ಅಮಿತ್ ಶಾ 
ದೇಶ

2029ರ ವೇಳೆ ಕಾಶ್ಮೀರದಲ್ಲಿ ಭಯೋತ್ಪಾದನೆ, ಈಶಾನ್ಯದಲ್ಲಿ ಆಂತರಿಕ ದಂಗೆ ನಿರ್ಮೂಲನೆ: ಅಮಿತ್ ಶಾ | Amit Shah

ನವದೆಹಲಿ: 2026 ಮಾರ್ಚ್ 31ರೊಳಗೆ ನಕ್ಸಲಿಸಂ ಕೊನೆಗಾಣಿಸಿದಂತೆ 2029ರ ವೇಳೆಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಈಶಾನ್ಯ ಭಾರತದಲ್ಲಿ ಆಂತರಿಕ ದಂಗೆಯನ್ನು ನಿರ್ಮೂಲನೆ ಮಾಡಲಾಗುವುದು ಎಂದು ಸೋಮವಾರ(ಫೆ. 16) ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಹೇಳಿದ್ದಾರೆ.
ನವದೆಹಲಿಯಲ್ಲಿ ದೆಹಲಿ ಪೊಲೀಸರ 79ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಯೋಜನೆಯ ಭಾಗವಾಗಿ ದೆಹಲಿ ಪೊಲೀಸ್ ವಿಶೇಷ ಕೋಶದ ಸಂಯೋಜಿತ ಪ್ರಧಾನ ಕಚೇರಿಯು ಪ್ರಮುಖ ಪಾತ್ರ ವಹಿಸುತ್ತದೆ. ಸಂಸತ್ತಿನ ಮೇಲೆ ದಾಳಿ ಮತ್ತು ಕೆಂಪು ಕೋಟೆ ಬಳಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟದಂತಹ ಸಂಕೀರ್ಣ ಪ್ರಕರಣಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
2014ಕ್ಕಿಂತ ಮೊದಲು ಭಾರತದ ಆಂತರಿಕ ಭದ್ರತೆ ಗಂಭೀರ ಸವಾಲುಗಳನ್ನು ಎದುರಿಸಿತ್ತು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತದಲ್ಲಿ, ಈಗ ಸಮಸ್ಯೆ 80 ಪ್ರತಿಶತ ನಿಯಂತ್ರಣಕ್ಕೆ ತರಲಾಗಿದೆ. ಮಾರ್ಚ್ 31ರೊಳಗೆ ಸರ್ಕಾರವು ಮಾವೋವಾದಿ ಹಿಂಸಾಚಾರವನ್ನು ಸಂಪೂರ್ಣವಾಗಿ ಕೊನೆಗೊಳಿಸುವತ್ತ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಶಾನ್ಯದಲ್ಲಿ ದಂಗೆಕೋರ ಗುಂಪುಗಳೊಂದಿಗೆ ಸುಮಾರು 20 ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 10,000 ಕ್ಕೂ ಹೆಚ್ಚು ಯುವಕರು ತಮ್ಮ ಶಸ್ತ್ರಾಸ್ತ್ರಗಳನ್ನು ಬಿಟ್ಟು ಶರಣಾಗಿ ಮುಖ್ಯವಾಹಿನಿಗೆ ಸೇರಿದ್ದಾರೆ ಎಂದಿದ್ದಾರೆ.
ಇದೇ ವೇಳೆ 370ನೇ ವಿಧಿ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಬಳಿಕ ಭದ್ರತಾ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ. ಈಗ ನಾನು ದೇಶವಾಸಿಗಳಿಗೆ 2029ರ ವೇಳೆಗೆ ಜಮ್ಮು-ಕಾಶ್ಮೀರ ಮತ್ತು ಈಶಾನ್ಯದಲ್ಲಿ ದಂಗೆ ಕೊನೆಯಾಗಲಿದೆ ಎಂಬುದನ್ನು ಭರವಸೆ ನೀಡಬಲ್ಲೇ ಎಂದು ಆಶ್ವಾಸನೆ ನೀಡಿದ್ದಾರೆ (ಏಜೆನ್ಸೀಸ್).