​Jharkhand Murder Case 
ದೇಶ

ತಂದೆಯ ಸರ್ಕಾರಿ ಹುದ್ದೆ, 45 ಲಕ್ಷ ಹಣಕ್ಕಾಗಿ ಪ್ರೇಮಿ ಜೊತೆ ಸೇರಿ ತಾಯಿಯನ್ನೇ ಕೊಂದ ಮಗಳು: ರಾಂಚಿ ಪೊಲೀಸರ ಕೈಗೆ ತಗ್ಲಾಕೊಂಡಿದ್ದು ಹೀಗೆ..Ranchi

ಪ್ರಮುಖ ಮುಖ್ಯಾಂಶಗಳು

  • ತಂದೆಯ ನಿಧನದ ನಂತರ ಸಿಗಬೇಕಿದ್ದ ಸರ್ಕಾರಿ ಹುದ್ದೆಗಾಗಿ ತಾಯಿ ಕೊಲೆ
  • 45 ಲಕ್ಷ ರೂ. ಹಣ ಹಾಗೂ ಸರ್ಕಾರಿ ಕೆಲಸಕ್ಕಾಗಿ ತಾಯಿಯ ಹತ್ಯೆಗೆ ಸಾಥ್ ಅಪ್ರಾಪ್ತ
  • ​ರಾತ್ರೋರಾತ್ರಿ ಮನೆಯಲ್ಲೇ ತಾಯಿಯನ್ನು ಕತ್ತು ಹಿಸುಕಿ ಕೊಂದ ಮಗಳು.
ರಾಂಚಿ: ಜಗತ್ತಿನಲ್ಲಿ ಕೆಟ್ಟ ತಾಯಿ ಇರೋದಿಲ್ಲ ಮಕ್ಕಳು ಇರ್ತಾರೆ ಎನ್ನುವ ವಾಡಿಕೆಯ ಮಾತಿದೆ. ಅದೆಷ್ಟು ನಿಜ ಎನ್ನುವುದನ್ನು ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಯುವತಿಯೊಬ್ಬರು ಸಾಬೀತು ಪಡಿಸಿದ್ದಾರೆ. ತಂದೆಯ ಸರ್ಕಾರಿ ಹುದ್ದೆಗಾಗಿ ಅಪ್ರಾಪ್ತ ಪ್ರೇಮಿಯೊಂದಿಗೆ ಸಾಕು ತಾಯಿಯನ್ನೇ ಕೊಂದ ಭೀಕರ ಘಟನೆ ಬೆಳಕಿಗೆ ಬಂದಿದೆ.
ಮನಿಟೋಲಾದ ನಿವಾಸಿಯಾದ ನಹಿದಾ ಪರ್ವೀನ್, 17 ವರ್ಷದ ದತ್ತು ಮಗಳೊಂದಿಗೆ ವಾಸ ಮಾಡುತ್ತಿದ್ದಳು. ಆಸ್ತಿ ಮತ್ತು ಹುದ್ದೆಯ ಆಸೆಗೆ ಅಪ್ರಾಪ್ತೆ ಮತ್ತು ಆಕೆಯ ಪ್ರೇಮಿ ಅರ್ಬಾಜ್ ಖಾನ್ (20) ಎಂಬಾತನ ಜೊತೆ ಸೇರಿಕೊಂಡು ತಾಯಿಯನ್ನು ಕೊಂದಿದ್ದಾಳೆ ಎನ್ನಲಾಗಿದೆ.
ಪರ್ವೀನ್ ಪತಿ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟರು. ಪರ್ವೀನ್ ಅವರಿಗೆ 45 ಲಕ್ಷ ರೂ. ಆರ್ಥಿಕ ಪರಿಹಾರ ದೊರೆಯಿತು, ಅವರ ಮಗಳು ಇದಕ್ಕೆ ನಾಮಿನಿಯಾಗಿದ್ದರು. ಬ್ಯಾಂಕ್​ನಲ್ಲಿದ್ದ ಹಣವನ್ನು ತನ್ನ ಪ್ರಿಯತಮನಿಗೆ ಆಗಾಗ್ಗೆ ನೀಡುತ್ತಿದ್ದಳು. ಈ ವಿಚಾರವು ಪರ್ವೀನ್​ಗೆ ತಿಳಿದು, ಪ್ರಶ್ನಿಸಿದ್ದರು. ಐಷಾರಾಮಿ ಜೀವನಕ್ಕೆ ಅಡ್ಡವಾಗಿದ್ದ ತಾಯಿಯನ್ನು ಮುಗಿಸಿ, ಸರ್ಕಾರಿ ಹುದ್ದೆ ಅನುಕಂಪದ ಆಧಾರದಲ್ಲಿ ಸಿಕ್ಕ ಹಣ ಪಡೆದು ಅದ್ದೂರಿ ಜೀವನ ನಡೆಸಲು ಇಬ್ಬರು ನಿರ್ಧರಿಸಿದರು.

ಕೊಲೆ ಮಾಡಿದ್ದು ಹೀಗೆ..

