ಕನ್ಯಾಕುಮಾರಿ/ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸ್ಥಾಪಕ ದಳಪತಿ ವಿಜಯ್(Thalapathy Vijay) ಅವರ ಚುನಾವಣಾ ಪ್ರಚಾರದ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಕನ್ಯಾಕುಮಾರಿಯಲ್ಲಿ ಸೈಕಲ್ ಸವಾರಿ ಮಾಡುವ ಮೂಲಕ ಮತದಾರರನ್ನು ಸೆಳೆಯುತ್ತಿದ್ದ ವೇಳೆ, ಅಪರಿಚಿತನೊಬ್ಬ ವಿಜಯ್ ಅವರತ್ತ ಹೂವಿನ ಚೆಂಡು ಎಸೆದಿದ್ದು, ಇದು ಬಾಂಬ್ ಇರಬಹುದೆಂಬ ಭೀತಿಯಿಂದ ವಿಜಯ್ ಸೈಕಲ್‌ನಿಂದ ಜಿಗಿದು ಓಡಿರುವ ಘಟನೆ ಸಂಭವಿಸಿದೆ.
ಏನಿದು ಘಟನೆ?
ನಟ ವಿಜಯ್ ಸದ್ಯ ಮುಂಬರುವ ಚುನಾವಣೆಗಾಗಿ ತಮಿಳುನಾಡಿನಾದ್ಯಂತ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಭಾನುವಾರ ಕನ್ಯಾಕುಮಾರಿಯಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಅಭಿಮಾನಿಗಳನ್ನು ಕಂಡು ವಿಜಯ್ ಉತ್ಸಾಹದಿಂದ ಸೈಕಲ್ ಸವಾರಿ ಮಾಡುತ್ತಿದ್ದರು. ಈ ವೇಳೆ ಕಿಕ್ಕಿರಿದು ತುಂಬಿದ್ದ ಜನಸ್ತೋಮದ ನಡುವೆ ಬಂದ ವ್ಯಕ್ತಿಯೊಬ್ಬ ಹಠಾತ್ತನೆ ವಿಜಯ್ ಅವರತ್ತ ಏನೋ ಎಸೆದಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ವಿಜಯ್, ಅದು ಬಾಂಬ್ ಅಥವಾ ಅಪಾಯಕಾರಿ ವಸ್ತು ಇರಬಹುದೆಂದು ಭಾವಿಸಿ ಸೈಕಲ್‌ನಿಂದ ಜಿಗಿದು ಪಕ್ಕದಲ್ಲೇ ಬರುತ್ತಿದ್ದ ವ್ಯಾನ್‌ನತ್ತ ಓಡಿದ್ದಾರೆ. ತಕ್ಷಣವೇ ಅವರ ಖಾಸಗಿ ಭದ್ರತಾ ಸಿಬ್ಬಂದಿ ವಿಜಯ್ ಅವರನ್ನು ಸುತ್ತುವರೆದು ರಕ್ಷಣೆ ನೀಡಿದರು.
ಆದರೆ, ತಪಾಸಣೆಯ ನಂತರ ಆ ವ್ಯಕ್ತಿ ಎಸೆದಿದ್ದು ಬಾಂಬ್ ಅಲ್ಲ, ಬದಲಾಗಿ ಹೂವಿನಿಂದ ಮಾಡಿದ ಚೆಂಡು (Flower ball) ಎಂಬುದು ತಿಳಿದುಬಂದಿದೆ. ಅಭಿಮಾನದಿಂದ ಹೂವು ಎಸೆದಿದ್ದು ವಿಜಯ್ ಮತ್ತು ಅವರ ಭದ್ರತಾ ತಂಡಕ್ಕೆ ಆತಂಕ ತಂದೊಡ್ಡಿತ್ತು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಘಟನೆಯ ನಂತರ ಜನರನ್ನ ಉದ್ದೇಶಿಸಿ ಮಾತನಾಡಿದ ವಿಜಯ್, ತಮಿಳುನಾಡಿನ ಅಭಿವೃದ್ಧಿಯ ಬಗ್ಗೆ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬಿಚ್ಚಿಟ್ಟರು.
AI ಸಚಿವಾಲಯ: ನಾವು ಅಧಿಕಾರಕ್ಕೆ ಬಂದರೆ ಭಾರತದಲ್ಲೇ ಮೊದಲ ಬಾರಿಗೆ 'ಕೃತಕ ಬುದ್ಧಿಮತ್ತೆ (AI) ಸಚಿವಾಲಯ' ಸ್ಥಾಪಿಸುತ್ತೇವೆ. ತಮಿಳುನಾಡಿನಲ್ಲಿ 'AI ಸಿಟಿ' ಮತ್ತು 'AI ಯುನಿವರ್ಸಿಟಿ' ನಿರ್ಮಾಣ ಮಾಡುವ ಮೂಲಕ 2035ರ ವೇಳೆಗೆ ಜಾಗತಿಕ ತಂತ್ರಜ್ಞಾನ ಆರ್ಥಿಕತೆಯಲ್ಲಿ ದೊಡ್ಡ ಪಾಲು ಪಡೆಯುತ್ತೇವೆ ಎಂದು ಘೋಷಿಸಿದರು.
ಸಿಟಿಜನ್ ಪ್ರಿವಿಲೇಜ್ ಕಾರ್ಡ್: ಪ್ರತಿಯೊಂದು ಮನೆಗೆ 'ಸಿಟಿಜನ್ ಪ್ರಿವಿಲೇಜ್ ಕಾರ್ಡ್' ನೀಡುವುದಾಗಿ ಭರವಸೆ ನೀಡಿದರು. ಇದರಿಂದ ಸರ್ಕಾರಿ ಸವಲತ್ತುಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಮನೆಬಾಗಿಲಿಗೆ ತಲುಪಲಿವೆ.
ಲಂಚ ಮುಕ್ತ ಆಡಳಿತ: ಡಿಎಂಕೆ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, "ಇದು ಸ್ಟಾಲಿನ್ ಸರ್ ಹೇಳುವ ಕಟ್ಟುಕಥೆಯಲ್ಲ, ವೈಜ್ಞಾನಿಕವಾಗಿ ಸಾಧ್ಯವಿರುವ ಯೋಜನೆ. ಪ್ರಸ್ತುತ ವ್ಯವಸ್ಥೆಯಲ್ಲಿ ಲಂಚವು ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ, ಮಂತ್ರಿಗಳಿಗೂ ಹಂಚಿಕೆಯಾಗುತ್ತಿದೆ. ನಾವು ಈ ವ್ಯವಸ್ಥೆಯನ್ನು ಕಿತ್ತೊಗೆಯುತ್ತೇವೆ," ಎಂದು ಗುಡುಗಿದರು,(ಏಜೆನ್ಸೀಸ್).