Jaishankar | ವಿದೇಶಾಂಗ ಸಚಿವ ಜೈಶಂಕರ್ 
ದೇಶ

ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ; ರಾಜಕೀಯ ಲಾಭಕ್ಕಾಗಿ ನಿರ್ಲಕ್ಷಿಸಬಾರದು: ಜೈಶಂಕರ್ | Jaishankar

ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಕೆಲವು ದೇಶಗಳು ಶೂನ್ಯ ಸಹಿಷ್ಣುತೆ ಪ್ರದರ್ಶಿಸದ ಕಾರಣ ಬೆದರಿಕೆ ಮುಂದುವರೆದಿದೆ. ರಾಜಕೀಯ ಲಾಭಕ್ಕಾಗಿ ಅದನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.

ನವದೆಹಲಿ: ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಕೆಲವು ದೇಶಗಳು ಶೂನ್ಯ ಸಹಿಷ್ಣುತೆ ಪ್ರದರ್ಶಿಸದ ಕಾರಣ ಬೆದರಿಕೆ ಮುಂದುವರೆದಿದೆ. ರಾಜಕೀಯ ಲಾಭಕ್ಕಾಗಿ ಅದನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.

ಭಾನುವಾರ(ಅ. 25) ನವದೆಹಲಿಯಲ್ಲಿ ನಡೆದ ಚಿನ್ಮಯ ಮಿಷನ್‌ನ 75 ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿರುವ ಅವರು, ಭಯೋತ್ಪಾದನೆಯನ್ನು ದೇಶಗಳು ತಮ್ಮ ಗುರಿಗಳನ್ನು ಸಾಧಿಸುವ ಸಾಧನವಾಗಿ ನೋಡಬಾರದು. ಮತ್ತು ಅದನ್ನು ಸಹಿಸಬಾರದು ಎಂದು ಪ್ರತಿಪಾದಿಸಿದ್ದಾರೆ.

ಕೆಲವು ದೇಶಗಳು ರಾಜಕೀಯ ಕಾರಣಗಳಿಗಾಗಿ ಇತಿಹಾಸ ಕಲಿಸಿದ ಪಾಠಗಳನ್ನು ಬದಿಗಿಡುತ್ತಿವೆ. ಅವರು ಭಯೋತ್ಪಾದನೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಸಮುದಾಯವು ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವನ್ನು ಅಳವಡಿಸಿಕೊಳ್ಳಬೇಕು, ಅದರ ಸ್ವರೂಪ ಏನೇ ಇರಲಿ ಎಂದು ಹೇಳಿದ್ದಾರೆ.

ಭಯೋತ್ಪಾದನೆ ಜಗತ್ತು ಎದುರಿಸುತ್ತಿರುವ ಸಾಮಾನ್ಯ ಬೆದರಿಕೆ. ಈ ಬೆದರಿಕೆಯನ್ನು ಎದುರಿಸಲು ನಾವು ಒಟ್ಟಾಗಿ ಮುಂದುವರಿಯಬೇಕು. ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಭಯೋತ್ಪಾದನೆಯನ್ನು ಎದುರಿಸಲು ತಮ್ಮ ಬದ್ಧತೆಯನ್ನು ತೋರಿಸಬೇಕೆಂದು ಅವರು ವಿಶ್ವದ ದೇಶಗಳಿಗೆ ಕರೆ ನೀಡಿದ್ದಾರೆ.

ಯುದ್ಧಗಳು ಜಾಗತಿಕ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯ ಮೇಲೆ ವ್ಯಾಪಕವಾದ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಎಲ್ಲೇ ಯುದ್ಧ ನಡೆದರೂ, ಪ್ರಪಂಚದಾದ್ಯಂತ ಅದರ ಪರಿಣಾಮ ಉಂಟಾಗುತ್ತದೆ. ಇರಾನ್ ಮತ್ತು ಉಕ್ರೇನ್‌ನಲ್ಲಿನ ಪ್ರಸ್ತುತ ಯುದ್ಧಗಳಿಗೆ ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಪರಿಹಾರ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕತೆಯನ್ನು ಸಮರ್ಥಿಸಿಕೊಂಡು, ಎಲ್ಲಾ ದೇಶಗಳೊಂದಿಗೆ ಸಂಬಂಧವನ್ನು ಹೊಂದಿರಬೇಕು ಎಂದು ಹೇಳಿದ್ದರು. ಈ ಹಿನ್ನೆಲೆ ಈಗ ಜೈಶಂಕರ್ ಅವರ ಮಾತುಗಳು ಬಂದಿವೆ (ಏಜೆನ್ಸೀಸ್).