- ಹತ್ತು ಸಾವಿರ ಸಂಬಳದ ರಾಪಿಡೋ ಚಾಲಕನ ಬ್ಯಾಂಕ್ ಖಾತೆಯಲ್ಲಿ 300 ಕೋಟಿ ಹಣ
- ಹವಾಲಾ ದಂಧೆಗೆ ಬ್ಯಾಂಕ್ ಖಾತೆಯನ್ನು ಬಾಡಿಗೆಗೆ ನೀಡಿದ್ದ ಚಾಲಕ
- ಈ ಖಾತೆ ಮೂಲಕ ಕ್ರಿಕೆಟ್ ಬೆಟ್ಟಿಂಗ್, ಷೇರು ಮಾರುಕಟ್ಟೆ ಅಕ್ರಮ ನಡೆದಿರುವ ಸಾಧ್ಯತೆ
ಅಹಮದಾಬಾದ್: ತಿಂಗಳಿಗೆ ಹತ್ತು ಸಾವಿರ ಸಂಬಳ ಪಡೆಯಲು ರಾಪಿಡೋ ಬೈಕ್ ಚಾಲನೆ (Rapido Driver) ಮಾಡುತ್ತಿದ್ದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆದ ಬಗ್ಗೆ ಗುಜರಾತಿನ ಅಹಮದಾಬಾದ್ನಲ್ಲಿ ವರದಿಯಾಗಿದೆ.
ಬದುಕನ್ನು ಸಾಗಿಸಲು ರಾಪಿಡೋ ಬೈಕ್ ಚಲಾಯಿಸುತ್ತಿದ್ದ ಪ್ರದೀಪ್ ಓಡೆ ಎಂಬವನ ಬ್ಯಾಂಕ್ ಖಾತೆಯಲ್ಲಿ ಸುಮಾರು 300 ಕೋಟಿ ಹಣ ವರ್ಗಾವಣೆ ನಡೆದ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಆರ್ಥಿಕ ವಂಚನೆಯ ದೊಡ್ಡ ಜಾಲವೇ ಬೆಳಕಿಗೆ ಬಂದಿದೆ.
25 ಸಾವಿರಕ್ಕೆ ಮಾರಾಟವಾಯ್ತು ಬ್ಯಾಂಕ್ ಖಾತೆ!
ತನಿಖೆಯ ವೇಳೆ ಪ್ರದೀಪ್ ಓಡೆ ಬಿಚ್ಚಿಟ್ಟ ಸತ್ಯ ಬೆಚ್ಚಿಬೀಳಿಸುವಂತಿದೆ. ಹಣದ ಆಸೆಗಾಗಿ ತನ್ನ ಬ್ಯಾಂಕ್ ಖಾತೆಯನ್ನು ಕಿರಣ್ ಪರ್ಮಾರ್ ಎಂಬ ವ್ಯಕ್ತಿಗೆ 25,000 ರೂ.ಗೆ ಬಾಡಿಗೆ ನೀಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ತಾನು ಸಹಿ ಮಾಡಿ ಕೊಡುವ ಪ್ರತಿಯೊಂದು ಚೆಕ್‌ಗೆ ಆತನಿಗೆ 400 ರೂ. ಕಮಿಷನ್ ಸಿಗುತ್ತಿತ್ತು. ಬಡತನವನ್ನೇ ಬಂಡವಾಳವಾಗಿಸಿಕೊಂಡ ದಂಧೆಕೋರರು, ಈತನ ದಾಖಲೆಗಳನ್ನು ಬಳಸಿ ಪ್ರದೀಪ್ ಎಂಟರ್‌ಪ್ರೈಸಸ್ ಎಂಬ ಹೆಸರಿನಲ್ಲಿ ನಕಲಿ ಕಂಪನಿ ತೆರೆದು ನೂರಾರು ಕೋಟಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದರು.
