terrorist 
ದೇಶ

ಹರಿಹರದಲ್ಲಿ ಸೆರೆಸಿಕ್ಕ ಉಗ್ರನ ಫೋನ್‌ನಲ್ಲಿತ್ತು ಸುಳಿವು: ರಾಮಮಂದಿರ ಉಗ್ರರ ಟಾರ್ಗೆಟ್?

ದಾವಣಗೆರೆ/ಹರಿಹರ: ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರ ಬಲೆಗೆ ಬಿದ್ದ ಶಂಕಿತ ಉಗ್ರ( terrorist) ಸೋಹೇಲ್ ವಿಚಾರಣೆ ವೇಳೆ ಹಲವು ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ರಾಮ ಮಂದಿರದ ಮೇಲೆ ದಾಳಿ ಪಾಕಿಸ್ತಾನದ ಉಗ್ರ ಸಂಘಟನೆಗಳ ಗುರಿಯಾಗಿದ್ದು, ಇದಕ್ಕಾಗಿ ಭಾರತದ ಕೆಲವು ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಅನುಮಾನ ಮೂಡಿದೆ. ಸೋಹೇಲ್‌ನ ಮೊಬೈಲ್‌ನಲ್ಲಿ ದೊರಕಿರುವ ಕೆಲವು ಮಾಹಿತಿ ಗುಮಾನಿಯನ್ನು ಪುಷ್ಟಿಕರಿಸುತ್ತವೆ ಎಂದು ಮೂಲಗಳು ತಿಳಿಸಿವೆ.
ರಾಮ ಮಂದಿರವನ್ನು ಗ್ರೆನೇಡ್‌ನಿಂದ ಉಡಾಯಿಸಬೇಕು ಎನ್ನುವ ಸಂದೇಶ ಸೋಹೇಲ್‌ನ ವಾಯ್ಸ್ ಚಾಟ್‌ನಲ್ಲಿದೆ ಎನ್ನಲಾಗಿದೆ. ಈ ವಿಚಾರ ಸ್ಫೋಟಕ್ಕಾಗಿ ಸಿದ್ಧತೆ ನಡೆಸಲಾಗುತ್ತಿದೆಯೆ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೊಬೈಲ್‌ನಲ್ಲಿರುವ ಮಾಹಿತಿ ಕಲೆ ಹಾಕುತ್ತಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ನೆರವು ಪಡೆಯಲಿದ್ದಾರೆ ಎನ್ನಲಾಗಿದೆ. ಸೋಹೇಲ್‌ನ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಆತನು ಪಾಕಿಸ್ತಾನದ ಉಗ್ರ ಸಂಘಟನೆಗಳ ಸಂಪರ್ಕದಲ್ಲಿರುವುದಕ್ಕೆ ಸುಳಿವುಗಳು ದೊರೆತಿವೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಸಂಬಂಧ ಪಾಕಿಸ್ತಾನದ ಉಗ್ರ ಸಂಘಟನೆಗಳ ಮುಖಂಡರು ಸೋಹೇಲ್ ಜತೆಗೂ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದವನಾದ ಸೋಹೇಲ್, ಪಾಕ್ ಜತೆಗೆ ಇಷ್ಟೆಲ್ಲ ಸಂಪರ್ಕವಿಟ್ಟುಕೊಂಡು ಹರಿಹರಕ್ಕೆ ಬಂದಿದ್ದೇಕೆ? ಕರ್ನಾಟಕದಲ್ಲಿ ಆತನ ಸಹಚರರು ಇರುವರೇ? ಇಲ್ಲಿ ವಿದ್ವಂಸಕ ಕೃತ್ಯ ನಡೆಸುವ ಸಂಚು ರೂಪಿಸಲಾಗುತ್ತಿತ್ತೇ? ಎನ್ನುವ ಜಾಡು ಹಿಡಿದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇನ್ನೂ ಹಲವು ವಿಚಾರಗಳು ಬೆಳಕಿಗೆ ಬರಬೇಕಿದೆ. ವಿವಿಧ ಬಗೆಯ ಪಿಸ್ತೂಲ್‌ನ ಚಿತ್ರಗಳಿರುವ ಪೋಸ್ಟರ್‌ಗಳೂ ಆರೋಪಿಯ ಮೊಬೈಲ್‌ನಲ್ಲಿದ್ದವು ಎಂದು ತಿಳಿದುಬಂದಿದೆ.