ಏಪ್ರಿಲ್​ 24ರಂದು ಅಪ್ರಾಪ್ತೆ ಮತ್ತು ಆಕೆಯ ಗೆಳೆಯ ಅರ್ಬಾಜ್​​ ಜೊತೆಗೆ ಅವರ ಸ್ನೇಹಿತರನ್ನು ತಾಯಿಗೆ ತಿಳಿಯದಂತೆ ಮನೆಗೆ ಕರೆಸಿಕೊಂಡಳು ಇದಕ್ಕಾಗಿ ಆ ಹುಡುಗರಿಗೆ 12 ಲಕ್ಷ ರೂ. ಪಾವತಿಸಿದ್ದಾಳೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ಪರ್ವೀನ್​ ನಿದ್ದೆ ಮಾಡುತ್ತಿದ್ದಾಗ ಮೊದಲು ಅವರ ಬಾಯಿಗೆ ಒಬ್ಬ ಆರೋಪಿ ಬಟ್ಟೆ ತುರುಕಿದ್ದಾನೆ. ಮತ್ತಿಬ್ಬರು ಆಕೆಯ ಕಾಲು ಮತ್ತು ಕೈ ಹಿಡಿದುಕೊಂಡಿದ್ದರು.
ಪರ್ವೀನ್​ ಉಸಿರಾಡಲು ಆಗದೆ ಒದ್ದಾಡುವಾಗ ಕುತ್ತಿಗೆಗೆ ಗಾಯವಾಗಿ ರಕ್ತಸ್ರಾವವಾಗಿದೆ. ಶವವನ್ನು ಫ್ರೀಜರ್‌ನಲ್ಲಿ ಇರಿಸಲಾಯಿತು. ಕೊಲೆಗೆ ಬಳಸಿದ ಹಾಸಿಗೆಯನ್ನು ತೆಗೆದು ಮನೆಯ ಸಮೀಪವಿರುವ ಮರದ ಬಳಿ ಮರೆಮಾಡಲಾಯಿತು.

ಸಂಬಂಧಿಕರಿಂದ ದೂರು

ಏಪ್ರಿಲ್​ 24 ರಂದು ಆಕೆ ಉತ್ತರ ಪ್ರದೇಶ ಮತ್ತು ಹಜಾರಿಬಾಗ್‌ನಲ್ಲಿ ವಾಸಿಸುವ ಪರ್ವೀನ್​ ಸಂಬಂಧಿಕರಿಗೆ ಕರೆ ಮಾಡಿ, ತಾಯಿ ಸ್ನಾನ ಗೃಹದಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಳು. ಇದನ್ನೇ ನಂಬಿಕೊಂಡ ಸಂಬಂಧಿಕರು ಭಾನುವಾರ ಅಂತಿಮ ನಮನ ಸಲ್ಲಿಸಲು ರಾಂಚಿಗೆ ಬಂದರು.
ಪರ್ವೀನ್ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಗಮನಿಸಿದ ನಂತರ ಕೆಲವು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದರು. ಪೊಲೀಸ್​ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದರು. ಪರ್ವೀನ್ ಮೃತಪಟ್ಟ ಎರಡು ದಿನಗಳ ನಂತರ, ಆಕೆಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯನ್ನು ಕೊಲೆ ಮಾಡಲಾಗಿದೆ. ಇದು ಆಕಸ್ಮಿಕವಾಗಿ ಸಂಭವಿಸಿದ ಸಾವಲ್ಲ ಎನ್ನುವುದು ಬೆಳಕಿಗೆ ಬಂದಿದೆ.

ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಆರೋಪಿಗಳು

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಆರಂಭಿಸಿ ಬಿಹಾರದ ಗಯಾದಲ್ಲಿದ್ದ ಆಕೆಯ ಗೆಳೆಯ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೊಲೆಗೆ ಕಾರಣವೇನು, ಕೊಂದಿದ್ಯಾರು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.
"ನಾವು ಬಿಹಾರದ ಗಯಾ ಜಿಲ್ಲೆಯ ಇಬ್ಬರನ್ನು ಬಂಧಿಸಿದ್ದೇವೆ, ಅದರಲ್ಲಿ ಸಂತ್ರಸ್ತೆಯ 17 ವರ್ಷದ ದತ್ತು ಪುತ್ರಿಯ ಗೆಳೆಯನೂ ಸೇರಿದ್ದಾನೆ. ಬಾಲಕಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ವಿಚಾರಣೆ ವೇಳೆ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಸಂತ್ರಸ್ತೆ ಹಣ ನೀಡಲು ನಿರಾಕರಿಸಿದಾಗ ಆಕೆ ತನ್ನ ತಾಯಿಯನ್ನು ಕೊಂದಿದ್ದಾಳೆ" ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಪರಾಸ್ ರಾಣಾ ಸುದ್ದಿಗಾರರಿಗೆ ತಿಳಿಸಿದ್ದಾರೆ, (ಏಜೆನ್ಸೀಸ್).