- ಹೈದರಾಬಾದ್‌ನಲ್ಲಿರುವ PCS ವಿಭಾಗದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಕಿರೆಡ್ಡಿ ಭೀಮ್ ರೆಡ್ಡಿ
- ಭೀಮ್ ರೆಡ್ಡಿ ಅವರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳ ಶೋಧ
- ಭೀಮ್ ರೆಡ್ಡಿ ತಮ್ಮ ಸುದೀರ್ಘ ಸೇವಾವಧಿಯಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದರು
Telangana DSP: ಹೈದರಾಬಾದ್‌ನಲ್ಲಿರುವ ಪೊಲೀಸ್ ಕಂಪ್ಯೂಟರ್ ಸರ್ವೀಸಸ್ (PCS) ವಿಭಾಗದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಕಿರೆಡ್ಡಿ ಭೀಮ್ ರೆಡ್ಡಿ ಅವರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ಬೆಳಿಗ್ಗೆ 5 ಗಂಟೆಯಿಂದಲೇ ವ್ಯಾಪಕ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದ್ದಾರೆ.
ಅಧಿಕೃತ ಹೇಳಿಕೆಯ ಪ್ರಕಾರ, ಎರಡು ಎಸಿಬಿ ತಂಡಗಳು ನರಸಿಂಗಿಯ ವಸೆಲ್ಲಾ ಮೆಡೋಸ್‌ನಲ್ಲಿರುವ ಅವರ ವಿಲ್ಲಾ ಮತ್ತು ಅವರಿಗೆ ಸೇರಿದ ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಲಾಯಿತು ಎಂದು ಹೇಳಿದ್ದಾರೆ.
ದಾಳಿಯ ಸಮಯದಲ್ಲಿ, ಭೀಮ್ ರೆಡ್ಡಿ ತಮ್ಮ ಸುದೀರ್ಘ ಸೇವಾವಧಿಯಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಅತ್ಯಂತ ಸಂಶಯಾಸ್ಪದ ವಿಧಾನಗಳ ಮೂಲಕ ಅಕ್ರಮವಾಗಿ ಗಣನೀಯ ಪ್ರಮಾಣದ ಆಸ್ತಿಪಾಸ್ತಿಗಳನ್ನು ಸಂಪಾದಿಸಿದ್ದಾರೆ ಎಂಬುದನ್ನು ಅಧಿಕಾರಿಗಳ ಶೋಧ ಕಾರ್ಯವು ದೃಢಪಡಿಸಿದೆ. ಅಂದಾಜಿನ ಪ್ರಕಾರ, ಭೀಮ್ ಅವರು ಸಂಗ್ರಹಿಸಿರುವ ಆಸ್ತಿಗಳ ಮಾರುಕಟ್ಟೆ ಮೌಲ್ಯ 200 ಕೋಟಿಗಿಂತ ಹೆಚ್ಚು ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬೆನ್ನಲ್ಲೇ ಭೀಮ್ ರೆಡ್ಡಿಯವರನ್ನು ಬಂಧಿಸಲಾಗಿದ್ದು, ಶುಕ್ರವಾರ ಎಸಿಬಿ ನ್ಯಾಯಾಲಯದ ಮುಂದೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಆಸ್ತಿಗಳು ಎಲ್ಲೆಲ್ಲಿ ಇದೆ!