ನ್ಯಾಯಾಂಗ ಬಂಧನಕ್ಕೆ

ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಶಂಕಿತ ಉಗ್ರ ಸೋಹೇಲ್‌ನನ್ನು ಬುಧವಾರ ಹರಿಹರದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಯನ್ನು ಜು.4ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ನಡುವೆ ಪೊಲೀಸರು ಹೆಚ್ಚಿನ ತನಿಖೆಗಾಗಿ ಸೋಹೇಲ್‌ನನ್ನು ಪೊಲೀಸ್ ವಶಕ್ಕೆ ಕೇಳುವ ಸಾಧ್ಯತೆ ಇದೆ. ಪೊಲೀಸರು ಮಂಗಳವಾರ ಬೆಳಗಿನ ಜಾವ ಹರಿಹರ ತಾಲೂಕು ಬನ್ನಿಕೋಡು ಗ್ರಾಮದ ಹೊರ ವಲಯದ ಬಾಡಿಗೆ ಮನೆಯೊಂದರಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಗ್ರಾಮದ ಸಮೀಪವಿರುವ ಖಾಸಗಿ ಕಾರ್ಖಾನೆಯೊಂದರಲ್ಲಿ ರೆಡ್ ಆಕ್ಸೆಡ್ ಪೇಂಟಿಂಗ್ ಮಾಡಲು ಬಂದಿದ್ದ 10 ಜನ ಕಾರ್ಮಿಕರ ತಂಡದಲ್ಲಿ ಸೋಹೇಲ್ ಕೂಡಾ ಒಬ್ಬ. ಆತ ಹರಿಹರ ತಾಲೂಕಿಗೆ ಬಂದು 15 ದಿನಗಳಾಗಿವೆ.

ಬೆಂಗಳೂರಲ್ಲಿವೆ 50 ಸ್ಲೀಪರ್​​ ಸೆಲ್?

ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಸ್ಲೀಪ‌ರ್ ಸೆಲ್‌ಗಳಿದ್ದು, ಅದರಲ್ಲಿದ್ದ ಶಂಕಿತ ಉಗ್ರರ ಜತೆಗೂ ಸೋಹೇಲ್ ನಂಟು ಹೊಂದಿದ್ದ ಎನ್ನಲಾಗಿದೆ. ಪಾಕಿಸ್ತಾನದ ಹಲವು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಈತ ಹರಿಹರ, ದಾವಣಗೆರೆ, ತುಮಕೂರು, ಕರಾವಳಿ ಭಾಗದ ಶಿವಮೊಗ್ಗ, ತಿರ್ಥಹಳ್ಳಿಯಲ್ಲಿ ಯುವಕರ ಮನಃಪರಿವರ್ತಿಸಿ ಅವರನ್ನು ವಿಧ್ವಂಸಕ ಕೃತ್ಯಕ್ಕೆ ಹುರಿದುಂಬಿಸಲು ಆಗಮಿಸಿದ್ದ ಎನ್ನಲಾಗಿದೆ. ಸೋಹೇಲ್ ಮೊಬೈಲ್‌ನಲ್ಲಿರುವ ಹೆಚ್ಚುವರಿ ಮಾಹಿತಿ ರಿಟೀವ್‌ಗೊಳಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಸ್ಥಳೀಯ ಭಾಷೆ ಬಾರದ ಸೋಹೇಲ್ ಬೆಂಗಳೂರಿಂದ ನೇರವಾಗಿ ಹರಿಹರಕ್ಕೆ ಬಂದಿರುವ ಬಗ್ಗೆ, ಕರ್ನಾಟಕದಲ್ಲಿ ಆತನ ಸಹಚರರು ಎಲ್ಲೆಲ್ಲಿ ಇದ್ದಾರೆ? ಮುಂದಿನ ಸಂಚು ಏನಾಗಿತ್ತು? ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಎನ್‌ಐಎ ಅಧಿಕಾರಿಗಳು ಪ್ರಕರಣದ ತನಿಖೆ ಮುಂದುವರಿಸುವ ಸಾಧ್ಯತೆ ಇದೆ.