ಢಾಕಾದಲ್ಲಿ ಹಿಂದೂಗಳು ಪ್ರತಿಭಟನೆ ನಡೆಸಿರುವುದು.
ಢಾಕಾ: ನೆರೆಯ ಬಾಂಗ್ಲಾ ದೇಶದಲ್ಲಿ(Bangladesh) ಮತ್ತೆ ಧಾರ್ಮಿಕ ದ್ವೇಷದ ಉದ್ವಿಗ್ನತೆ ಉಂಟಾಗಿದ್ದು, ಶ್ರೀರಾಮನ ಪ್ರತಿಮೆಗೆ ಚಪ್ಪಲಿಯಿಟ್ಟು ಅಪಮಾನಿಸಲಾಗಿದೆ ಎಂದು ಆರೋಪಿಸಲಾಗಿದ್ದು ಶುಕ್ರವಾರ(ಜೂ. 19) ರಾಜಧಾನಿ ಢಾಕಾದ ಹಲವು ಪ್ರದೇಶಗಳಲ್ಲಿ ಹಿಂದೂಗಳು ಟಾರ್ಚ್ ಮತ್ತು ಮೇಣದಬತ್ತಿಗಳೊಂದಿಗೆ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಜೈಶ್ರೀರಾಮ್ ನಿನಾದಂ ಮೊಳಗಿದೆ.
ಇತ್ತೀಚೆಗೆ ಉತ್ತರ ಗೈಬಂಧ ಜಿಲ್ಲೆಯ ಶ್ರೀ ರಾಧಾ ಗೋವಿಂದ ದೇವಸ್ಥಾನ ಸಮಿತಿಯು 81 ಅಡಿ ಎತ್ತರದ ರಾಮನ ಪ್ರತಿಮೆಯನ್ನು ಸ್ಥಾಪಿಸಲು ಮುಂದಾಗಿತ್ತು ಎನ್ನಲಾಗಿದೆ. ಆದಾಗ್ಯೂ, ಉಗ್ರಗಾಮಿಗಳ ಬೆದರಿಕೆಯಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಇದೇ ವೇಳೆ ಕೆಲವರು ಪ್ರತಿಮೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪರಿಸ್ಥಿತಿ ಮತ್ತೆ ಉದ್ವಿಗ್ನತೆಯನ್ನುಂಟು ಮಾಡಿದೆ ಎಂದು ವರದಿಗಳು ಬಿತ್ತರವಾಗಿವೆ.
ರಾಮನ ಪ್ರತಿಮೆಗೆ ಅವಮಾನ ಮಾಡಿದ್ದನ್ನು ಖಂಡಿಸಿ ಢಾಕಾದಲ್ಲಿ ಸಾವಿರಾರು ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ಹಲವಾರು ಹಿಂದೂ ಸಂಘಟನೆಗಳ ಆಶ್ರಯದಲ್ಲಿ ನಿನ್ನೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಬೃಹತ್ ರ್ಯಾಲಿಯನ್ನು ಆಯೋಜಿಸಲಾಗಿತ್ತು. 72 ಗಂಟೆಗಳ ಒಳಗೆ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದವರನ್ನು ಬಂಧಿಸುವಂತೆ ಒತ್ತಾಯಿಸಿವೆ.
ಹಿಂದೂ ಮಹಾಜ್ಯೋತ್ ಸಂಘಟನೆಯ ವತಿಯಿಂದ ಶಹಬಾಗ್ ಕೌದಿಲಿಯಲ್ಲಿ ಹೆಚ್ಚಿನ ಸಂಖ್ಯೆಯ ಸಾಮಾನ್ಯ ಜನರು ಮತ್ತು ಹಿಂದೂ ಗುಂಪುಗಳು ಭಾಗವಹಿಸಿದ್ದವು. ಅವರು ಅಲ್ಲಿಂದ ರಾಷ್ಟ್ರೀಯ ಪ್ರೆಸ್ ಕ್ಲಬ್‌ಗೆ ಮೆರವಣಿಗೆ ನಡೆಸಿದರು ಎನ್ನಲಾಗಿದೆ. ಅಲ್ಲಷ್ಟೇ ಅಲ್ಲದೇ ಪ್ರೆಸ್ ಕ್ಲಬ್ ಮುಂದೆ ಬೃಹತ್ ಮಾನವ ಸರಪಳಿಯೊಂದಿಗೆ ಮತ್ತು ಢಾಕಾ ರಿಪೋರ್ಟರ್ಸ್ ಯೂನಿಟಿ ಕಟ್ಟಡದ ಮುಂದೆ ಇನ್ನೂ ಕೆಲವು ಜನರು ಪ್ರತಿಭಟನೆ ಮಾಡಿದ್ದಾರೆ.
ಇನ್ನೂ ರಂಗ್‌ಪುರದಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ ಉದ್ವಿಗ್ನತೆ ಹೆಚ್ಚಾಯಿತು. ಅಲ್ಪಸಂಖ್ಯಾತರು ಎದುರಿಸುತ್ತಿರುವ ಕಷ್ಟಗಳ ಹೊರತಾಗಿಯೂ ಬಿಎನ್ಪಿ ಸರ್ಕಾರ ಮೌನವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ (ಏಜೆನ್ಸೀಸ್).