ನಕಲಿ ಕಂಪನಿ; ಅಸಲಿ ಮನಿ
ತನಿಖಾಧಿಕಾರಿಗಳು ಕಮಲೇಶ್ ಟ್ರೇಡಿಂಗ್ ಮತ್ತು ರೌನಕ್ ಟ್ರೇಡರ್ಸ್ ಎಂಬ ಇನ್ನೂ ಎರಡು ಸಂಸ್ಥೆಗಳನ್ನು ಪತ್ತೆಹಚ್ಚಿದ್ದಾರೆ. ಈ ಕಂಪನಿಗಳು ಕೇವಲ ಕಾಗದದ ಮೇಲೆ ಮಾತ್ರ ಇದ್ದು, 2024ರಲ್ಲಿ ನೋಂದಣಿಯಾದ ಈ ಸಂಸ್ಥೆಗಳಲ್ಲಿ ಯಾವುದೇ ವ್ಯಾಪಾರ ನಡೆಯುತ್ತಿರಲಿಲ್ಲ. ಆದರೆ, ಇವುಗಳ ಖಾತೆಯಲ್ಲಿ ಒಟ್ಟಾರೆಯಾಗಿ 550 ಕೋಟಿ ರೂ. ಜಮೆಯಾಗಿತ್ತು. ಇಡಿ ವರದಿಯ ಪ್ರಕಾರ, ಈ ಹಣವನ್ನು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಮತ್ತು ಷೇರು ಮಾರುಕಟ್ಟೆಯ ಅಕ್ರಮಗಳಿಗೆ (Stock Manipulation) ಬಳಸಲಾಗುತ್ತಿತ್ತು.
ಈ ಏಲೆಲ್ಲಿ ಬಳಕೆಯಾಗಿದೆ?
ಈ ಹಣವನ್ನು ಮುಖ್ಯವಾಗಿ ಆನ್‌ಲೈನ್ ಬೆಟ್ಟಿಂಗ್ ಅದರಲ್ಲೂ ಕ್ರಿಕೆಟ್ ಬೆಟ್ಟಿಂಗ್ಗೆ ಹೆಚ್ಚಾಗಿ ಬಳಸಲಾಗಿದ್ದು, ಈ ನಕಲಿ ಖಾತೆಗಳ ಮೂಲಕ ವೈಟ್ ಮನಿಯಾಗಿ ಪರಿವರ್ತನೆ ಮಾಡಲಾಗುತ್ತಿತ್ತು. ಹಾಗೆಯೇ ಷೇರು ಮಾರುಕಟ್ಟೆಯಲ್ಲಿ ಕೃತಕವಾಗಿ ಷೇರುಗಳ ಬೆಲೆ ಏರಿಸಲು ಈ ನಕಲಿ ಖಾತೆಗಳ ಮೂಲಕ ಷೇರುಗಳನ್ನು ಖರೀದಿಸಲಾಗುತ್ತಿತ್ತು. ಕೆಲ ಉದ್ಯಮಿಗಳ ಅದ್ದೂರಿ ಮದುವೆಯಲ್ಲಿ ಸಹ ಈ ಹಣ ಬಳಕೆಯಾದ ಬಗ್ಗೆ ಮಾಹಿತಿ ದೊರೆತಿದೆ.
ಮುಂದಿನ ಹಂತವೇನು?
ಈ ಬೃಹತ್ ಹಗರಣದಲ್ಲಿ ಶೇಖ್ ಮೊಯಿನ್ ಮೊಹಮ್ಮದ್ ಶಫಿ ಎಂಬಾತನ ಹೆಸರೂ ಕೇಳಿಬಂದಿದ್ದು, ಈ ಯೋಜನೆಯ ಹಿಂದೆ ಹಲವು ನಕಲಿ ಗುರುತುಗಳನ್ನು ಬಳಸಲಾಗಿದೆ. ಇಡಿ ಅಧಿಕಾರಿಗಳು ಈಗ ಈ ಹಣದ ಹಾದಿಯ ಪೂರ್ಣ ವ್ಯಾಪ್ತಿಯನ್ನು ಪತ್ತೆಹಚ್ಚುತ್ತಿದ್ದು, ದಂಧೆಯ ಹಿಂದಿರುವ ದೊಡ್ಡ ತಲೆಗಳಿಗೆ ಬಲೆ ಬೀಸಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಂಧನಗಳು ಮತ್ತು ಆಸ್ತಿ ಜಪ್ತಿ ಆಗುವ ಸಾಧ್ಯತೆಯಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್).