ಎಂಟನೇ ತರಗತಿಯ ಎನ್ಸಿಇಆರ್ಟಿ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗ ಭ್ರಷ್ಟಾಚಾರ’ ಕುರಿತ ಅಧ್ಯಾಯ ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ. ಈ ಪಠ್ಯದಲ್ಲಿನ ಅಂಶಗಳು ಆಕ್ಷೇಪಾರ್ಹ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಪುಸ್ತಕದ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ರಾಷ್ಟ್ರೀಯ ಪಠ್ಯಕ್ರಮದಡಿ ಪುಸ್ತಕಗಳು ಹೇಗೆ ಸಿದ್ಧವಾಗುತ್ತವೆ ಎಂಬ ಕುತೂಹಲ ಮೂಡಿದೆ. ಸಾಮಾನ್ಯವಾಗಿ ಎನ್ಸಿಇಆರ್ಟಿ ಪಠ್ಯಪುಸ್ತಕಗಳು ಹಲವು ಹಂತದ ಕಟ್ಟುನಿಟ್ಟಿನ ವಿಮರ್ಶೆಯ ನಂತರವೇ ಹೊರಬರುತ್ತವೆ. ಮೊದಲು ವಿಷಯ ತಜ್ಞರನ್ನೊಳಗೊಂಡ ‘ಪಠ್ಯಪುಸ್ತಕ ಅಭಿವೃದ್ಧಿ ಸಮಿತಿ’ ರಚನೆಯಾಗುತ್ತದೆ. ನಂತರ ಬಹುಹಂತದ ಆಂತರಿಕ ಮತ್ತು ಬಾಹ್ಯ ವಿಮರ್ಶೆಗಳು ನಡೆಯುತ್ತವೆ. ಅಂತಿಮವಾಗಿ ರಾಷ್ಟ್ರೀಯ ಮಟ್ಟದ ಉನ್ನತ ಸಮಿತಿಯ ಅನುಮೋದನೆಯ ನಂತರವೇ ಮುದ್ರಣಕ್ಕೆ ಹಸಿರು ನಿಶಾನೆ ಸಿಗುತ್ತದೆ. ಇಷ್ಟೆಲ್ಲ ಫಿಲ್ಟರ್ಗಳಿದ್ದರೂ ಈ ವಿವಾದಾತ್ಮಕ ಅಂಶ ಹೇಗೆ ಸೇರ್ಪಡೆಯಾಯಿತು ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯವನ್ನು ಹೊಂದಿದ್ದ 8ನೇ ತರಗತಿಯ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್ಸಿಇಆರ್ಟಿ) ಪಠ್ಯಪುಸ್ತಕವು ವಿವಾದಕ್ಕೆ ಗುರಿಯಾಗಿದೆ. ಈ ಪುಸ್ತಕದಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎಂದು ಸುಪ್ರೀಂ ಕೋರ್ಟ್ ಅದರ ಮೇಲೆ ಸಂಪೂರ್ಣ ನಿಷೇಧ ಹೇರಿದ್ದು ಮಾತ್ರವಲ್ಲ, ಈ ರೀತಿಯ ಪಾಠ ಹೇಗೆ ಬರಲು ಸಾಧ್ಯವಾಯಿತು ಎಂದು ಕಿಡಿಕಾರಿದೆ. ಈ ವಿಷಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ ಮತ್ತು ಈ ವಿಷಯದ (ನ್ಯಾಯಾಂಗದಲ್ಲಿ ಭ್ರಷ್ಟಾಚಾರ) ಗಂಭೀರತೆ ಅರಿತು, ಅದನ್ನು ಪ್ರಮುಖ ವಿಷಯವಾಗಿ ಪ್ರಕಟಿಸಿದ/ಪ್ರಸಾರ ಮಾಡಿದ ಜವಾಬ್ದಾರಿಯುತ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಎನ್ಸಿಇಆರ್ಟಿ ಕ್ಷಮೆಯಾಚಿಸಿದ್ದು, ಪಠ್ಯಪುಸ್ತಕ ಮರುರಚಿಸುವುದಾಗಿ ಘೋಷಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 11ರಂದು ನಡೆಯಲಿದೆ. ವಿವಾದಿತ ಪಠ್ಯ ರಚಿಸಿದ ಇಬ್ಬರು ಲೇಖಕರನ್ನು ‘ಕಪು್ಪಪಟ್ಟಿ’ಗೆ ಸೇರಿಸಲಾಗಿದೆ ಎಂದು ಎನ್ಸಿಇಆರ್ಟಿ ಮೂಲಗಳು ತಿಳಿಸಿವೆ.
