ಕಿವೀಸ್ ಬ್ಯಾಟರ್‌ಗಳ ನಿದ್ದೆಗೆಡಿಸಿದ ಆ ಆರ್ಮ್ ಬಾಲ್! ಭಾರತದ ಈ ಸ್ಪಿನ್ ಮಾಂತ್ರಿಕನ ಮುಂದೆ ಮಂಡಿಯೂರುತ್ತಾ ನ್ಯೂಜಿಲೆಂಡ್..?
ಅಹಮದಾಬಾದ್: ಕ್ರಿಕೆಟ್ ಲೋಕದ ಮಹಾಕುಂಭ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ತವರು ನೆಲ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ವಿಶ್ವ ಕಿರೀಟಕ್ಕಾಗಿ ಕಾದಾಡಲಿವೆ. ಈ ಮಹಾಕಾಳಗದಲ್ಲಿ ಟೀಮ್ ಇಂಡಿಯಾದ ಗೆಲುವಿನ ಆಶಾಕಿರಣವಾಗಿ ಆಲ್ ರೌಂಡರ್ ಅಕ್ಷರ್ ಪಟೇಲ್(Axar Patel) ಹೊರಹೊಮ್ಮಿದ್ದಾರೆ.
ನ್ಯೂಜಿಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಸೂರ್ಯ ಬತ್ತಳಿಕೆಯಲ್ಲಿರುವ ಅತ್ಯಂತ ಹರಿತವಾದ ಅಸ್ತ್ರವೆಂದರೆ ಅದು ಅಕ್ಷರ್. ಕಿವಿ ಬ್ಯಾಟರ್‌ಗಳ ವಿರುದ್ಧ ಅಕ್ಷರ್ ಹೊಂದಿರುವ ದಾಖಲೆಗಳು ಈಗ ಬ್ಲ್ಯಾಕ್ ಕ್ಯಾಪ್ಸ್ ಪಾಳಯದಲ್ಲಿ ನಡುಕ ಹುಟ್ಟಿಸಿವೆ.
ಗ್ಲೆನ್ ಫಿಲಿಪ್ಸ್‌ಗೆ ಅಕ್ಷರ್ ಯಮಪಾಶ!
ನ್ಯೂಜಿಲೆಂಡ್ ತಂಡದ ಅತ್ಯಂತ ಅಪಾಯಕಾರಿ ಬ್ಯಾಟರ್ ಗ್ಲೆನ್ ಫಿಲಿಪ್ಸ್ ವಿರುದ್ಧ ಅಕ್ಷರ್ ಪಟೇಲ್ ಅಕ್ಷರಶಃ ಸವಾರಿ ಮಾಡಿದ್ದಾರೆ. ಅಂಕಿಅಂಶಗಳ ಪ್ರಕಾರ, ಅಕ್ಷರ್ ಕೇವಲ 21 ಎಸೆತಗಳಲ್ಲಿ ಫಿಲಿಪ್ಸ್‌ರನ್ನು 3 ಬಾರಿ ಪೆವಿಲಿಯನ್‌ಗೆ ಅಟ್ಟಿದ್ದಾರೆ. ಈ ಅವಧಿಯಲ್ಲಿ ಫಿಲಿಪ್ಸ್ ಕೇವಲ 31 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಫಿಲಿಪ್ಸ್ ಅಬ್ಬರಿಸದಂತೆ ತಡೆಯುವ ಜವಾಬ್ದಾರಿ ಅಕ್ಷರ್ ಮೇಲಿದೆ.
ಮಿಚೆಲ್ ಮತ್ತು ಚಾಪ್‌ಮನ್ ಕಥೆಯೂ ಅಷ್ಟೇ!
ಕೇವಲ ಫಿಲಿಪ್ಸ್ ಮಾತ್ರವಲ್ಲ, ನ್ಯೂಜಿಲೆಂಡ್‌ನ ಇಬ್ಬರು ಪ್ರಮುಖ ಬ್ಯಾಟರ್‌ಗಳಾದ ಡೇರಿಲ್ ಮಿಚೆಲ್ ಮತ್ತು ಮಾರ್ಕ್ ಚಾಪ್‌ಮನ್ ಕೂಡ ಅಕ್ಷರ್ ಸ್ಪಿನ್ ಬಲೆಗೆ ಬಿದ್ದಿದ್ದಾರೆ.
ಡೇರಿಲ್ ಮಿಚೆಲ್: ಅಕ್ಷರ್ ಎದುರಿಸಿದ 26 ಎಸೆತಗಳಲ್ಲಿ ಮಿಚೆಲ್ 34 ರನ್ ಗಳಿಸಿ 2 ಬಾರಿ ಔಟ್ ಆಗಿದ್ದಾರೆ.
