Telangana Nalgonda school principal murder case 
ದೇಶ

ಐಷಾರಾಮಿ ಜೀವನ, ದ್ವೇಷಕ್ಕಾಗಿ ವಿದ್ಯಾರ್ಥಿಗಳಿಂದಲೇ ಪ್ರಿನ್ಸಿಪಾಲ್ ಕೊಲೆ; ಕೃತ್ಯದ ಸುಳಿವು ಕೊಟ್ಟಿದ್ದು 'ಬಾಬು' ಎಂಬ ಪದ..Telangana

ಪ್ರಮುಖ ಮುಖ್ಯಾಂಶಗಳು

  • 48 ವರ್ಷದ ಪ್ರಿನ್ಸಿಪಾಲ್​ ಕೊಲೆ ಮಾಡಿದ ವಿದ್ಯಾರ್ಥಿಗಳ ಬಂಧನ
  • ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ನಡೆದ ಘಟನೆ
  • ಹಳೆಯ ದ್ವೇಷ, ಐಷಾರಾಮಿ ಜೀವನ ನಡೆಸಲು ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತ
ಹೈದರಾಬಾದ್​: ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ

48 ವರ್ಷದ

ಶಾಲಾ ಪ್ರಿನ್ಸಿಪಾಲ್​ವೊಬ್ಬರ

ಭೀಕರ ಕೊಲೆ ಕೇಸ್​ ಅನ್ನು ಪೊಲೀಸರು ಬೇಧಿಸಿದ್ದಾರೆ. ಹಣ ಮತ್ತು ಐಷಾರಾಮಿ ಜೀವನ ನಡೆಸುವ ಸಲುವಾಗಿ ಈ ದುಷ್ಕೃತ್ಯಕ್ಕೆ ಕೈ ಹಾಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಕೊಂಡಮಲ್ಲೆಪಳ್ಳಿಯ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಮತ್ತು ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ(48) ಕೊಲೆಯಾದವರು. ಆಗಸ್ಟ್ 12ರಂದು ತಮ್ಮ ನಿವಾಸದಲ್ಲಿ 27 ಬಾರಿ ಇರಿತಕ್ಕೊಳಗಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಪತಿಯಿಂದ ದೂರು ದಾಖಲು

ಹೈದರಾಬಾದ್‌ನಲ್ಲಿದ್ದ ಪ್ರಿನ್ಸಿಪಾಲ್​ರ ಪತಿ, ರೂಪಾ ರೆಡ್ಡಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಉತ್ತರ ಕೊಟ್ಟಿಲ್ಲ. ಹೀಗಾಗಿ ಅವರು ತಮ್ಮ

ಅಕ್ಕಪಕ್ಕದ ಮನೆಯವರು ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ್ದ ಪೊಲೀಸರು ಮನೆ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ,

ಕಲ್ಲು ರೂಪಾ ರೆಡ್ಡಿಯವರ ಮೃತದೇಹ ಪತ್ತೆಯಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಐದು ತಂಡಗಳನ್ನು ರಚಿಸಿ, ಸಿಸಿಟಿವಿ ದೃಶ್ಯಾವಳಿಗಳು, ಫೊರೆನ್ಸಿಕ್ ಸಾಕ್ಷ್ಯಗಳು ಮತ್ತು 80ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದರು.

ಬಾಬು ಪದದಿಂದ ಸಿಕ್ಕಿತು ಕೊಲೆ ಸುಳಿವು

ಫೋನ್ ಸ್ವಿಚ್ ಆಫ್ ಆಗುವ ಮುನ್ನ ರೂಪಾ ರೆಡ್ಡಿ ಅವರು ತಮ್ಮ ಅತ್ತೆಯೊಂದಿಗೆ ಮಾತನಾಡುತ್ತಾ 'ಬಾಬು' ಎಂಬ ಪದವನ್ನು ಬಳಸಿದ್ದರು. ಅವರು ಕೊನೆಯದಾಗಿ ಬಳಸಿದ 'ಬಾಬು' ಪದ ಯಾರನ್ನು ಉದ್ದೇಶಿಸಿರಬಹುದು ಎಂದು ತನಿಖೆ ನಡೆಸಿದಾಗ, ಅದು ಶಾಲೆಯ ವಿದ್ಯಾರ್ಥಿಗಳು ಇರಬಹುದು ಎಂದು ಊಹೆ ಮಾಡಲಾಯಿತು ಎಂದು

ಹಿರಿಯ ಪೊಲೀಸ್ ಅಧಿಕಾರಿ ಶರತ್ ಚಂದ್ರ ಪವಾರ್ ತಿಳಿಸಿದ್ದಾರೆ.

