ಅಂಗರಕ್ಷಕನ ವರ್ತನೆಗೆ ವಿಜಯ್ ಗರಂ
- ಪುದುಚರಿಯಲ್ಲಿ ನಡೆದ ದಳಪತಿ ವಿಜಯ್ ರೋಡ್‌ಶೋ
- ರೋಡ್‌ಶೋ ವೇಳೆ ವೃ್ದ್ಧ ಅಭಿಮಾನಿಯನ್ನು ತಳ್ಳಿದ ಬೌನ್ಸರ್
- ಅಂಗರಕ್ಷಕನ ವರ್ತನೆಗೆ ವಿಜಯ್ ಗರಂ
ಪುದುಚೇರಿ: ಸಿನಿಮಾ ರಂಗದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ದಳಪತಿ ವಿಜಯ್ (Thalapathy Vijay), ಈಗ ರಾಜಕೀಯ ರಂಗದಲ್ಲೂ ತಮ್ಮ ಮಾನವೀಯತೆಯ ಮೂಲಕ ಜನರ ಮನಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಪುದುಚೇರಿಯಲ್ಲಿ ನಡೆದ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಪ್ರಚಾರದ ರೋಡ್‌ಶೋ ವೇಳೆ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವೃದ್ಧನ ಮೇಲೆ ಭದ್ರತಾ ಸಿಬ್ಬಂದಿ ಪ್ರತಾಪ!
ಮುಂಬರುವ ಚುನಾವಣೆಗಳ ದೃಷ್ಟಿಯಿಂದ ದಳಪತಿ ವಿಜಯ್ ಪುದುಚೇರಿಯಲ್ಲಿ ಬೃಹತ್ ರೋಡ್‌ಶೋ ನಡೆಸುತ್ತಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ವಿಜಯ್ ಅವರು ತೆರೆದ ವಾಹನದಲ್ಲಿ ನಿಂತು ಕೈ ಬೀಸುತ್ತಾ ಸಾಗುತ್ತಿದ್ದಾಗ, ಭದ್ರತಾ ಸಿಬ್ಬಂದಿ ಜನಸಂದಣಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು.
ಈ ವೇಳೆ ವೃದ್ಧ ಅಭಿಮಾನಿಯೊಬ್ಬರು ವಿಜಯ್ ಅವರಿಗೆ ಹತ್ತಿರದಿಂದ ಕೈಮುಗಿಯಲು ಅಥವಾ ಸ್ವಾಗತಿಸಲು ವಾಹನದ ಹತ್ತಿರ ಬಂದಿದ್ದಾರೆ. ಆಗ ಅಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಮಾರ್ಗವನ್ನು ತೆರವುಗೊಳಿಸುವ ಭರದಲ್ಲಿ ಆ ವೃದ್ಧನನ್ನು ಜೋರಾಗಿ ಪಕ್ಕಕ್ಕೆ ತಳ್ಳಿದ್ದಾರೆ. ಈ ದೃಶ್ಯ ನೇರವಾಗಿ ವಿಜಯ್ ಅವರ ಕಣ್ಣಿಗೆ ಬಿದ್ದಿದೆ.
ವೃದ್ಧನ ಪರ ನಿಂತ ನಾಯಕ: ಭದ್ರತಾ ಸಿಬ್ಬಂದಿಗೆ ತರಾಟೆ
ತಮ್ಮ ಅಭಿಮಾನಿ, ಅದರಲ್ಲೂ ಒಬ್ಬ ಹಿರಿಯ ನಾಗರಿಕನನ್ನು ತಳ್ಳಿದ್ದನ್ನು ಕಂಡ ತಕ್ಷಣ ವಿಜಯ್ ಅತೀವ ಅಸಮಾಧಾನಗೊಂಡರು. ಕೂಡಲೇ ಮಧ್ಯಪ್ರವೇಶಿಸಿದ ಅವರು, ಆ ಭದ್ರತಾ ಸಿಬ್ಬಂದಿಯನ್ನು ತಡೆದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹಿರಿಯ ನಾಗರಿಕರೊಂದಿಗೆ ಈ ರೀತಿ ವರ್ತಿಸುವುದು ಸರಿಯಲ್ಲ, ಅಸಭ್ಯವಾಗಿ ನಡೆದುಕೊಳ್ಳಬೇಡಿ ಎಂಬಂತೆ ಸನ್ನೆ ಮಾಡಿ ತಮ್ಮ ಅಸಮಾಧಾನ ಹೊರಹಾಕಿದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಈ ಘಟನೆಯ ಸಂಪೂರ್ಣ ದೃಶ್ಯವನ್ನು ಅಭಿಮಾನಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈಗ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ವಿಜಯ್ ಅವರ ಈ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಜಯ್ ಕೇವಲ ಸ್ಟಾರ್ ಮಾತ್ರವಲ್ಲ, ಉತ್ತಮ ಸಂಸ್ಕೃತಿಯುಳ್ಳ ನಾಯಕ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ರಾಜಕೀಯ ಪ್ರಚಾರದ ಒತ್ತಡದಲ್ಲೂ ಹಿರಿಯರ ಬಗ್ಗೆ ತೋರಿದ ಈ ಕಾಳಜಿ ಅದ್ಭುತ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು, ದೊಡ್ಡ ಜನಸಂದಣಿಯನ್ನು ನಿರ್ವಹಿಸುವಾಗ ಭದ್ರತಾ ಸಿಬ್ಬಂದಿಗಳು ಸಂಯಮ ಕಳೆದುಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಪಯಣದಲ್ಲಿ ಮಾನವೀಯತೆಯ ಮುದ್ರೆ
ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿಜಯ್ ಅವರ ರಾಜಕೀಯ ಪ್ರವೇಶ ಸಂಚಲನ ಮೂಡಿಸಿದೆ. ಅವರ ಪ್ರತಿಯೊಂದು ರೋಡ್‌ಶೋ ಮತ್ತು ಸಾರ್ವಜನಿಕ ಸಭೆಗಳಿಗೆ ಜನಸಾಗರವೇ ಹರಿದುಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ಜನಸಂದಣಿ ನಿರ್ವಹಣೆ ದೊಡ್ಡ ಸವಾಲಾಗಿದ್ದರೂ, ವಿಜಯ್ ಅವರು ಸಾಮಾನ್ಯ ಜನರ ಮತ್ತು ಹಿರಿಯರ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತಿರುವುದು ಅವರ ರಾಜಕೀಯ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡಿದೆ,(ಏಜನ್ಸೀಸ್).