ದಳಪತಿ ವಿಜಯ್ 
ದೇಶ

ಮಲೇಷಿಯಾದಿಂದ ಚೆನ್ನೈಗೆ ಬಂದ ದಳಪತಿ ವಿಜಯ್; ಏರ್​ಪೋರ್ಟ್​ನಲ್ಲಿ ನೂಕಾಟ ತಳ್ಳಾಟ; ಮುಗ್ಗರಿಸಿ ಬಿದ್ದ ವಿಜಯ್ | Thalapathy Vijay

ಚೆನ್ನೈ: ಮಲೇಷಿಯಾದ ಕೌಲಾಲಂಪುರದಲ್ಲಿ ಅದ್ದೂರಿಯಾಗಿ ನಡೆದ ತಮ್ಮ ವೃತ್ತಿ ಜೀವನದ ಕೊನೆಯ ಸಿನಿಮಾ ಜನನಾಯಗನ್ ಸಿನಿಮಾದ ಆಡಿಯೋ ಲಾಂಚ್​ನಲ್ಲಿ ಭಾಗವಹಿಸಿದ್ದ ನಟ ದಳಪತಿ ವಿಜಯ್(Thalapathy Vijay), ಭಾನುವಾರ(ಡಿ. 28) ಚೆನ್ನೈಗೆ ಆಗಮಿಸಿದ್ದಾರೆ. ಈ ವೇಳೆ ಏರ್​ಪೋರ್ಟ್​ನಲ್ಲಿ ವಿಜಯ್ ನೋಡಲು ಅಭಿಮಾನಿಗಳು, ಸಾರ್ವಜನಿಕರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಕಾರು ಹತ್ತುವ ವೇಳೆ ದಳಪತಿ ವಿಜಯ್ ಮುಗ್ಗರಿಸಿ ಬಿದ್ದಿದ್ದಾರೆ.
ವಿಜಯ್ ತನ್ನ ಕಾರಿನೊಳಗೆ ಹೋಗುವ ಮುನ್ನ ಎಡವಿ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ವಿಮಾನ ನಿಲ್ದಾಣದ ಆವರಣದ ಹೊರಗೆ ನೂರಾರು ಅಭಿಮಾನಿಗಳು ವಿಜಯ್ ಅವರನ್ನು ಸುತ್ತುವರೆದಿರುವುದು ಕಾಣುತ್ತಿದೆ. ಈ ವೇಳೆ ಅವರ ಅಭಿಮಾನಿಗಳು ದಳಪತಿ ಎಂದು ಕೂಗುತ್ತಾ ಅವರ ಬಳಿ ಹೋಗಲು ಪ್ರಯತ್ನಿಸಿದ್ದಾರೆ.
ಈ ವೇಳೆ ವಿಜಯ್ ಬಾಡಿಗಾರ್ಡ್, ಪೊಲೀಸರು ಸೇರಿ ವಿಜಯ್ ಅವರನ್ನು ಎಳೆದಾಡಲಾಗಿದೆ. ಕಾರು ಹತ್ತುವ ವೇಳೆ ವಿಜಯ್ ಮುಗ್ಗರಿಸಿ ಬಿದ್ದಿದ್ದು, ತಕ್ಷಣ ಎದ್ದು ಸಾವರಿಸಿಕೊಂಡು ಕಾರಿನಲ್ಲಿ ಹತ್ತಿದ್ದಾರೆ. ಇನ್ನೂ 200ಕ್ಕೂ ಹೆಚ್ಚು ಅಥವಾ ಅದಕ್ಕಿಂತ ಕಡಿಮೆ ಜನಸಂಖ್ಯೆಯ ಗುಂಪನ್ನು ನಿಭಾಯಿಸಲು ಸಾಧ್ಯವಾಗದಿರುವುದಕ್ಕೆ ವಿಜಯ್ ಅಭಿಮಾನಿಗಳು ಅವರ ಭದ್ರತಾ ಸಿಬ್ಬಂದಿ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜನ ನಾಯಗನ್ ಚಿತ್ರವು 2026 ಜನವರಿ 9ರಂದು ಪೊಂಗಲ್‌ಗೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ಮೆನನ್, ಪ್ರಿಯಾಮಣಿ ಹಾಗೂ ನರೇನ್ ಚಿತ್ರದಲ್ಲಿ ನಟಿಸಿದ್ದಾರೆ (ಏಜೆನ್ಸೀಸ್).