Tejashwi Yadav | ವಿಪಕ್ಷ ನಾಯಕ ತೇಜಸ್ವಿ ಯಾದವ್
ಪಟನಾ: ಬಿಹಾರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ನಡುವೆ ಆರೋಪ- ಪ್ರತ್ಯಾರೋಪ ಜೋರಾಗಿದ್ದು, ದಶಕಗಳ ಕಾಲ ರಾಜ್ಯ ಮತ್ತು ಕೇಂದ್ರದಲ್ಲಿ ಅವರದ್ದೇ ಪಕ್ಷ ಅಧಿಕಾರದಲ್ಲಿದ್ದರೂ ಬಿಹಾರವನ್ನು ಅಭಿವೃದ್ಧಿ ಮಾಡುವುದರಲ್ಲಿ ಬಿಜೆಪಿ ವಿಫಲವಾಗಿದೆ ಎಂದು ವಿಪಕ್ಷ ನಾಯಕ ತೇಜಸ್ವಿ ಯಾದವ್ (Tejaswi Yadav) ಗುರುವಾರ ಆರೋಪಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ತೇಜಸ್ವಿ ಯಾದವ್, ಡಬಲ್ ಇಂಜಿನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಹಾರವು ಇಂದಿಗೂ ದೇಶದ ಅತ್ಯಂತ ಬಡ ರಾಜ್ಯವಾಗಿದೆ. ಇಲ್ಲಿ ನಿರುದ್ಯೋಗ, ವಲಸೆ, ಭ್ರಷ್ಟಾಚಾರ ಮತ್ತು ಅಪರಾಧದ ಪ್ರಮಾಣ ಗರಿಷ್ಠ ಮಟ್ಟದಲ್ಲಿದೆ ಎಂದು ದೂರಿದ್ದಾರೆ.
ಕನಿಷ್ಠ ತಲಾ ಆದಾಯ, ರೈತರ ಕಡಿಮೆ ಆದಾಯ ಮತ್ತು ಕನಿಷ್ಠ ತಲಾ ಹೂಡಿಕೆಯಲ್ಲಿ ಬಿಹಾರ ಕೆಳಮಟ್ಟದಲ್ಲಿದೆ, ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ರಾಜ್ಯವು ಹಿಂದುಳಿದಿದೆ. ಕಂಪ್ಯೂಟರ್ ಸಾಕ್ಷರತೆ ಮತ್ತು ವಿದ್ಯುತ್ ಬಳಕೆಯಲ್ಲೂ ಬಿಹಾರ ದೇಶದ ಕೊನೆಯ ಸಾಲಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.
ತಿರುಗೇಟು ನೀಡಿದ ಬಿಜೆಪಿ
ತೇಜಸ್ವಿ ಯಾದವ್ ಆರೋಪಗಳನ್ನು ಬಿಜೆಪಿ ವಕ್ತಾರ ನೀರಜ್ ಕುಮಾರ್ ತಳ್ಳಿಹಾಕಿದ್ದು, ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಆಡಳಿತದ ಅವಧಿಯನ್ನು (1990-2005) ಈಗಿನ ಪರಿಸ್ಥಿತಿಗೆ ಹೋಲಿಸಿ ನೋಡಿ ಎಂದು ಸವಾಲು ಹಾಕಿದ್ದಾರೆ.
2005ರಲ್ಲಿ ಶೇ. 54.4 ರಷ್ಟಿದ್ದ ಬಹು ಆಯಾಮದ ಬಡತನವು ಈಗ ಶೇ. 26.59 ಕ್ಕೆ ಇಳಿದಿದೆ. ಸುಮಾರು 3.77 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, 2005ರಲ್ಲಿ 8,000 ರೂ. ಇದ್ದ ತಲಾ ಆದಾಯ ಈಗ 76,000 ರೂ.ಗೆ ಏರಿಕೆಯಾಗಿದೆ. ರಾಜ್ಯದಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗ ನೀಡಲಾಗಿದೆ ಮತ್ತು ರಫ್ತು ವಹಿವಾಟು 25 ಕೋಟಿಯಿಂದ 17,000 ಕೋಟಿಗೆ ಜಿಗಿದಿದೆ ಎಂದು ಅಂಕಿ-ಅಂಶ ಸಮೇತ ತಿರುಗೇಟು ನೀಡಿದ್ದಾರೆ.
ಶಿಕ್ಷಣ ಮತ್ತು ಕಾನೂನು ಸುವ್ಯವಸ್ಥೆ
ಬಿಹಾರದ ಸಾಕ್ಷರತಾ ಪ್ರಮಾಣವು ಶೇ. 47 ರಿಂದ ಶೇ. 74 ಕ್ಕೆ ಏರಿಕೆಯಾಗಿದೆ ಎಂದು ಬಿಜೆಪಿ ಹೇಳಿದ್ದು, ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡಿದ ನೀರಜ್ ಕುಮಾರ್, 2001ರಲ್ಲಿ ವರ್ಷಕ್ಕೆ 3,600 ಕೊಲೆಗಳು ನಡೆಯುತ್ತಿದ್ದವು, ಈಗ ಆ ಸಂಖ್ಯೆ 2,500ಕ್ಕೆ ಇಳಿಕೆಯಾಗಿದೆ ಎಂದು ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ಡೇಟಾವನ್ನು ಉಲ್ಲೇಖಿಸಿ ತೇಜಸ್ವಿ ಯಾದವ್ಗೆ ತಿರುಗೇಟು ನೀಡಿದ್ದಾರೆ(ಏಜೆನ್ಸೀಸ್).