ತಜ್ಞರನ್ನು ಗುರುತಿಸುವ ಸಿಎಜಿ
ಗಣಿತ, ಸಮಾಜ ವಿಜ್ಞಾನ ಸೇರಿದಂತೆ ಪ್ರತಿ ವಿಷಯಕ್ಕೂ ಕರಿಕ್ಯುಲರ್ ಏರಿಯಾ ಗ್ರೂಪ್ (ಸಿಎಜಿ) ರಚಿಸಲಾಗುತ್ತದೆ. ಆಯಾ ವಿಷಯಕ್ಕೆ ಸಿಎಜಿಯ ಅಧ್ಯಕ್ಷರು ಮತ್ತು ಅದಕ್ಕೆ ಸಮಿತಿ ಇರುತ್ತದೆ. ಈ ಗುಂಪು ಪಠ್ಯಪುಸ್ತಕದ ಒಟ್ಟಾರೆ ವಿನ್ಯಾಸ ಮತ್ತು ಅದನ್ನು ಬರೆಯಲು ಬೇಕಾದ ಸಮರ್ಥ ತಜ್ಞರನ್ನು ಗುರುತಿಸುತ್ತದೆ. ಹೀಗೆ ತಜ್ಞರನ್ನು ಗುರುತಿಸುವಾಗ ಅವರ ಅಕಾಡೆಮಿಕ್ ಸಾಧನೆ ಗುರುತಿಸಿ ಮತ್ತು ಅವರಿಂದ ಸಿಗುವ ಪಠ್ಯ ವಿದ್ಯಾರ್ಥಿಗಳಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ವಿಮಶಿಸಲಾಗುತ್ತದೆ. ಆ ಬಳಿಕವೇ ತಜ್ಞರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಇತ್ತೀಚಿನ ವಿವಾದಕ್ಕೆ ಕಾರಣವಾದ ‘ನ್ಯಾಯಾಂಗ ಭ್ರಷ್ಟಾಚಾರ’ದಂತಹ ವಿಷಯಗಳು ಈ ಎಲ್ಲ ಹಂತಗಳನ್ನು ದಾಟಿದ್ದರೂ, ಕೆಲವೊಮ್ಮೆ ಸಾರ್ವಜನಿಕ ಅಭಿಪ್ರಾಯ ಅಥವಾ ಕಾನೂನಾತ್ಮಕ ಆಕ್ಷೇಪಣೆಗಳು ಬಂದಾಗ ಎನ್ಸಿಇಆರ್ಟಿ ವಿಶೇಷ ಸಮಿತಿಯನ್ನು ರಚಿಸಿ ಮರು-ಪರಿಶೀಲನೆ ನಡೆಸುತ್ತದೆ.
ಪಠ್ಯ ರಚನೆಯ ಪ್ರಕ್ರಿಯೆಯಲ್ಲಿ ಮೊಘಲ್ ಇತಿಹಾಸ, ಗುಜರಾತ್ ದಂಗೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಕೈಬಿಟ್ಟಿರುವುದು ಸಹ ಚರ್ಚೆಗೆ ಗ್ರಾಸವಾಗಿತ್ತು.
