ಶಿಮ್ಲಾ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟೆಂಪೋವೊಂದು ರಸ್ತೆ ಬದಿಯ ಕಂದಕಕ್ಕೆ ಬಿದ್ದ ಪರಿಣಾಮ, ನಾಲ್ವರು ಮೃತಪಟ್ಟು, 14 ಮಂದಿ ಗಾಯಗೊಂಡಿದ್ದಾರೆ ಎಂದು ಭಾನುವಾರ(ಏ. 05) ವರದಿಯಾಗಿದೆ.
ಶನಿವಾರ ತಡರಾತ್ರಿ ಈ ಅಪಘಾತ ನಡೆದಿದೆ. ಬ್ಬರು ಮಕ್ಕಳು ಸೇರಿದಂತೆ 22 ಪ್ರವಾಸಿಗರು ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದರು. ಜಲೋರಿ ಪಾಸ್ನಿಂದ ಹಿಂತಿರುಗಿ ಭುಂತರ್ ಕಡೆಗೆ ಇಳಿಯುತ್ತಿದ್ದ ವಾಹನವು ಮಳೆಯಿಂದಾಗಿ ರಸ್ತೆಯಿಂದ ಜಾರಿ ಕಮರಿಗೆ ಬಿದ್ದಿದೆ ಎನ್ನಲಾಗಿದೆ.
ಟೆಂಪೋ ಬಿದ್ದ ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ರಾತ್ರಿ ಸ್ಥಳೀಯರೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಉಳಿದ 18 ಮಂದಿಯನ್ನು ರಕ್ಷಿಸಿ ಮೇಲಕ್ಕೆ ಎತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, 18 ಮಂದಿಯಲ್ಲಿ 14 ಜನ ಗಾಯಗೊಂಡಿದ್ದು ಅವರನ್ನು ಬಂಜಾರ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಪ್ರಯಾಣಿಕರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತ ಸಂಭವಿಸಿದ ಬಂಜಾರ್ ಪಟ್ಟಣದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಜಿಬಿಯಲ್ಲಿರುವ ಹೋಟೆಲ್‌ನಲ್ಲಿ ಪ್ರವಾಸಿಗರು ತಂಗಿದ್ದರು ಎಂದು ಹೇಳಿದ್ದಾರೆ (ಏಜೆನ್ಸೀಸ್).