ಥಾಣೆ, ಮುಂಬೈ ಮತ್ತು ಓಡಿಸ್ಸಾನಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಧಿಸಿದ ದೆಹಲಿ ಪೊಲೀಸರು
- ದೇಶದ ವಿವಿದೆಡೆ ಗುಪ್ತಚರ ಇಲಾಖೆ ಕಾರ್ಯಾಚರಣೆ
- ಥಾಣೆ, ಮುಂಬೈ ಮತ್ತು ಓಡಿಸ್ಸಾನಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಧಿಸಿದ ದೆಹಲಿ ಪೊಲೀಸರು
- ಬಂಧಿತರಿಂದ ಧಾರ್ಮಿಕ ಪುಸ್ತಕಗಳು, ತೀವ್ರಗಾಮಿ ನಾಯಕರ ಭಾಷಣಗಳು ಮತ್ತು ಸ್ಫೋಟಕ್ಕೆ ಬಳಸುವ ವಸ್ತು ಪತ್ತೆ
ನವದೆಹಲಿ: ಗುಪ್ತಚರ ಇಲಾಖೆಯ ನೇತೃತ್ವದಲ್ಲಿ, ದೆಹಲಿ ಪೊಲೀಸ್ ವಿಶೇಷ ದಳ ಶನಿವಾರ (ಏ.18) ನಡೆಸಿದ ಕಾರ್ಯಾಚರಣೆಯಲ್ಲಿ ಆನ್ಲೈನ್ನಲ್ಲಿ ಭಯೋತ್ಪಾದನಾ (Terrorist) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ, ನಾಲ್ವರನ್ನು ಬಂಧಿಸಿರುವ ಕುರಿತು ವರದಿಯಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಪ್ರವೀಣ್ ಕುಮಾರ್ ತ್ರಿಪಾಠಿ, ಆರೋಪಿಗಳು, ಲಷ್ಕರ್ ಮತ್ತು ಖಲೀಫತ್ ಸಂಘಟನೆಯ ಸಿದ್ಧಾಂದಗಳಿಗೆ ಪ್ರಭಾವಿತರಾಗಿದ್ದರೆಂದು ತಿಳಿದು ಬಂದಿದೆ. ಇವರು ಘಜ್ವಾ-ಎ-ಹಿಂದ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂದಾಗಿದ್ದರು ಎಂದು ಅವರು ಹೇಳಿದ್ದಾರೆ.
ಬಂಧಿತ ಆರೋಪಿಗಳು, ಎನ್‌ಕ್ರಿಪ್ಟ್ ಮಾಡಿದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಯೋತ್ಪಾದಕರ ಸಂಫರ್ಕಕ್ಕೆ ಬಂದಿದ್ದಾರೆ. ಹಾಗೆಯೇ ಇತರರನ್ನು ಈ ಸಂಘಟನೆಯಲ್ಲಿ ಸೇರಿಕೊಳ್ಳುವಂತೆ ಪ್ರೇರೆಪಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಬಂಧಿತರನ್ನು, ಥಾಣೆಯ ಮೊಸೈಬ್ ಅಹ್ಮದ್ ಅಲಿಯಾಸ್ ಸೋನು ಅಲಿಯಾಸ್ ಕಲಾಂ, ಮುಂಬೈನ ಮೊಹಮ್ಮದ್ ಹಮ್ಮದ್, ಭುವನೇಶ್ವರದ ಶೇಖ್ ಇಮ್ರಾನ್ ಮತ್ತು ಬಿಹಾರದ ಕತಿಹಾರ್‌ನ ಮೊಹಮ್ಮದ್ ಸೊಹೈಲ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್‌ಗಳು, ಇತರ ಸಂವಹನ ಸಾಧನಗಳು ಹಾಗೂ ಐಇಡಿ ಸ್ಪೋಟಕ ತಯಾರಿಕೆಗೆ ಬಳಸಲಾಗುವ ಕಚ್ಚಾ ವಸ್ತುಗಳನ್ನು ವಶಕ್ಕೆ ತೆಗದುಕೊಂಡಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಈ ನಾಲ್ವರು ಇಸ್ಲಾಂನ ತೀವ್ರಗಾಮಿ ನಾಯಕರ ಭಾಷಣಗಳಿಂದ ಪ್ರೇರೆಪಿತರಾಗಿದ್ದರೆಂದು ತಿಳಿದು ಬಂದಿದೆ. ಇವರಿಂದ ಅನೇಕ ಧಾರ್ಮಿಕ ಗ್ರಂಥಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತರ ಬ್ಯಾಂಕ್ ಅಕೌಂಟ್, ಸಾಮಾಜಿಕ ಜಾಲತಾಣ ಖಾತೆ ಮತ್ತು ಇತರ ಡಿಜಿಟಲ್ ಲಿಂಕ್ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಇವರ ಮೇಲೆ ಭಯೋತ್ಪಾದನಾ ನಿಗ್ರಹದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).