ಮಾರ್ಕ್ ಚಾಪ್‌ಮನ್: ಚಾಪ್‌ಮನ್ ವಿರುದ್ಧವೂ ಅಕ್ಷರ್ ಮೇಲುಗೈ ಸಾಧಿಸಿದ್ದು, 33 ರನ್ ನೀಡಿ 2 ಬಾರಿ ವಿಕೆಟ್ ಕಸಿದಿದ್ದಾರೆ.
ಇನ್ನೂ ಬಲಿಯಾಗದ ಆ ಮೂವರು ಯಾರು..?
ನ್ಯೂಜಿಲೆಂಡ್ ತಂಡದ ಟಿಮ್ ಸೀಫರ್ಟ್, ಜೇಮ್ಸ್ ನೀಶಮ್ ಮತ್ತು ಯುವ ತಾರೆ ರಚಿನ್ ರವೀಂದ್ರ ಅವರನ್ನು ಅಕ್ಷರ್ ಈವರೆಗೆ ಟಿ20 ಕ್ರಿಕೆಟ್‌ನಲ್ಲಿ ಔಟ್ ಮಾಡಿಲ್ಲ. ಆದರೆ, ಇದಕ್ಕೆ ಮುಖ್ಯ ಕಾರಣವೆಂದರೆ ಅಕ್ಷರ್ ಇವರ ವಿರುದ್ಧ ಅತಿ ಕಡಿಮೆ ಎಸೆತಗಳನ್ನು ಎಸೆದಿರುವುದು. ಅಹಮದಾಬಾದ್‌ನ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದ, ಇಂದು ಈ ಮೂವರ ವಿಕೆಟ್ ಪಡೆಯುವ ಸುವರ್ಣ ಅವಕಾಶ ಅಕ್ಷರ್ ಮುಂದಿದೆ.
ಅಹಮದಾಬಾದ್ ಪಿಚ್ ಮತ್ತು ಅಕ್ಷರ್ ಅಬ್ಬರ
ಅಕ್ಷರ್ ಪಟೇಲ್ ಅವರಿಗೆ ಅಹಮದಾಬಾದ್‌ನ ಈ ಕ್ರೀಡಾಂಗಣ ಎರಡನೇ ಮನೆಯಿದ್ದಂತೆ. ಇಲ್ಲಿನ ಮಣ್ಣಿನ ಗುಣ ಮತ್ತು ಗಾಳಿಯ ದಿಕ್ಕಿನ ಬಗ್ಗೆ ಅಕ್ಷರ್‌ಗೆ ಅಪಾರ ಜ್ಞಾನವಿದೆ. ಪವರ್‌ಪ್ಲೇನಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕುವ ಜೊತೆಗೆ ವಿಕೆಟ್ ಕಬಳಿಸುವ ಕಲೆ ಅವರಿಗೆ ಸಿದ್ದಿಸಿದೆ. ಈ ವಿಶ್ವಕಪ್‌ನಾದ್ಯಂತ ಅದ್ಭುತ ಫಾರ್ಮ್‌ನಲ್ಲಿರುವ ಅಕ್ಷರ್, ಫೈನಲ್ ಪಂದ್ಯದ ಗೇಮ್ ಚೇಂಜರ್ ಆಗುವುದರಲ್ಲಿ ಸಂಶಯವಿಲ್ಲ.
ಕ್ರಿಕೆಟ್ ವಿಶ್ಲೇಷಕರ ಮಾತು: ಅಕ್ಷರ್ ಪಟೇಲ್ ಅವರ ವೇಗದ ಸ್ಪಿನ್ ಮತ್ತು ನಿಖರತೆ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಕಬ್ಬಿಣದ ಕಡಲೆಯಾಗಲಿದೆ. ಅದರಲ್ಲೂ ಬಲಗೈ ಬ್ಯಾಟರ್‌ಗಳ ವಿರುದ್ಧ ಅವರು ಎಸೆಯುವ ಆರ್ಮ್ ಬಾಲ್ಗಳು ಇಂದು ಪಂದ್ಯದ ಫಲಿತಾಂಶವನ್ನೇ ಬದಲಿಸಬಹುದು.
ಇಡೀ ಭಾರತವೇ ಇಂದು ಬ್ಲೂ ಜರ್ಸಿ ತೊಟ್ಟು ಟೀಮ್ ಇಂಡಿಯಾವನ್ನು ಹುರಿದುಂಬಿಸುತ್ತಿದೆ. ಅಕ್ಷರ್ ಪಟೇಲ್ ಅವರ ಸ್ಪಿನ್ ಮೋಡಿಗೆ ನ್ಯೂಜಿಲೆಂಡ್ ಹಡಗು ಮುಳುಗುತ್ತದೆಯೇ ಎಂದು ಕಾದು ನೋಡಬೇಕಿದೆ,(ಏಜೆನ್ಸೀಸ್).