ಹೈದರಾಬಾದ್: ಪತಿಯ ಆತ್ಮಹತ್ಯೆಗೆ (Techie Suicide) ಪ್ರಚೋದನೆ ನೀಡಿದ ಆರೋಪದ ಮೇಲೆ ಸಾಫ್ಟ್‌ವೇರ್ ಇಂಜಿನಿಯರ್ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಾಚುಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 21ರಂದೇ ಬಂಧನ ಪ್ರಕ್ರಿಯೆ ನಡೆದಿದ್ದರೂ, ಗುರುವಾರ ಮೃತರ ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಳಿಕ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾಚುಪಲ್ಲಿ ನಿವಾಸಿ 30 ವರ್ಷದ ಗೃಹಿಣಿ ಹಾಗೂ ಶಂಷಾಬಾದ್‌ನ ರೆಸ್ಟೋರೆಂಟ್ ನಿರ್ವಾಹಕ ಎಂ. ರಮಣ ರೆಡ್ಡಿ (35) ಬಂಧಿತ ಆರೋಪಿಗಳು. ಇವರಿಬ್ಬರ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಎಸ್. ಸೀತಾರಾಮ್ ರೆಡ್ಡಿ (36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಪೊಲೀಸ್ ದಾಖಲೆಗಳ ಪ್ರಕಾರ, ಜನವರಿ 24 ರಂದು ಸೀತಾರಾಮ್ ರೆಡ್ಡಿ ಅವರು ಮನೆಯಿಂದ ಹೊರಹೋಗಿದ್ದ ಸಮಯದಲ್ಲಿ ಅವರ ಪತ್ನಿ ಯಾರಿಗೂ ತಿಳಿಸದೆ ನಾಪತ್ತೆಯಾಗಿದ್ದರು. ಪತ್ನಿ ಕಾಣೆಯಾಗಿರುವ ಬಗ್ಗೆ ಸೀತಾರಾಮ್ ಅದೇ ದಿನ ಬಾಚುಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈ ಘಟನೆಯಿಂದ ತೀವ್ರ ಮನನೊಂದಿದ್ದ ಸೀತಾರಾಮ್, ಫೆಬ್ರವರಿ 8 ರಂದು ಹುಸೇನ್ ಸಾಗರ್ ಕೆರೆಗೆ ಹಾರಿ ಪ್ರಾಣತ್ಯಾಗ ಮಾಡಿದ್ದರು.
ವಾಟ್ಸಾಪ್ ಸ್ಟೇಟಸ್ ನೀಡಿದ ಸುಳಿವು
ಸೀತಾರಾಮ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದರು. ಇದನ್ನು ಗಮನಿಸಿದ ಕುಟುಂಬ ಸದಸ್ಯರು ಹುಸೇನ್ ಸಾಗರ್ ಪರಿಸರದಲ್ಲಿ ಹುಡುಕಾಟ ನಡೆಸಿದಾಗ, ಮರುದಿನ (ಫೆಬ್ರವರಿ 9) ಅವರ ಶವ ಪತ್ತೆಯಾಗಿತ್ತು. ಮೃತರ ತಂದೆ ವೆಂಕಟೇಶ್ವರ ರೆಡ್ಡಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಸೊಸೆ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅಕ್ರಮ ಸಂಬಂಧ ಹಾಗೂ ಡಿಜಿಟಲ್ ಕಿರುಕುಳ
"ನನ್ನ ಮಗನಿಗೆ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ತಿಳಿದಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆರೋಪಿ ರಮಣ ರೆಡ್ಡಿ, ಸೆಪ್ಟೆಂಬರ್ 19, 2025 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಸೊಸೆಯ ಖಾಸಗಿ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದ" ಎಂದು ವೆಂಕಟೇಶ್ವರ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆ ಸೀತಾರಾಮ್ ದಂಪತಿ ಶಂಷಾಬಾದ್ ಪೊಲೀಸರಿಗೆ ದೂರು ನೀಡಿದಾಗ ರಮಣ ರೆಡ್ಡಿಯನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ಪತ್ನಿ ತನ್ನ ತಂದೆ-ತಾಯಿಯ ಮನೆಗೆ ತೆರಳಿದ್ದಳು. ಹಿರಿಯರ ಮಧ್ಯಸ್ಥಿಕೆಯ ನಂತರ ನವೆಂಬರ್ 2025 ರಲ್ಲಿ ಮತ್ತೆ ಪತಿಯೊಂದಿಗೆ ವಾಸಿಸಲು ಮರಳಿದ್ದಳು.
ಆದರೆ, ಮತ್ತೆ ಯಾರಿಗೂ ತಿಳಿಸದೆ ಆಕೆ ಮನೆಯಿಂದ ಹೊರಹೋದದ್ದು ಸೀತಾರಾಮ್ ಅವರ ಮಾನಸಿಕ ನೆಮ್ಮದಿಯನ್ನು ಕೆಡಿಸಿತ್ತು. ಪತ್ನಿ ಹಾಗೂ ರಮಣ ರೆಡ್ಡಿ ಇಬ್ಬರೂ ಸೇರಿ ನೀಡಿದ ಮಾನಸಿಕ ಹಿಂಸೆಯೇ ಮಗನ ಸಾವಿಗೆ ಕಾರಣ ಎಂದು ತಂದೆ ಆರೋಪಿಸಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಆರೋಪಿಗಳು
ಆರಂಭದಲ್ಲಿ ಲೇಕ್ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅದನ್ನು ಬಾಚುಪಲ್ಲಿ ಪೊಲೀಸರಿಗೆ ವರ್ಗಾಯಿಸಿದ್ದರು. "ನಾವು ಪ್ರಕರಣವನ್ನು ಮರು ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಿದ್ದೇವೆ. ಏಪ್ರಿಲ್ 21 ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ" ಎಂದು ಬಾಚುಪಲ್ಲಿ ಇನ್ಸ್ಪೆಕ್ಟರ್ ಸಿ. ಸತೀಶ್ ಕುಮಾರ್ ತಿಳಿಸಿದ್ದಾರೆ.