ಪಠ್ಯಪುಸ್ತಕ ಅಭಿವೃದ್ಧಿ ಸಮಿತಿ ಕಾರ್ಯ
ಮುಂದಿನ ಪ್ರಕ್ರಿಯೆಯಲ್ಲಿ ಸಿಎಜಿ, ಪ್ರತಿ ಪಠ್ಯ ವಿಷಯಕ್ಕೂ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿ ಅಂದರೆ ಟೆಕ್ಸ್ ್ಟ ಬುಕ್ ಡೆವಲಪ್ವೆುಂಟ್ ಕಮಿಟಿ (ಟಿಡಿಸಿ) ರಚಿಸುತ್ತದೆ. ಸಿಎಜಿ ಆಯ್ಕೆ ಮಾಡಿದ ತಜ್ಞರು ಟಿಡಿಸಿ ಸದಸ್ಯರಾಗುತ್ತಾರೆ. ಇದರಲ್ಲಿ ಶಿಕ್ಷಣತಜ್ಞರು, ಬೋಧನಾಶಾಸ್ತ್ರ ಮತ್ತು ಪಠ್ಯಕ್ರಮ ರಚನಾ ತಜ್ಞರು, ವಿಷಯ ತಜ್ಞರು ಮತ್ತು ಉದ್ಯಮದ ಪರಿಣತರು ಇರುತ್ತಾರೆ.
ಪಠ್ಯಪುಸ್ತಕವನ್ನು ಒಬ್ಬರೇ ಲೇಖಕರು ಸಿದ್ಧಪಡಿಸುವುದಿಲ್ಲ. ಪರಿಣಿತರ ತಂಡವೇ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಮತ್ತು ಈ ಹಂತದಲ್ಲಿ ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು
ಯಾವುದೇ ಪಠ್ಯಪುಸ್ತಕದ ರಚನೆಗೆ ಮೊದಲು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (National Curriculum Framework) ಅಡಿಪಾಯವಾಗಿರುತ್ತದೆ. ಇದು ಶಿಕ್ಷಣದ ಗುರಿಗಳು ಮತ್ತು ಕಲಿಕೆಯ ಉದ್ದೇಶಗಳನ್ನು ನಿರ್ಧರಿಸುತ್ತದೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF) ಆಧಾರದ ಮೇಲೆ ವಿಷಯಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಿಎಜಿ ಸಮಿತಿಯು ವಿಷಯ ತಜ್ಞರನ್ನು ಗುರುತಿಸುತ್ತದೆ.
ಟಿಡಿಸಿ ಸಮಿತಿಯು ಅಧ್ಯಾಯಗಳನ್ನು ಬರೆಯುತ್ತದೆ.
ಆಂತರಿಕ ತಜ್ಞರು ಮತ್ತು ಶಿಕ್ಷಕರಿಂದ ಹಲವಾರು ಬಾರಿ ತಿದ್ದುಪಡಿಯಾಗುತ್ತದೆ.
ಸತ್ಯಾಸತ್ಯತೆಯನ್ನು ಪರಿಶೀಲಿಸಿ ಎನ್ಎಸ್ಟಿಸಿ ಸಮಿತಿ ಅಂತಿಮ ಅನುಮೋದನೆ ನೀಡುತ್ತದೆ.
ಹಲವು ಬಾರಿ ಪರಿಶೀಲನೆ, ಪರಿಷ್ಕರಣೆ ಬಳಿಕವೂ ಪಠ್ಯಪುಸ್ತಕದಲ್ಲಿ ವಿವಾದಿತ ಪಾಠ ಹೇಗೆ ಉಳಿದುಕೊಂಡಿತು?
ತಜ್ಞರು ಅನುಮೋದಿಸಿದ್ದು ಹೇಗೆ? ಯಾವ ಆಕ್ಷೇಪವೂ ವ್ಯಕ್ತಪಡಿಸಲಿಲ್ಲವೆ?
ಎನ್ಎಸ್ಟಿಸಿ ಸಮಿತಿಯಾದರೂ ಕೊನೆಯ ಹಂತದಲ್ಲಿ ಇದನ್ನು ಗಮನಿಸಿ, ಮುದ್ರಣಕ್ಕೆ ಹೋಗುವುದನ್ನು ಏಕೆ ತಡೆಯಲಿಲ್ಲ?
ಈ ಪಠ್ಯಪುಸ್ತಕ ರಚನೆಯಲ್ಲಿ ಪಾಲ್ಗೊಂಡ 60 ತಜ್ಞರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆಯೇ?
