ತಾತ್ಕಾಲಿಕವಾಗಿ ಬ್ಯಾನ್​ ಆಗಿದ್ದ ಟೆಲಿಗ್ರಾಮ್​ ಭಾರತದಲ್ಲಿ ರೀ ಎಂಟ್ರಿ...ಆದ್ರೆ ಜೂನ್​ 30ರವರೆಗೆ ಈ ಫೀಚರ್​ ಲಭ್ಯವಿಲ್ಲ! Telegram  
ದೇಶ

ತಾತ್ಕಾಲಿಕವಾಗಿ ಬ್ಯಾನ್​ ಆಗಿದ್ದ ಟೆಲಿಗ್ರಾಮ್​ ಭಾರತದಲ್ಲಿ ರೀ ಎಂಟ್ರಿ...ಆದ್ರೆ ಜೂನ್​ 30ರವರೆಗೆ ಈ ಫೀಚರ್​ ಲಭ್ಯವಿಲ್ಲ! Telegram

ಪ್ರಮುಖ ಮುಖ್ಯಾಂಶಗಳು

  • ನೀಟ್ ಮರುಪರೀಕ್ಷೆ ಬೆನ್ನಲ್ಲೇ ಭಾರತದಲ್ಲಿ ಟೆಲಿಗ್ರಾಮ್ ಬ್ಯಾನ್ ಅಂತ್ಯ
  • ಭಾರತದಲ್ಲಿ ಮತ್ತೆ ಲಭ್ಯವಾದ ಮೆಸೇಜಿಂಗ್​ ಆ್ಯಪ್​ ಟೆಲಿಗ್ರಾಮ್
  • ಟೆಲಿಗ್ರಾಮ್ ಬ್ಯಾನ್ ಮುಗಿದರೂ ಜೂನ್ 30 ರವರೆಗೆ ಈ ವಿಶೇಷ ಫೀಚರ್ ಬಳಸುವಂತಿಲ್ಲ
  • ಸುಳ್ಳು ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ಸರ್ಕಾರದಿಂದ ಮಾಸ್ಟರ್ ಪ್ಲ್ಯಾನ್​
ನವದೆಹಲಿ : ನೀಟ್‌ ( NEET ) ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ತಾತ್ಕಾಲಿಕವಾಗಿ ನಿಷೇಧಕ್ಕೊಳಗಾಗಿದ್ದ ಜನಪ್ರಿಯ ಮೆಸೇಜಿಂಗ್ ಆ್ಯಪ್ 'ಟೆಲಿಗ್ರಾಮ್' ( Telegram ), ಬ್ಯಾನ್​ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ದೇಶದಲ್ಲಿ ಮತ್ತೆ ನಿಧಾನವಾಗಿ ಕಾರ್ಯನಿರ್ವಹಿಸಲು ಆರಂಭಿಸಿದೆ.
ಜೂನ್ 21 ರಂದು ನಡೆದ ನೀಟ್ ಮರುಪರೀಕ್ಷೆಯ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಜೂನ್ 22 ರವರೆಗೆ ಈ ತಾತ್ಕಾಲಿಕ ನಿಷೇಧವನ್ನು ಹೇರಲಾಗಿತ್ತು. ನಿಷೇಧದ ಗಡುವು ಮುಗಿದಿರುವ ಕಾರಣ, ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಈಗ ಮತ್ತೊಮ್ಮೆ ಡೌನ್‌ಲೋಡ್ ಮಾಡಲು ಮುಕ್ತವಾಗಿ ಲಭ್ಯವಿದೆ.
ಭಾರತದಲ್ಲಿ ಟೆಲಿಗ್ರಾಮ್ ಮರುಚಾಲನೆಗೊಂಡಿದ್ದರೂ, ಅನೇಕ ಬಳಕೆದಾರರಿಗೆ ಎಂದಿನಂತೆ ಸಂದೇಶಗಳು ರವಾನೆಯಾಗುತ್ತಿದ್ದರೆ, ಇನ್ನೂ ಕೆಲವರು ಈ ಆ್ಯಪ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರು ಮುಂದುವರಿಸಿದ್ದಾರೆ.
