂಜು ಸ್ಯಾಮ್ಸನ್ ಮತ್ತು ಭಾರತ ತಂಡದ ಆಟಗಾರರು
ಮುಂಬೈ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್‌ಗಳಿಂದ ಬಗ್ಗು ಬಡಿದ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಸಂಜು ಸ್ಯಾಮ್ಸನ್ರ (Sanju Samson) ಸ್ಫೋಟಕ ಬ್ಯಾಟಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ನೆರವಿನಿಂದ ಟೀಮ್ ಇಂಡಿಯಾ ಜಯ ದಾಖಲಿಸಿದೆ.
ಅಂತಿಮ ಹಂತದವರೆಗೂ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪಂದ್ಯವನ್ನು ಭಾರತ ತಂಡ ತನ್ನ ತೆಕ್ಕಗೆ ಹಾಕಿಕೊಂಡಿದ್ದು, ಪಂದ್ಯದ ಬಳಿಕ ಮಾತನಾಡಿದ ಆರಂಭಿಕ ಆಟಗಾರ ಸ್ಯಾಮ್ಸನ್, ಇಂಗ್ಲೆಂಡ್ ವಿರುದ್ಧದ ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ಬುಮ್ರಾಗೆ ಸಲ್ಲಿಸಿದರು.
ತಂಡ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ತುಂಬಾ ಸಂತೋಷವಾಗಿದೆ, ಎಲ್ಲಾ ಶ್ರೇಯಸ್ಸು ಜಸ್ಪ್ರೀತ್ ಬುಮ್ರಾ ಅವರಿಗೆ ಸಲ್ಲುತ್ತದೆ. ವಿಶ್ವದರ್ಜೆಯ ಬೌಲರ್ ಆಗಿರುವ ಅವರು ಇಂದು ಕೂಡ ಅದನ್ನು ಸಾಬೀತುಪಡಿಸಿದ್ದಾರೆ. ಪಂದ್ಯಶ್ರೇಷ್ಠ ಪ್ರಶಸ್ತಿ ನಿಜಕ್ಕೂ ಅವರಿಗೆ ಸಲ್ಲಬೇಕು. ಬುಮ್ರಾ ಮಾಡಿದ ಆ ಎರಡು ಓವರ್‌ಗಳಿಂದ ಪಂದ್ಯದ ಗತಿಯೇ ಬದಲಾಯ್ತು, ಅವರು ಆ ರೀತಿ ಬೌಲಿಂಗ್ ಮಾಡದಿದ್ದರೆ ನನಗೆ ಈ ಗೌರವ ಸಿಗುತ್ತಿರಲಿಲ್ಲ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಬುಮ್ರಾ ಎಂಬ ಬ್ರಹ್ಮಾಸ್ತ್ರ
ಪಂದ್ಯ ಇಂಗ್ಲೆಂಡ್ ಕೈಜಾರಲು ಮುಖ್ಯ ಕಾರಣ ಜಸ್ಪ್ರೀತ್ ಬುಮ್ರಾ ಎಸೆದ 16ನೇ ಮತ್ತು 18ನೇ ಓವರ್‌ಗಳು. ಈ ಎರಡು ಓವರ್‌ಗಳಲ್ಲಿ ಕೇವಲ 14 ರನ್ ನೀಡಿದ ದಿಗ್ಗಜ ವೇಗಿ, ಭಾರತದ ಗೆಲುವಿನ ಆಸೆಯನ್ನು ಮತ್ತೇ ಚಿಗುರಿಸಿದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಕೂಡ ಉತ್ತಮ ಸಾಥ್ ನೀಡಿ ಭಾರತಕ್ಕೆ 7 ರನ್‌ಗಳ ವಿಜಯ ತಂದುಕೊಟ್ಟರು.
ಸಂಜು ಸುನಾಮಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಆಸರೆಯಾದರು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬೇಗನೆ ಔಟಾದ್ರೂ ಎದೆಗುಂದದ ಸಂಜು, ಕೇವಲ 42 ಎಸೆತಗಳಲ್ಲಿ 89 ರನ್ ಸಿಡಿಸಿ ಇಂಗ್ಲೆಂಡ್ ಬೌಲರ್‌ಗಳನ್ನು ಬೆಂಡೆತ್ತಿದರು. ಇವರ ಈ ಆಕರ್ಷಕ ಇನ್ನಿಂಗ್ಸ್ ನೆರವಿನಿಂದ ಭಾರತ ನಿಗದಿತ ಓವರ್‌ಗಳಲ್ಲಿ 253 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಅಮೋಘ ಆಟಕ್ಕಾಗಿ ಸಂಜು 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.
ವ್ಯರ್ಥವಾಯ್ತು ಬೆಥೆಲ್ ಹೋರಾಟ
ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಫಿಲ್ ಸಾಲ್ಟ್ ಮತ್ತು ಹ್ಯಾರಿ ಬ್ರೂಕ್ ವಿಕೆಟ್ ಬೇಗನೆ ಕಳೆದುಕೊಂಡಿತು. ಆದರೆ ಜೋಸ್ ಬಟ್ಲರ್ ಮತ್ತು ಜಾಕೋಬ್ ಬೆಥೆಲ್ ತಂಡಕ್ಕೆ ಆಸರೆಯಾದರು. ಅದರಲ್ಲೂ ಬೆಥೆಲ್ ಕೇವಲ 48 ಎಸೆತಗಳಲ್ಲಿ 105 ರನ್ ಬಾರಿಸಿ ಇಂಗ್ಲೆಂಡ್ ಇನ್ನಿಂಗ್ಸ್ಗೆ ಜೀವ ತುಂಬಿದರು.
ಫೈನಲ್‌ನಲ್ಲಿ ಕಿವೀಸ್ ಸವಾಲು
ಭಾರತ ತಂಡ ಭಾನುವಾರ (ಮಾ.8) ಅಹಮದಾಬಾದ್‌ನಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ(ಏಜೆನ್ಸೀಸ್).