ಮುಂದೆ ಇಂಥ ಪ್ರಮಾದ ಅಥವಾ ಅಪಸವ್ಯ ಸಂಭವಿಸದಂತೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ?
ಎಂಟನೇ ತರಗತಿಯ ಸಾಮಾಜಿಕ ವಿಜ್ಞಾನದ "Exploring Society: India and Beyond ಪುಸ್ತಕ ಫೆಬ್ರವರಿ 24ರಂದು ಬಿಡುಗಡೆಗೊಂಡಿತ್ತು. ಇದರ 2.25 ಲಕ್ಷ ಪ್ರತಿಗಳನ್ನು ಮುದ್ರಿಸಲಾಗಿತ್ತು. ಈ ಪೈಕಿ 38 ಪ್ರತಿಗಳು ಈಗಾಗಲೇ ಮಾರಾಟವಾಗಿವೆ, ಉಳಿದವು ಸಂಗ್ರಹಾಗಾರದಲ್ಲಿವೆ. ಮಾರಾಟಗೊಂಡ 38 ಪ್ರತಿಗಳನ್ನು ಕೂಡ ವಾಪಸ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎನ್ಸಿಇಆರ್ಟಿ ಅಧಿಕಾರಿಗಳು ತಿಳಿಸಿದ್ದಾರೆ.
ಟಿಡಿಸಿ ಸಿದ್ಧಪಡಿಸಿದ ಕರಡು ಅಧ್ಯಾಯಗಳು ಅನುಮೋದನೆಗೆ ಮುನ್ನ ಬಹು-ಹಂತದ ಆಂತರಿಕ ವಿಮರ್ಶೆ ಮತ್ತು ಸಮಾಲೋಚನೆಗೆ ಒಳಗಾಗುತ್ತವೆ. ಈ ಪ್ರಕ್ರಿಯೆಯು ಶೈಕ್ಷಣಿಕವಾಗಿ ಅತ್ಯಂತ ಶಿಸ್ತುಬದ್ಧವಾಗಿರುತ್ತದೆ.
ತಾಂತ್ರಿಕ ವಿಮರ್ಶೆ: ಅಂಕಿಅಂಶಗಳು ಮತ್ತು ವಾಸ್ತವಾಂಶಗಳ ಸರಿಯಾದ ಪರಿಶೀಲನೆ.
ಶಿಕ್ಷಣಶಾಸ್ತ್ರದ ವಿಮರ್ಶೆ: ವಿಷಯವು ಆಯಾ ವಯಸ್ಸಿನ ಮಕ್ಕಳಿಗೆ ಅರ್ಥವಾಗುತ್ತದೆಯೇ, ಅವರ ಬೆಳವಣಿಗೆಗೆ ಪೂರಕವಾಗುತ್ತದೆಯೇ ಎಂಬ ಪರಿಶೀಲನೆ.
ಕರಡಿನಲ್ಲಿ ಎಲ್ಲ ತಿದ್ದುಪಡಿಗಳ ನಂತರ, ಪಠ್ಯವನ್ನು ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ-ಕಲಿಕಾ ಸಾಮಗ್ರಿ ಸಮಿತಿಗೆ (ಘಖಖಇ) ಸಲ್ಲಿಸಲಾಗುತ್ತದೆ. ಈ ಸಮಿತಿ ದೇಶಾದ್ಯಂತ ಇರುವ ವಿವಿಧ ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಅಂತಿಮ ಅನುಮೋದನೆ ನೀಡುತ್ತದೆ.
ಅನುಮೋದನೆ ಸಿಕ್ಕ ನಂತರ, ವ್ಯಾಕರಣ ದೋಷಗಳಿದ್ದರೆ ಸರಿಪಡಿಸಲಾಗುತ್ತದೆ ಮತ್ತು ಚಿತ್ರಗಳ ವಿನ್ಯಾಸ ಮುಗಿಸಿ ಪುಸ್ತಕವನ್ನು ಮುದ್ರಣಕ್ಕೆ ಕಳುಹಿಸಲಾಗುತ್ತದೆ.
