ಡಿಎಂಕೆ ಕೋಟೆಗೆ ದಳಪತಿ ಲಗ್ಗೆ; ತ್ರಿಕೋನ ಸ್ಪರ್ಧೆ ಸುಳ್ಳು, ನಮ್ಮದು ಜನರ ಶಕ್ತಿ, ಡಿಎಂಕೆ ಸೋಲಿಸುವುದು ನಾವೇ ಎಂದ ವಿಜಯ್
ಚೆನ್ನೈ: ಮುಂಬರುವ ಚುನಾವಣೆಯಲ್ಲಿ ಡಿಎಂಕೆಯನ್ನು ಮಣಿಸುವ ಏಕೈಕ ಶಕ್ತಿ ನಮ್ಮ ಪಕ್ಷಕ್ಕಿದೆ ಎಂದು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ತ ನಟ ವಿಜಯ್(Thalapathy Vijay) ಸಿಂಹಗರ್ಜನೆ ಮಾಡಿದ್ದಾರೆ.
ಸೋಮವಾರ ಚೆನ್ನೈನಲ್ಲಿ ನಡೆದ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ವಿಜಯ್, ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆಯಲ್ಲ, ನೇರ ಹಣಾಹಣಿ ಆಗಿರುತ್ತದೆ. ರಾಜಕೀಯ ವಿಶ್ಲೇಷಕರು ಇದು ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ಕೇವಲ ಜನರ ಬೆಂಬಲವಿರುವ ಟಿವಿಕೆ ಮತ್ತು ಆಡಳಿತಾರೂಢ ಡಿಎಂಕೆ ನಡುವಿನ ನೇರ ಸಮರ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಎಂಕೆಗೆ ನಾವೇ ಅಂತಿಮ ಮೃತ್ಯುಪ್ರಾಯ
ಚುನಾವಣಾ ಸಮರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ವಿಜಯ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆಯನ್ನು ಸೋಲಿಸುವ ಏಕೈಕ ಮತ್ತು ಅಂತಿಮ ಶಕ್ತಿ ನಮ್ಮ ಪಕ್ಷಕ್ಕಿದೆ. ಡಿಎಂಕೆಯ ಅಂತ್ಯದ ದಿನಗಳು ಹತ್ತಿರ ಬಂದಿವೆ ಎಂದು ಗುಡುಗಿದ್ದಾರೆ.
ತ್ರಿಕೋನ ಸ್ಪರ್ಧೆಯ ಭ್ರಮೆ ಬೇಡ
ಅನೇಕರು ಇದು ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ಎಂದು ಹೇಳುತ್ತಿದ್ದಾರೆ. ಒಂದು ಕಡೆ ಡಿಎಂಕೆ ಇದೆ, ಮತ್ತೊಂದು ಕಡೆ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿವೆ. ಆದರೆ ವಾಸ್ತವದಲ್ಲಿ, ಅಖಾಡದಲ್ಲಿರುವುದು ಕೇವಲ ಎರಡು ಬಣಗಳು ಮಾತ್ರ. ಒಂದು ಡಿಎಂಕೆ, ಇನ್ನೊಂದು ಜನರ ಪರವಾಗಿರುವ ನಮ್ಮ TVKಯಾಗಿದೆ. ಸ್ಪರ್ಧೆ ಇರುವುದು ನಮ್ಮ ಮತ್ತು ಅವರ ನಡುವೆ ಮಾತ್ರ ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರ ಮತ್ತು ಸುಳ್ಳು ಭರವಸೆಗಳ ವಿರುದ್ಧ ಟೀಕೆ
ಡಿಎಂಕೆ ಸರ್ಕಾರವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ದೂರಿದ ವಿಜಯ್, ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ತಮಿಳುನಾಡನ್ನು ಮುಕ್ತಗೊಳಿಸಲು ತಾವು ರಾಜಕೀಯಕ್ಕೆ ಬಂದಿರುವುದಾಗಿ ಪುನರುಚ್ಚರಿಸಿದ್ದಾರೆ.
ಮೂರನೇ ವರ್ಷದ ಸಂಭ್ರಮದಲ್ಲಿ ಟಿವಿಕೆ
2024ರ ಫೆಬ್ರವರಿ 2 ರಂದು ಸ್ಥಾಪನೆಯಾದ ಟಿವಿಕೆ, ಇಂದು ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ನಟ ವಿಜಯ್ ಅವರು ಸಿನಿಮಾ ರಂಗಕ್ಕೆ ವಿದಾಯ ಹೇಳಿ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ. ಈಗಾಗಲೇ ತಮಿಳುನಾಡಿನಾದ್ಯಂತ ಪಾದಯಾತ್ರೆ ಮತ್ತು ರ‍್ಯಾಲಿಗಳನ್ನು ನಡೆಸುತ್ತಿರುವ ವಿಜಯ್, ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡುತ್ತಿದ್ದಾರೆ.
ರಾಜಕೀಯ ವಿಶ್ಲೇಷಣೆ
ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ವಿಜಯ್ ಅವರ ಪಕ್ಷವು ಯುವ ಮತದಾರರು ಮತ್ತು ಮಹಿಳೆಯರ ನಡುವೆ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ. ಡಿಎಂಕೆ ಮತ್ತು ಎಐಡಿಎಂಕೆಗಳ ವಂಶಪಾರಂಪರ್ಯ ರಾಜಕೀಯಕ್ಕೆ ಟಿವಿಕೆ ದೊಡ್ಡ ಪರ್ಯಾಯವಾಗಿ ಬೆಳೆಯುತ್ತಿದೆ. ಇಂದಿನ ವಿಜಯ್ ಅವರ ಹೇಳಿಕೆಯು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ನೇರ ಎಚ್ಚರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ,(ಏಜೆನ್ಸೀಸ್).