- ಅತೀ ವೇಗದಲ್ಲಿ ಕೆಟಿಎಂ ಬೈಕ್ ಚಲಾಯಿಸುತ್ತಿದ್ದ 18 ವರ್ಷದ ವ್ಲಾಗರ್ ದುರಂತ ಸಾವು
- ಪಿಕೆಆರ್ ಬ್ಲಾಗರ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದ ಪ್ರಿನ್ಸ್ ಪಟೇಲ್
- ಬಿದ್ದ ರಭಸಕ್ಕೆ ಪ್ರಿನ್ಸ್‌ನ ತಲೆ, ದೇಹದಿಂದ ಬೇರ್ಪಟ್ಟು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ
ಸೂರತ್: ಅತೀ ವೇಗದಲ್ಲಿ ಕೆಟಿಎಂ ಬೈಕ್ ಚಲಾಯಿಸುತ್ತಿದ್ದ 18 ವರ್ಷದ ವ್ಲಾಗರ್ ( Vlogger ) ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಗುಜರಾತಿನ ಸೂರತ್ನಲ್ಲಿ ನಡೆದಿದೆ.
ಮೃತ ಯುವಕನನ್ನು ಪ್ರಿನ್ಸ್ ಪಟೇಲ್ (18) ಎಂದು ಗುರುತಿಸಲಾಗಿದೆ. ಈತ "ಪಿಕೆಆರ್ ಬ್ಲಾಗರ್" ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದ.
ಅಪಘಾತದ ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಪ್ರಿನ್ಸ್ ಪಟೇಲ್, ಸುಮಾರು 140 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ. ಮಲ್ಟಿ ಲೆವೆಲ್ ಫ್ಲೈಓವರ್, ಗ್ರೇಟ್ ಲೈನರ್ ಸೇತುವೆ ಬಳಿ ಬೈಕ್ನ ವೇಗವನ್ನು ಕಡಿಮೆ ಮಾಡಲು ಹೋಗಿ ಬೈಕ್ ಯುವಕನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆ ಮೇಲೆ ಬಿದ್ದಿದೆ. ಬಳಿಕ ರಸ್ತೆಯುದ್ದಕ್ಕೂ ಉಜ್ಜಿಕೊಂಡು ಹೋಗಿ ಪ್ರಿನ್ಸ್ನಿಂದ ಸುಮಾರು ನೂರು ಮೀಟರ್ ಅಂತರದಲ್ಲಿ ಬೈಕ್ ಬಿದ್ದಿತು.
ಬೈಕ್ ಒಂದು ಕಡೆ ನಿಲ್ಲುವವರೆಗೆ ಪ್ರಿನ್ಸ್ ಅನೇಕ ಸುತ್ತು ರಸ್ತೆ ಮೇಲೆಯೇ ಉರುಳಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ಪರಿಣಾಮ ಪ್ರಿನ್ಸ್‌ನ ತಲೆ, ದೇಹದಿಂದ ಬೇರ್ಪಟ್ಟು, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಪ್ರಾಥಮಿಕ ತನಿಖೆಗಳ ಪ್ರಕಾರ ಪ್ರಿನ್ಸ್, ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ಅಂದಹಾಗೆ, ಪ್ರಿನ್ಸ್‌ನ ತಾಯಿ ಹಾಲು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾರು ಈ ಪ್ರಿನ್ಸ್ ಪಟೇಲ್?
ಮೃತ ಪ್ರಿನ್ಸ್ ತನ್ನ ಬೈಕಿಂಗ್ ರೀಲ್‌ಗಳ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ. ವೇಗದ ಬೈಕ್ ಸವಾರಿ ವಿಚಾರವಾಗಿ ಹದಿಹರೆಯದವರಲ್ಲಿ ಆತ ಜನಪ್ರಿಯನಾಗಿದ್ದ. ಆತನ ಇನ್‌ಸ್ಟಾಗ್ರಾಂ ಖಾತೆ ನೋಡಿದರೆ, ಕೆಟಿಎಂ ಡ್ಯೂಕ್ 390 ಬೈಕ್ ಮೇಲಿನ ಆತನ ಕ್ರೇಜ್ ಎಷ್ಟಿತ್ತು ಎಂಬುದು ತಿಳಿಯುತ್ತದೆ. ಆತನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ದೊರೆತ ಮಾಹಿತಿ ಪ್ರಕಾರ ಪ್ರಿನ್ಸ್ ಕಳೆದ ಸೆಪ್ಟೆಂಬರ್‌ನಲ್ಲಿ ಕೆಟಿಎಂ ಬೈಕ್ ಖರೀದಿಸಿದ್ದ. ಬೈಕ್ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದ, (ಏಜೆನ್ಸೀಸ್).