ಘಟನೆಯ ಸ್ಥಳ 
ದೇಶ

ಭೀಕರ ಅಪಘಾತ: 250 ಕಿಮೀ ವೇಗದಲ್ಲಿ ಬಂದು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದ BMW Z4 ಕಾರು: ಇಬ್ಬರ ದೇಹ ಛಿದ್ರ-ಛಿದ್ರ

ಮುಂಬೈ: ಮುಂಬೈನ ಬದ್ಲಾಪುರದ ಮುಂಬೈ-ವಡೋದರಾ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 250 ಕಿಮೀ ವೇಗದಲ್ಲಿ ಬಂದ ಬಿಎಂಡಬ್ಲ್ಯು ಕಾರು(BMW Z4 car) ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕಾರು ಟಿಟ್ವಾಲಾದಿಂದ ಬದ್ಲಾಪುರದ ಕಡೆಗೆ ಚಲಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಸಮಯದಲ್ಲಿ, ಕಾರಿನ ವೇಗ ಗಂಟೆಗೆ ಸುಮಾರು 250 ಕಿಲೋ ಮೀಟರ್​ನಲ್ಲಿತ್ತು ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಡಿಕ್ಕಿ ರಭಸಕ್ಕೆ ಕಾರು ನುಜ್ಜು ಗುಜ್ಜಾಗಿದ್ದು, ಇಬ್ಬರ ದೇಹಗಳು ಛಿದ್ರವಾಗಿ ದೇಹದ ಭಾಗಗಳು ಹಲವಾರು ಮೀಟರ್ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ.
ಮೃತರನ್ನು ಬದ್ಲಾಪುರ ನಿವಾಸಿಗಳಾದ ಯೋಗೇಶ್ ದಿಘೆ ಮತ್ತು ರಿಕೇಬಾ ಜಕಪ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮೂರನೇ ವ್ಯಕ್ತಿ ಆನಂದ್ ಎನ್ನಲಾಗಿದ್ದು, ಥಾಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬರ್ತಡೇ ಪಾರ್ಟಿ ಮುಗಿಸಿಕೊಂಡು ಹಿಂತಿರುಗುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ದ್ಲಾಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ತಂಡವು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮದ್ಯಪಾನದ ಆರೋಪ ಸೇರಿದಂತೆ ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).