- ವಿಷಯಗಳನ್ನು ವಿತರಣೆ ಮಾಡುವ ಪೂರೈಕೆದಾರ ಕ್ಲೌಡ್ಫೇರ್ನಲ್ಲಿ ಸಮಸ್ಯೆ
- ನೂರಾರು ವೆಬ್ಸೈಟ್ಗಳು ಸ್ಥಗಿತ
ನವದೆಹಲಿ: ಇಂಟರ್ನೆಟ್ನಲ್ಲಿ ಪ್ರಮುಖ ವಿಷಯಗಳನ್ನು ವಿತರಣೆ ಮಾಡುವ ಪೂರೈಕೆದಾರ ಕ್ಲೌಡ್ಫೇರ್ನಲ್ಲಿ(Cloudfare) ತಾಂತ್ರಿಕದೋಷ ಕಂಡುಬಂದ ಹಿನ್ನೆಲೆ ಎಕ್ಸ್, ಚಾಟ್ಜಿಪಿಟಿ ಸೇರಿ ನೂರಾರು ವೆಬ್ಸೈಟ್ಗಳು ತಾತ್ಕಾಲಿಕವಾಗಿ ಮಂಗಳವಾರ ಸ್ಥಗಿತಗೊಂಡಿವೆ. ಇದರಿಂದ ಇಂಟರ್ನೆಟ್ ಹಲವು ಫ್ಲಾಟ್ಫಾರ್ಮ್ಗಳು ತೊಂದರೆ ಅನುಭವಿಸುತ್ತಿವೆ.
ಔಟೇಜ್-ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ, ಕ್ಲೌಡ್ಫೇರ್ನಲ್ಲಿ ಬೆಳಗ್ಗೆ 6 ಗಂಟೆಗೆ ತಾಂತ್ರಿಕದೋಷ ಕಾಣಿಸಿಕೊಂಡಿದೆ. ಇದು ಮಧ್ಯಾಹ್ನದೊತ್ತಿಗೆ ಹಲವು ವೆಬ್ಸೈಟ್ಗಳಿಗೆ ಹರಡಿದೆ. ಎಕ್ಸ್ನಲ್ಲಿ ಯಾವುದೇ ಪೋಸ್ಟ್ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ, ಕೆಲ ಸಮಯದ ಬಳಿಕ ಸಂಪೂರ್ಣ ಸ್ಥಗಿತ ಗೊಂಡಿದೆ. ಕ್ಯಾನ್ವಾದಂತಹ ವಿನ್ಯಾಸ ಪರಿಕರಗಳನ್ನು ಮತ್ತು ಚಾಟ್‌ಜಿಪಿಟಿಯಂತಹ ಚಾಟ್‌ಬಾಟ್‌ಗಳನ್ನು ಬಳಸಲು ಅಥವಾ ಲೀಗ್ ಆಫ್ ಲೆಜೆಂಡ್ಸ್‌ನಂತಹ ನಿರ್ದಿಷ್ಟ ಆನ್‌ಲೈನ್ ಆಟಗಳನ್ನು ಪ್ರವೇಶಿಸಲು ಸಾಧ್ಯವಾಗದಂತಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಕ್ಲೌಡ್‌ಫೇರ್ ಹೇಳಿದ್ದೇನು?
"ಕ್ಲೌಡ್‌ಫೇರ್ ಬಹು ಗ್ರಾಹಕರ ಮೇಲೆ ಪರಿಣಾಮ ಬೀರುವ ಸಮಸ್ಯೆಯ ಬಗ್ಗೆ ತಿಳಿದಿದೆ ಮತ್ತು ತನಿಖೆ ನಡೆಸುತ್ತಿದೆ. ವ್ಯಾಪಕವಾದ 500 ವೆಬ್‌ಸೈಟ್ ತಾಂತ್ರಿಕ ದೋಷಗಳು, ಕ್ಲೌಡ್‌ಫೇರ್ ಡ್ಯಾಶ್‌ಬೋರ್ಡ್ ಮತ್ತು API ಸಹ ವಿಫಲವಾಗಿದೆ. ಹೀಗಾಗಿ, ನಾವು ಸಂಪೂರ್ಣ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಮತ್ತು ಈ ಸಮಸ್ಯೆಯನ್ನು ತಗ್ಗಿಸಲು ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಹೆಚ್ಚಿನ ನವೀಕರಣಗಳು ಬರಲಿವೆ" ಎಂದು ಕ್ಲೌಡ್‌ಫೇರ್ ತನ್ನ ಅಧಿಕೃತ ಸ್ಥಿತಿ ಪುಟದಲ್ಲಿ ತಿಳಿಸಿದೆ(ಏಜೆನ್ಸೀಸ್).