ಶಿವಸೇನಾ ರಾಜ್ಯಸಭಾ ಸಂಸದ ಸಂಜಯ್ ರಾವತ್
ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಹೊರತಾಗಿಯೂ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ಕುಟುಂಬಗಳಲ್ಲಿ ಒಂದಾದ ಠಾಕ್ರೆ ಕುಟುಂಬದ ಬಗ್ಗೆ ಅವರ ಆಪ್ತ ಸಂಜಯ್ ರಾವತ್ ಆಸಕ್ತಿಕರ ಕಮೆಂಟ್ ಮಾಡಿದ್ದು, ಠಾಕ್ರೆ ಬ್ರದರ್ಸ್ ಮನಸ್ಸು ಮಾಡಿದ್ರೆ ಈಗಲೂ 10 ನಿಮಿಷದಲ್ಲಿ ಮುಂಬೈ ಬಂದ್ ಮಾಡಬಹುದು ಎಂದು ಹೇಳಿದ್ದಾರೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ಪ್ರಚಾರದ ಭಾಗವಾಗಿ ಎನ್ಡಿಟಿವಿ ಸಂದರ್ಶನದಲ್ಲಿ ಮಾತನಾಡಿರುವ ರಾಜ್ಯಸಭಾ ಸಂಸದ ಸಂಜಯ್ ರಾವತ್, ಮುಂಬೈನಲ್ಲಿ ಠಾಕ್ರೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ನಾವು ಮನಸ್ಸು ಮಾಡಿದ್ರೆ 10 ನಿಮಿಷದಲ್ಲೇ ಮುಂಬೈ ಅನ್ನು ಬಂದ್ ಮಾಡಬಹುದು ಎಂದು ಠಾಕ್ರೆ ಕುಟುಂಬದ ರಾಜಕೀಯ ಶಕ್ತಿ ಇನ್ನೂ ಕಡಿಮೆಯಾಗಿಲ್ಲ ಎಂದಿದ್ದಾರೆ.
20 ವರ್ಷಗಳ ಬಳಿಕ ಎಂಎನ್ಎಸ್ನ ರಾಜ್ ಠಾಕ್ರೆ ಮತ್ತು ಶಿವಸೇನಾ ಮುಖಸ್ಥ ಉದ್ಧವ್ ಠಾಕ್ರೆ ಒಂದಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉದ್ದವ್ ಮತ್ತು ರಾಜ್ ಠಾಕ್ರೆ ಸಹೋದರರು. ಅವರು ತಾಯಂದಿರು ಸಹೋದರಿಯರು. ಇದು ಕುಟುಂಬದ ವಿಷಯ. ನಾನು ಎರಡೂ ಕುಟುಂಬಕ್ಕೂ ಸ್ನೇಹಿತ. ಅವರ ಒಂದೂಗೂಡುವಿಕೆಯಲ್ಲಿ ನನ್ನ ಪಾತ್ರವಿದ್ದರೆ ಅದೇ ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ಹಿಂದುತ್ವ-ಜಾತ್ಯಾತೀತ ಕಾರ್ಯಸೂಚಿಯಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ ಶಿವಸೇನೆ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ಮಾಡಿತು. ಠಾಕ್ರೆ ಸಹೋದರರ ಸಿದ್ದಾಂತಗಳು ಭಿನ್ನವಾಗಿರಬಹುದು. ಆದರೆ ಅವರು ಮಹಾರಾಷ್ಟ್ರಕ್ಕೆ ಆದ್ಯತೆ ನೀಡಲು ಒಂದಾಗಿದ್ದಾರೆ. ಅಂತಹ ಮೈತ್ರಿ ಮಾಡಿಕೊಳ್ಳುವುದು ಪ್ರಸ್ತುತ ಕಾಲದಲ್ಲಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಠಾಕ್ರೆ ಸಹೋದರರು ಒಂದು ಬ್ರಾಂಡ್, ಠಾಕ್ರೆಗಳು ಬದುಕುಳಿದರೆ ಮರಾಠಿಗಳು ಬದುಕುಳಿಯುತ್ತಾರೆ. ಮೈತ್ರಿಕೂಟಕ್ಕಾಗಿ ರಾಜ್ ಠಾಕ್ರೆ ಅವರ ಎಂಎನ್ಎಸ್ ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ದ್ವೇಷದ ರಾಜಕೀಯವು ದೇಶವನ್ನು ಒಡೆಯುತ್ತದೆ ಎಂದು ಹೇಳಿದ್ದಾರೆ.
ಮುಂಬರುವ ಬಿಎಂಸಿ ಚುನಾವಣೆಯಲ್ಲಿ ಠಾಕ್ರೆಯವರ ಪಕ್ಷಗಳಿಂದ ಮೇಯರ್ ಆಗುತ್ತಾರೆ. ಉದ್ದವ್ ಮತ್ತು ರಾಜ್ ಠಾಕ್ರೆ ಬೇರೆ ಅಲ್ಲ. ನಾವೆಲ್ಲ ಒಂದೇ, ಮುಂಬೈ ಮೇಯರ್ ನಮ್ಮವರಾಗಿರುತ್ತಾರೆ. ಪಕ್ಷ ಒಡೆದು ಆಚೆ ಹೋಗಿರುವ ಏಕನಾಥ್ ಶಿಂಧೆ ಜೊತೆ ಠಾಕ್ರೆ ಬಣ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).