- ಬ್ಯಾಂಕ್ ಉದ್ಯೋಗಿಯ 'ಕಡ್ಡಾಯ ನಿವೃತ್ತಿ' ಆದೇಶ ರದ್ದು
- ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸದಿದ್ದಕ್ಕೆ ಕೆಲಸದಿಂದ ವಜಾ ಸಲ್ಲದು
- ಯೂನಿಯನ್ ಬ್ಯಾಂಕ್‌ಗೆ ತೆಲಂಗಾಣ ಹೈಕೋರ್ಟ್ ಮಹತ್ವದ ತೀರ್ಪು
ಹೈದರಾಬಾದ್: ಕ್ರೆಡಿಟ್ ಕಾರ್ಡ್ ಬಾಕಿ ಹಣವನ್ನು ನಿಗದಿತ ಸಮಯಕ್ಕೆ ಸರಿಯಾಗಿ ತೀರಿಸದ ಉದ್ಯೋಗಿಯನ್ನು ಬಲವಂತದ ನಿವೃತ್ತಿಯ (Forced Retirement) ಮೇರೆಗೆ ಕೆಲಸದಿಂದಲೇ ಕಿತ್ತು ಬಿಸಾಡಲು ಸಾಧ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ಕೊಟ್ಟ ಮಹತ್ವದ ತೀರ್ಪು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಉದ್ಯೋಗಿ ಮತ್ತು ಬ್ಯಾಂಕ್ ನಡುವಿನ ಕ್ರೆಡಿಟ್ ಕಾರ್ಡ್ ವ್ಯವಹಾರವು ಸಾಲದಾತ ಮತ್ತು ಸಾಲಗಾರನ ನಡುವಿನ ವಾಣಿಜ್ಯ ಒಪ್ಪಂದ ಎಂದಿರುವ ಕೋರ್ಟ್, ಪರ್ಸನಲ್ ಕ್ರೆಡಿಟ್ ಕಾರ್ಡ್ ಬಾಕಿ ಹಣವನ್ನು ಪಾವತಿಸಲು ವಿಳಂಬ ಮಾಡಿದರು ಎಂಬ ಒಂದೇ ಒಂದು ಕಾರಣಕ್ಕೆ, ಅವರನ್ನು ಬಲವಂತವಾಗಿ ಉದ್ಯೋಗದಿಂದ ವಜಾಗೊಳಿಸುವುದು ಅಥವಾ ಒತ್ತಾಯ ಪೂರ್ವಕವಾಗಿ ಬಿಟ್ಟು ಹೋಗುವಂತೆ ಮಾಡುವುದು ಸರಿಯಲ್ಲ. ಮತ್ತು ಉದ್ಯೋಗಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಕಾನೂನುಬದ್ಧವಲ್ಲ ಎಂದು ಹೈಕೋರ್ಟ್ ಆದೇಶ ಸ್ಪಷ್ಟಪಡಿಸಿದೆ.
ಹೈದರಾಬಾದ್‌ನ ಪ್ರಕಾಶ್ ಬಾಬು ಎಂಬ ವ್ಯಕ್ತಿ 1979ರಲ್ಲಿ ಯೂನಿಯನ್ ಬ್ಯಾಂಕ್ (ಅಂದಿನ ಆಂಧ್ರ ಬ್ಯಾಂಕ್) ನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇರ್ಪಡೆಯಾದರು. 30 ವರ್ಷಗಳ ಕಾಲ ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ ಅವರು, ಕರ್ತವ್ಯದಲ್ಲಿದ್ದಾಗ ಬ್ಯಾಂಕ್ ನೀಡಿದ ಕ್ರೆಡಿಟ್ ಕಾರ್ಡ್ ಅನ್ನು ಉಪಯುಕ್ತವಾಗಿ ಬಳಸಿಕೊಂಡರು. 1 ಲಕ್ಷ ರೂ.ಗಳ ಮಿತಿಯನ್ನು ಹೊಂದಿದ್ದ ಕಾರ್ಡ್‌ನಲ್ಲಿನ ಬಾಕಿ ಮೊತ್ತವು 1.68 ಲಕ್ಷ ರೂ.ಗಳಿಗೆ ಏರಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬ್ಯಾಂಕ್ ಅಧಿಕಾರಿಗಳು, ಕ್ರೆಡಿಟ್ ಬಿಲ್ ಪಾವತಿಸದ ನೆಪದಲ್ಲಿ 2009ರಲ್ಲಿ ಅವರ ಸೇವೆಯ ಹೊರತಾಗಿಯೂ ಕಡ್ಡಾಯ ನಿವೃತ್ತಿ ವಿಧಿಸಿದರು.
ಈ ಕಾರಣದಿಂದಾಗಿ, ಬೇರೆ ದಾರಿಯಿಲ್ಲದೇ ಅವರು ಸಂಸ್ಥೆಯಿಂದ ಹೊರಗುಳಿಯುವಂತಾಯಿತು. ಬ್ಯಾಂಕಿನ ನಿರ್ಧಾರ ಪ್ರಶ್ನಿಸಿ, 2012ರಲ್ಲಿ ಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದರು. ಬ್ಯಾಂಕ್ ಅಧಿಕಾರಿಗಳು ತಮ್ಮ ಮೇಲೆ ಬಲವಂತದ ನಿವೃತ್ತಿ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಜುವ್ವಾಡಿ ಶ್ರೀದೇವಿ ಅವರ ಪೀಠವು ಅರ್ಜಿಯನ್ನು ವಿಚಾರಣೆ ನಡೆಸಿತು. ಇದರೊಂದಿಗೆ, ಮಾಜಿ ಉದ್ಯೋಗಿ ಪ್ರಕಾಶ್ ಬಾಬು ಅವರಿಗೆ ವಿಧಿಸಲಾದ ಕಡ್ಡಾಯ ನಿವೃತ್ತಿ ಶಿಕ್ಷೆಯನ್ನು ಕಡೆಗೂ ರದ್ದುಗೊಳಿಸಿತು.
ಇದರೊಟ್ಟಿಗೆ ಎಂಟು ವಾರಗಳ ಒಳಗೆ ಸೇವೆ, ಪಿಂಚಣಿ ಮತ್ತು ನಿವೃತ್ತಿಗೆ ಸಂಬಂಧಿಸಿದ ಎಲ್ಲಾ ಪ್ರಯೋಜನಗಳನ್ನು ಒದಗಿಸುವಂತೆ ಬ್ಯಾಂಕ್‌ಗೆ ಆದೇಶಿಸಿತು. ಇದಕ್ಕೂ ಮೊದಲು, ಬ್ಯಾಂಕಿನ ಪರ ವಕೀಲರು ಪ್ರಕಾಶ್ ಬಾಬು ಈ ಹಿಂದೆ ಹಲವಾರು ಸೇವಾ ಉಲ್ಲಂಘನೆಗಳನ್ನು ಮಾಡಿದ್ದಾರೆ ಮತ್ತು ಅವರ ಕರ್ತವ್ಯಗಳಲ್ಲಿ ಸಾಬೀತಾಗಿರುವ ದುಷ್ಕೃತ್ಯದಿಂದಾಗಿ ಈ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ವಾದಿಸಿದರು. ಆದರೆ, ಕೋರ್ಟ್ನ ಅಂತಿಮ ತೀರ್ಪು ಇದಾಗಿತ್ತು ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).