ಎಸಿಬಿ ದಾಳಿಗೊಳಗಾದ ತೆಲಂಗಾಣ ಡಿಎಸ್‌ಪಿ ಭೀಮ್ ರೆಡ್ಡಿ ಹೈದರಾಬಾದ್‌ನ ಅತ್ಯಂತ ಐಷಾರಾಮಿ ಐಟಿ ವಲಯಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಇಬ್ರಾಹಿಂಬಾಗ್‌ನಲ್ಲಿ ಭವ್ಯ ವಿಲ್ಲಾ, ಟೆಲಿಕಾಂ ನಗರದಲ್ಲಿ ಜಿ+2 ಮನೆ ಹಾಗೂ ಪೆಂಟ್‌ಹೌಸ್, ಗಚಿಬೌಲಿ ಮತ್ತು ತೆಲ್ಲಾಪುರದಲ್ಲಿ ಐಷಾರಾಮಿ ಫ್ಲಾಟ್‌ಗಳನ್ನು ಅವರು ಖರೀದಿಸಿದ್ದಾರೆ. ಇದರೊಂದಿಗೆ ಮಣಿಕೊಂಡದಲ್ಲಿ ಜಿ+5 ವಾಣಿಜ್ಯ ಸಂಕೀರ್ಣದ ಪಾಲು, 3000 ಚದರ ಅಡಿಯ ಕಮರ್ಷಿಯಲ್ ಜಾಗ ಹಾಗೂ ಪ್ರಗತಿ ರೆಸಾರ್ಟ್ಸ್‌ನಲ್ಲಿ ಬೆಲೆಬಾಳುವ ಪ್ಲಾಟ್ ಹೊಂದುವ ಮೂಲಕ ಬೃಹತ್ ಅಕ್ರಮ ನಗರ ಸಾಮ್ರಾಜ್ಯ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.
ಇದಲ್ಲದೆ, ಭೀಮ್ ರೆಡ್ಡಿ ಕರ್ನಾಟಕದ ಎರಡು ವಿಭಿನ್ನ ಆಯಕಟ್ಟಿನ ಸ್ಥಳಗಳಲ್ಲಿ ಒಟ್ಟು 46 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇದಲ್ಲದೆ, ಬೆಂಗಳೂರಿನ ಪ್ರಮುಖ ವಾಣಿಜ್ಯ ಮತ್ತು ರಿಯಲ್ ಎಸ್ಟೇಟ್ ಹಬ್ ಆದ ದೇವನಹಳ್ಳಿಯಲ್ಲಿ 1 ಎಕರೆ ಬೆಲೆಬಾಳುವ ಭೂಮಿಯನ್ನು ಖರೀದಿಸಿದ್ದಾರೆ. ನಾಗೋಲ್‌ನ ಪ್ರಸಿದ್ಧ ಕಾಮಿನೇನಿ ಆಸ್ಪತ್ರೆ ಬಳಿ 200 ಚದರ ಗಜಗಳಷ್ಟು ವಿಸ್ತೀರ್ಣದ ತೆರೆದ ನಿವೇಶನ ಹಾಗೂ ಪತಂಚೇರುದಲ್ಲಿ ತಲಾ 400 ಚದರ ಗಜಗಳಷ್ಟು ವಿಸ್ತೀರ್ಣದ ಎರಡು ಪ್ರತ್ಯೇಕ ಮುಕ್ತ ಭೂಮಿಯನ್ನು ಇವರು ಹೊಂದಿದ್ದಾರೆ.
ರಾಘವೇಂದ್ರ ರಾಕ್ ಸ್ಯಾಂಡ್ ಮಿನರಲ್ಸ್‌ನಲ್ಲಿ 75 ಲಕ್ಷ ಹೂಡಿಕೆ ಮಾಡಿರುವುದನ್ನು ಎಸಿಬಿ ಪತ್ತೆಹಚ್ಚಿದ್ದು, ಅವರ ಮನೆಯಲ್ಲಿ ಸುಮಾರು 40 ಲಕ್ಷ ನಿವ್ವಳ ನಗದು ಪತ್ತೆಯಾಗಿದೆ. ಇದಲ್ಲದೆ, 2 ಕಿಲೋಗ್ರಾಂ ತೂಕದ ಚಿನ್ನಾಭರಣಗಳು, ಸುಮಾರು 20 ಕೆಜಿ ತೂಕದ ಬೆಳ್ಳಿ ವಸ್ತುಗಳು ಮತ್ತು ಸುಮಾರು 20 ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇತ್ತು ಎಂದು ಎಸಿಬಿ ಹೇಳಿಕೆ ತಿಳಿಸಿದೆ (ಏಜೆನ್ಸೀಸ್).