ಜೆಸಿಡಿ ಪ್ರಭಾಕರ್ ಮತ್ತು ಟಿವಿಕೆ ವಿಜಯ್
ಚೆನ್ನೈ: ಕೆಲವೇ ತಿಂಗಳು ಇರುವ ತಮಿಳುನಾಡಿನ ಚುನಾವಣೆ ಹಿನ್ನಲೆ ತಮಿಳುನಾಡಿನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಎರಡು ಬಾರಿ ಶಾಸಕರಾಗಿದ್ದ ಮತ್ತು ಎಂಜಿಆರ್ ಕಾಲದಿಂದಲೂ ಎಐಎಡಿಎಂಕೆ ಪಕ್ಷದಲ್ಲಿದ್ದ ಮತ್ತೊಬ್ಬ ಹಿರಿಯ ನಾಯಕ ಹೊಸದಾಗಿ ಪಕ್ಷ ಕಟ್ಟಿರುವ ದಳಪತಿ ವಿಜಯ್(Thalapathy Vijay) ಅವರ ಟಿವಿಕೆಗೆ ಸೇರ್ಪಡೆಯಾಗಿದ್ದಾರೆ.
ಹಿರಿಯ ಎಐಎಡಿಎಂಕೆ ನಾಯಕ ಜೆಸಿಡಿ ಪ್ರಭಾಕರ್ ಶುಕ್ರವಾರ ನಟ ವಿಜಯ್ ಅವರ ನಿವಾಸದಲ್ಲಿ ಟಿವಿಕೆ ಸೇರ್ಪಡೆಯಾಗಿದ್ದಾರೆ. ಪ್ರಭಾಕರ್ ಅವರು 1980 ಮತ್ತು 2011ರಲ್ಲಿ ವಿಲ್ಲಿವಕ್ಕಂ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು.
ಹಿರಿಯ ನಾಯಕ ಕೆ.ಎಸ್. ಸೆಂಗೊಟ್ಟೈಯನ್ ನಂತರ ಎಂಜಿಆರ್ ಜೊತೆಗಿದ್ದ ಪ್ರಭಾಕರ್ ಅವರು ಟಿವಿಕೆಗೆ ಸೇರ್ಪಡೆಗೊಂಡಿರುವುದು ರಾಜಕೀಯವಾಗಿ ದಳಪತಿ ವಿಜಯ್ ಅವರಿಗೆ ರಾಜಕೀಯವಾಗಿ ಮೈಲಿಗಲ್ಲು ನೀಡಿದೆ. ಇದು ಎಐಎಡಿಎಂಕೆಯ ಹಿರಿಯ ನಾಯಕರಲ್ಲಿ ವಿಜಯ್ ಅವರ ಬಗೆಗಿನ ಹೆಚ್ಚುತ್ತಿರುವ ಆಕರ್ಷಣೆಯನ್ನು ಸೂಚಿಸುತ್ತದೆ ಎನ್ನಲಾಗಿದೆ.
ಎಐಎಡಿಎಂಕೆಯಲ್ಲಿನ ಓಪಿಎಸ್ ಮತ್ತು ಈಪಿಎಸ್ ನಡುವಿನ ಆಂತರಿಕ ಕಚ್ಚಾಟದಲ್ಲಿ ಓ. ಪನ್ನೀರ್ ಸೆಲ್ವಂ ಬಣದಲ್ಲಿ ಪ್ರಭಾಕರ್ ಗುರುತಿಸಿಕೊಂಡಿದ್ದರು. ಕಳೆದ ಲೋಕಸಭೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಪನ್ನೀರ್‌ಸೆಲ್ವಂ ನೇತೃತ್ವದ ಎಐಎಡಿಎಂಕೆ ಬಣದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು (ಏಜೆನ್ಸೀಸ್).