ಉದ್ಯಮ ತಜ್ಞರು, ಸರ್ಕಾರಿ ಅಧಿಕಾರಿಗಳ ಪಾತ್ರ
ನಿರ್ದಿಷ್ಟ ಕ್ಷೇತ್ರದ ಜ್ಞಾನದ ಅಗತ್ಯತೆಗಳ ಬಗ್ಗೆ ಅಭಿಪ್ರಾಯ ಪಡೆಯಲು ಕೆಲವು ಉದ್ಯಮ ತಜ್ಞರು ಪ್ರತಿ ಟಿಡಿಸಿಯ ಭಾಗ ವಾಗಿರುತ್ತಾರೆ. ಅಗತ್ಯವಿದ್ದಲ್ಲಿ ಕೆಲವು ಭಾಗಗಳ ಬಗ್ಗೆ ಸರ್ಕಾರಿ ಅಧಿಕಾರಿಗಳು ಅಥವಾ ಪ್ರಾಧಿಕಾರಗಳನ್ನು ಸಂರ್ಪಸಲಾ ಗುತ್ತದೆ, ಆದರೆ ಇದು ಕಡ್ಡಾಯ ಪ್ರಕ್ರಿಯೆಯಲ್ಲ.
‘ನ್ಯಾಯಾಂಗ ಭ್ರಷ್ಟಾಚಾರ’ದ ಆರೋಪ ಸುಪ್ರೀಂ ಕೋರ್ಟನ್ನು ಕೆರಳಿಸಿದೆ. ಅದರಲ್ಲಿ ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತಹ ಕೆಲವು ಗಂಭೀರ ಆರೋಪಗಳಿದ್ದವು ಎನ್ನಲಾಗಿದೆ. ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಕೆಳಹಂತದ ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ವಿವರಿಸುವಾಗ ಬಳಸಲಾದ ಭಾಷೆ ಆಕ್ಷೇಪಾರ್ಹ ರೀತಿಯಲ್ಲಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಾಗಾಗಿಯೇ, ಇಡೀ ಪುಸ್ತಕದ ವಿತರಣೆಯನ್ನು ನಿಲ್ಲಿಸಲು ಸೂಚಿಸಲಾಗಿದ್ದು, ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಪ್ರತಿಕ್ರಿಯೆಗಳ ಅಳವಡಿಕೆ ಹೇಗೆ?
ಪಠ್ಯಪುಸ್ತಕದ ವಿಷಯದ ಬಗ್ಗೆ ಸಲಹೆಗಳು ಅಥವಾ ಗಮನಾರ್ಹ ಪ್ರತಿಕ್ರಿಯೆಗಳು ಬಂದಾಗಲೆಲ್ಲ, ಎನ್ಸಿಇಆರ್ಟಿ ಆ ವಿಷಯವನ್ನು ಪರಿಶೀಲಿಸಲು ಸಮಿತಿಗಳನ್ನು ರಚಿಸುತ್ತದೆ. ಪಠ್ಯಪುಸ್ತಕದ ವಿಷಯವು ಕಾಲ ಕಾಲಕ್ಕೆ ಪರಿಶೀಲನೆಗೆ ಒಳಪಡುವುದು ಸಹಜ ಪ್ರಕ್ರಿಯೆ.
ವಿವಾದಿತ ಪಠ್ಯದ ಕರ್ತೃ ನಿಗೂಢ
ಈಗ ನಿಷೇಧಕ್ಕೊಳಗಾಗಿರುವ ಎನ್ಸಿಇಆರ್ಟಿಯ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ ರೂಪಿಸಲು 60ಕ್ಕೂ ಹೆಚ್ಚು ತಜ್ಞರು ಕೊಡುಗೆ ನೀಡಿದ್ದಾರೆ ಎಂದು ಪಟ್ಟಿ ಮಾಡಲಾಗಿದೆ. ಆದಾಗ್ಯೂ, ವಿವಾದಿತ ಭಾಗವನ್ನು ನಿರ್ದಿಷ್ಟವಾಗಿ ಯಾರು ಬರೆದಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.