ಇದೇ ವೇಳೆ, ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ ಬಳಕೆದಾರರೊಬ್ಬರಿಗೆ ಟೆಲಿಗ್ರಾಮ್ ಸಂಸ್ಥೆಯು ಅಧಿಕೃತವಾಗಿ ಪ್ರತಿಕ್ರಿಯಿಸಿದ್ದು, "ಇದು ನಮ್ಮ ಸಮಸ್ಯೆಯಲ್ಲ, ನಿಮ್ಮ ಸರ್ಕಾರವನ್ನು ಕೇಳಿ ಸ್ನೇಹಿತರೇ" ಎಂದು ನೇರವಾಗಿ ಉತ್ತರಿಸುವ ಮೂಲಕ ಜವಾಬ್ದಾರಿಯನ್ನು ಸರ್ಕಾರದ ಕಡೆಗೆ ತಿರುಗಿಸಿದೆ.
ಮತ್ತೊಂದೆಡೆ, ಟೆಲಿಗ್ರಾಮ್ ಆ್ಯಪ್ ಆಂಡ್ರಾಯ್ಡ್‌ ಸಾಧನಗಳಿಗೆ ಮರಳಿ ಬಂದಿದ್ದರೂ ಸಹ, ಐಫೋನ್ ಬಳಕೆದಾರರಿಗೆ ಆಪಲ್ ಆ್ಯಪ್ ಸ್ಟೋರ್‌ನಲ್ಲಿ ಇದು ಇನ್ನೂ ಸಂಪೂರ್ಣವಾಗಿ ಲಭ್ಯವಾಗುತ್ತಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಮೇ 3 ರಂದು ನಡೆದಿದ್ದ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮೇ 12 ರಂದು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ, ಜೂನ್ 21 ರಂದು ನಿಗದಿಯಾಗಿದ್ದ ಮರುಪರೀಕ್ಷೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ಅಥವಾ ವಂಚನೆಗಳು ನಡೆಯದಂತೆ ತಡೆಯಲು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಜೂನ್ 16 ರಿಂದ ಟೆಲಿಗ್ರಾಮ್ ಮೇಲೆ ತಾತ್ಕಾಲಿಕ ನಿಷೇಧವನ್ನು ಹೇರಿತ್ತು.
ಸದ್ಯ ಆ್ಯಪ್ ಮೇಲಿದ್ದ ಮುಖ್ಯ ನಿಷೇಧದ ಅವಧಿ ಮುಕ್ತಾಯಗೊಂಡಿದ್ದರೂ ಸಹ, ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳನ್ನು ತಿದ್ದಲು ಅವಕಾಶ ನೀಡುವ 'ಮೆಸೇಜ್ ಎಡಿಟಿಂಗ್' ಫೀಚರ್ ಮೇಲಿನ ನಿಷೇಧವು ಭಾರತದಲ್ಲಿ ಜೂನ್ 30 ರವರೆಗೆ ಮುಂದುವರಿಯಲಿದೆ. ಪರೀಕ್ಷೆ ಮುಗಿದ ನಂತರ ಹಳೆಯ ಮೆಸೇಜ್‌ಗಳ ಟೈಮ್‌ಸ್ಟ್ಯಾಂಪ್ ಬದಲಾಗದಂತೆ ಪ್ರಶ್ನೆಪತ್ರಿಕೆಗಳನ್ನು ತೂರಿಸಿ, ಸುಳ್ಳು ಪ್ರಶ್ನೆಪತ್ರಿಕೆ ಸೋರಿಕೆ ಪುರಾವೆಗಳನ್ನು ಸೃಷ್ಟಿಸುವುದನ್ನು ತಡೆಯಲು ಈ ವಿಶೇಷ ನಿರ್ಬಂಧವನ್ನು ವಿಧಿಸಲಾಗಿದೆ, (ಏಜೆನ್ಸೀಸ್​).