ತಪ್ಪೊಪ್ಪಿಕೊಂಡ ಸ್ಟೂಡೆಂಟ್ಸ್

10ನೇ ತರಗತಿಯ ಐವರು ವಿದ್ಯಾರ್ಥಿಗಳು ಶಾಲೆಯಿಂದ ಗೈರುಹಾಜರಾಗಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಯದ್ವಾತದ್ವಾ ಹಣ ಖರ್ಚು ಮಾಡುತ್ತಿರುವುದು ಮತ್ತು ಪಾರ್ಟಿಗಳನ್ನು ಮಾಡುತ್ತಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂತು. ಬುಧವಾರ ಬೆಳಿಗ್ಗೆ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾವು ರೂಪಾ ರೆಡ್ಡಿ ಅವರನ್ನು ಪೂರ್ವಯೋಜಿತವಾಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕೃತ್ಯಕ್ಕೆ ಕಾರಣ ಏನು?

ವಿದ್ಯಾರ್ಥಿಗಳ ಬ್ಯಾಗ್​ನಲ್ಲಿ

ಹಣ ಮತ್ತು ಮೊಬೈಲ್ ಫೋನ್ ಪತ್ತೆಯಾಗಿತ್ತು.

ಪ್ರಾಂಶುಪಾಲೆ ರೂಪಾ ರೆಡ್ಡಿ ಹಿಂದೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಅವರ ಪೋಷಕರಿಗೆ ವಿಷಯ ಮುಟ್ಟಿಸಿ, ಅವರನ್ನು ಹಾಸ್ಟೆಲ್‌ನಿಂದ ಕಳಿಸಿ

ಹಗಲು ಹೊತ್ತು ಮಾತ್ರ ಬರುವ ಹಾಗೆ ಮಾರ್ಪಾಡು ಮಾಡಲಾಗಿತ್ತು.

ಪ್ರಾಂಶುಪಾಲೆ ತೆಗೆದುಕೊಂಡ ಈ ಕ್ರಮವೇ ವಿದ್ಯಾರ್ಥಿಗಳಲ್ಲಿ ದ್ವೇಷಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಪ್ರಿನ್ಸಿಪಾಲ್​ ಕೊಲೆಗೆ

5 ದಿನಗಳ ಕಾಲ ವಿದ್ಯಾರ್ಥಿಗಳು ಸಂಚು ರೂಪಿಸಿದ್ದರು. ಇದಕ್ಕಾಗಿ ಬಟ್ಟೆ ಅಂಗಡಿಯಲ್ಲಿ ಕೈ ಗ್ಲೌಸ್​ ಹಾಗೂ ಇತರ ಅಂಗಡಿಯಲ್ಲಿ ಚಾಕು ಖರೀದಿ ಮಾಡಿರುವುದು ಪತ್ತೆಯಾಗಿದೆ.

ಹತ್ಯೆಯ ದಿನ ಮುಖವಾಡ ಮತ್ತು ಗ್ಲೌಸ್ ಧರಿಸಿ ಮನೆಗೆ ನುಗ್ಗಿದ ವಿದ್ಯಾರ್ಥಿಯೊಬ್ಬ, ಮಲಗುವ ಕೋಣೆಯಲ್ಲಿದ್ದ 2.50 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದನು.

ಈ ವೇಳೆ ಮುಖವಾಡ ಜಾರಿದಾಗ ರೂಪಾ ರೆಡ್ಡಿ ಆತನನ್ನು ಗುರುತಿಸಿದರು. ತಮ್ಮನ್ನು ಗುರುತಿಸಿದರೆ ಸಿಕ್ಕಿಬೀಳುತ್ತೇವೆಂಬ ಭಯದಿಂದ ಆ ವಿದ್ಯಾರ್ಥಿ ಚಾಕುವಿನಿಂದ 27 ಬಾರಿ ಇರಿದು ಹತ್ಯೆ ಮಾಡಿದ್ದಾರೆ ಎಂದು ವಿಚಾರಣೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಮಾಡಿದ

ನಂತರ ರಕ್ತಸಿಕ್ತ ಬಟ್ಟೆಗಳು ಮತ್ತು ಮುಖವಾಡವನ್ನು ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ಈ ಕೃತ್ಯದ ಬಳಿಕ ಗೋವಾ ಪ್ರವಾಸಕ್ಕೂ ತೆರಳಿದ್ದರು. ಪೊಲೀಸರು ಆರೋಪಿಗಳಿಂದ ರಕ್ತದ ಕಲೆ ಇರುವ ನೋಟುಗಳು ಸೇರಿದಂತೆ 1.54 ಲಕ್ಷ ರೂಪಾಯಿ ನಗದು, ಐಫೋನ್ ಮತ್ತು ರೂಪಾ ರೆಡ್ಡಿ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧ ಎಸಗುವ ಮುನ್ನ ಈ ಇಬ್ಬರು ಆರೋಪಿಗಳು ಬೇಗ ಹಣ ಸಂಪಾದಿಸುವುದು ಹೇಗೆ ಎಂದು ವಿಡಿಯೋ ಶೇರಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹುಡುಕಾಟ ನಡೆಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.