ಪಟನಾ: ಬಿಹಾರದ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ರನ್ನು (Tejashwi Yadav) ಆರ್‌ಜೆಡಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಇದು ಕುಟುಂಬ ಕಲಹವನ್ನು ಮತ್ತಷ್ಟು ಹೆಚ್ಚಿಸಿವೆ.
ತೇಜಸ್ವಿ ಆಯ್ಕೆಯನ್ನು ಆರ್‌ಜೆಡಿ ತನ್ನ ಎಕ್ಸ್ ಖಾತೆಯ ಮೂಲಕ ಈ ವಿಷಯವನ್ನು ಘೋಷಿಸಿದ್ದು, ಇದು ಹೊಸ ಯುಗದ ಉದಯ!, ತೇಜಸ್ವಿ ಯಾದವ್ ಅವರನ್ನು ರಾಷ್ಟ್ರೀಯ ಜನತಾ ದಳದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಪೋಸ್ಟ್ ಹಂಚಿಕೊಂಡಿದೆ.
ಆರ್‌ಜೆಡಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಯಾದವ್ ಮತ್ತು ಪತ್ನಿ ರಾಬ್ರಿ ದೇವಿ ಭಾಗವಹಿಸಿದ್ದರು. ಈ ಸಭೆಯಲ್ಲಿಯೇ ತೇಜಸ್ವಿ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಲಾಲು ಯಾದವ್ ತಮ್ಮ ಪುತ್ರ ತೇಜಸ್ವಿ ಯಾದವ್ಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.
ಇತ್ತ ತಮ್ಮ ಸಹೋದರ ತೇಜಸ್ವಿ ಯಾದವ್ರನ್ನು ಪಕ್ಷದ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಲಾಲು ಪುತ್ರಿ ರೋಹಿಣಿ ಆಚಾರ್ಚ, ಇದು ಲಾಲುವಾದವನ್ನು ನಾಶಮಾಡುವ ಒಳನುಸುಳುಕೋರರಿಂದ ನಿಯಂತ್ರಿಸಲ್ಪಡುವ ಗೊಂಬೆ ರಾಜಕುಮಾರ ಎಂದು ಕರೆದಿದ್ದಾರೆ.
ರೋಹಿಣಿ ಎಕ್ಸ್ ಪೋಸ್ಟ್
ತೇಜಸ್ವಿ ಆಯ್ಕೆಯನ್ನು ವ್ಯಂಗ್ಯವಾಗಿ ಅಭಿನಂದಿಸುತ್ತಾ ("ತಾಜ್‌ಪೋಷಿ ಮುಬಾರಕ್") ಅದ್ಭುತ ಇನ್ನಿಂಗ್ಸ್ ಅಂತ್ಯ, ಗೊಂಬೆ ರಾಜಕುಮಾರನ ಪಟ್ಟಾಭಿಷೇಕಕ್ಕೆ ಅಭಿನಂದನೆಗಳು ಎಂದು ಬರೆದಿದ್ದಾರೆ. ಫ್ಯಾಸಿಸ್ಟ್ ವೈರಿಗಳ ಏಜೆಂಟರು ಆರ್‌ಜೆಡಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗೊಂಬೆ ರಾಜಕುಮಾರ
ತೇಜಸ್ವಿ ಯಾದವ್ರನ್ನು ಗೊಂಬೆ ರಾಜಕುಮಾರ (Puppet Prince) ಎಂದು ಕರೆದಿರುವ ಅವರ ಸಹೋದರಿ ರೋಹಿಣಿ, ತೇಜಸ್ವಿ ಸ್ವಂತ ಬುದ್ಧಿಯಿಂದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ, ಅವರ ಸುತ್ತಲಿರುವ ಒಳನುಸುಳುಕೋರರು ತಮ್ಮ ಸಹೋದರನನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲಾಲುವಾದ್ ವಿನಾಶದ ಆತಂಕ
ಲಾಲು ಪ್ರಸಾದ್ ಯಾದವ್ ಕಟ್ಟಿಬೆಳೆಸಿದ ಲಾಲುವಾದ್' (Laluvad) ಸಿದ್ಧಾಂತವನ್ನು ಕೆಲವು ಸ್ವಾರ್ಥಿ ಸಲಹೆಗಾರರು ನಾಶಮಾಡುತ್ತಿದ್ದಾರೆ. ಈ ಸಂಚುಕೋರರು ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ರೋಹಿಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದವಿ ಕಲಹ
2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಅನುಭವಿಸಿದ ಹೀನಾಯ ಸೋಲು ಯಾದವ್ ಕುಟುಂಬದಲ್ಲಿ ಒಡಕುಂಟು ಮಾಡಿದೆ ಎನ್ನಲಾಗಿದ್ದು, ಕಳೆದ ಸಲ 75 ಸ್ಥಾನ ಪಡೆದಿದ್ದ ಆರ್‌ಜೆಡಿ 25ಕ್ಕೆ ಕುಸಿದಿದೆ. ಚುನಾವಣೆಯ ಈ ಸೋಲಿಗೆ ನೀನೇ ಕಾರಣ ಎಂದು ತೇಜಸ್ವಿ ತನ್ನ ಮೇಲೆ ಚಪ್ಪಲಿ ಎಸೆದಿದ್ದರು ಎಂಬ ಸ್ಫೋಟಕ ಆರೋಪವನ್ನು ರೋಹಿಣಿ ಮಾಡಿದ್ದರು. ಇದರಿಂದ ಮನನೊಂದ ಲಾಲು ಪುತ್ರಿ, ಕುಟುಂಬವನ್ನು ತ್ಯಜಿಸಿರುವುದಾಗಿ ಘೋಷಿಸಿದರು ಮತ್ತು ಯಾವ ಮಗಳಿಗೂ ನನ್ನಂತಹ ಪರಿಸ್ಥಿತಿ ಬರದಿರಲಿ ಎಂದು ನೋವಿನಿಂದ ನುಡಿದಿದ್ದರು(ಏಜೆನ್ಸೀಸ್).