Techie Rejects 47 LPA Job
ಪುಣೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದು ಕೈತುಂಬಾ ಸಂಬಳ ನೀಡುವ ಕೆಲಸ ಸಿಕ್ಕರೆ ಸಾಕು ಎಂದು ಹಪಹಪಿಸುವವರೇ ಹೆಚ್ಚು. ಅದರಲ್ಲೂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ 'ಲೇ ಆಫ್' ಭೀತಿ ಇರುವ ಈ ಸಮಯದಲ್ಲಿ 47 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್(Techie Rejects 47 LPA Job) ಎಂದರೆ ಯಾರೂ ಕೂಡ ಬೇಡ ಎನ್ನಲಾರರು. ಆದರೆ, ಪುಣೆಯ ಟೆಕ್ಕಿಯೊಬ್ಬರು ತಮಗೆ ಬಂದ 47 LPA (Lakhs Per Annum) ಆಫರ್ ಅನ್ನು ನಯವಾಗಿಯೇ ತಿರಸ್ಕರಿಸುವ ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.
ಪುಣೆಯ ಎಂಜಿನಿಯರಿಂಗ್ ಮ್ಯಾನೇಜರ್ ಆಗಿರುವ ವನೇಷ್ ಮಾಲಿ ಎಂಬುವವರು ತಮಗೆ ಬಂದ ಈ ಬೃಹತ್ ಆಫರ್ ಅನ್ನು ನಿರಾಕರಿಸಿದ ವಿಷಯವನ್ನು ತಮ್ಮ 'X' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನನಗೆ ಇತ್ತೀಚೆಗೆ ಪುಣೆಯಲ್ಲಿ ಹಿರಿಯ ಹುದ್ದೆಗಾಗಿ (Senior Role) 47 ಲಕ್ಷದ ಅದ್ಭುತ ಆಫರ್ ಬಂದಿತ್ತು. ಕಂಪನಿ ಕೂಡ ತುಂಬಾ ದೊಡ್ಡದಾಗಿತ್ತು. ಆದರೆ, ಆ ಹುದ್ದೆಗೆ ಬೇಕಾದ ಕೆಲವು ಕೌಶಲ್ಯಗಳು (Skills) ಸದ್ಯಕ್ಕೆ ನನ್ನಲ್ಲಿಲ್ಲ ಎಂಬುದು ನನಗೆ ಅರಿವಾಯಿತು. ಹಾಗಾಗಿ, ನಾನು ಆ ಮಟ್ಟದಲ್ಲಿ ಕೆಲಸ ನೀಡಲು ಸಿದ್ಧನಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿ ಆಫರ್ ತಿರಸ್ಕರಿಸಿದೆ" ಎಂದು ಬರೆದುಕೊಂಡಿದ್ದಾರೆ.
ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲದ ಟೆಕ್ಕಿ!
ಹೆಚ್ಚಿನ ಸಂಬಳದ ಜೊತೆಗೆ ಜವಾಬ್ದಾರಿಯೂ ಹೆಚ್ಚಿರುತ್ತದೆ ಎಂಬುದು ವನೇಷ್ ಅವರ ವಾದ. "ಯಾರಾದರೂ ನಮಗೆ ಇಷ್ಟೊಂದು ದೊಡ್ಡ ಮೊತ್ತದ ಸಂಬಳ ನೀಡುತ್ತಾರೆ ಎಂದರೆ, ನಮ್ಮಿಂದ ಮ್ಯಾನೇಜ್‌ಮೆಂಟ್ ಅಪಾರ ನಿರೀಕ್ಷೆ ಇಟ್ಟುಕೊಂಡಿರುತ್ತದೆ. ಕೆಲಸಕ್ಕೆ ಸೇರಿದ ಮೇಲೆ ಕಲಿಯಲು ಅಲ್ಲಿ ಹೆಚ್ಚು ಸಮಯ ಸಿಗುವುದಿಲ್ಲ. ಒಂದು ವೇಳೆ ನಾನು ಅಲ್ಲಿ ನಿರೀಕ್ಷಿತ ಮಟ್ಟದ ಕೆಲಸ ನೀಡಲು ವಿಫಲವಾದರೆ, ಅದು ನನಗೂ ರಿಸ್ಕ್ ಮತ್ತು ಆ ಸಂಸ್ಥೆಗೂ ತೊಂದರೆ. ಕೌಶಲ್ಯಗಳನ್ನು ಕೆಲಸದ ಅವಧಿಯಲ್ಲಿ ಕಲಿಯಬಹುದು ಎಂಬುದು ನಿಜವಾದರೂ, ಈ ಹಂತದಲ್ಲಿ ನಾನು ಆ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ" ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ!
ವನೇಷ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. "ಬರಿ ದುಡ್ಡಿಗಾಗಿ ಕೆಲಸ ಸೇರದೆ, ತಮ್ಮ ಸಾಮರ್ಥ್ಯದ ಬಗ್ಗೆ ಇಷ್ಟೊಂದು ಸ್ಪಷ್ಟತೆ ಇಟ್ಟುಕೊಂಡಿರುವುದು ನಿಜಕ್ಕೂ ಗ್ರೇಟ್. ಈ ರೀತಿಯ ಪ್ರಾಮಾಣಿಕತೆ ಲಾಂಗ್ ರನ್‌ನಲ್ಲಿ ಖಂಡಿತಾ ಸಹಾಯ ಮಾಡುತ್ತದೆ" ಎಂದು ಅನೇಕರು ಬೆಂಬಲ ಸೂಚಿಸಿದ್ದಾರೆ.ಇನ್ನೊಂದೆಡೆ, "ಸವಾಲುಗಳನ್ನು ಎದುರಿಸಿದಾಗಲೇ ಮನುಷ್ಯ ಬೆಳೆಯುವುದು. ಕೆಲಸದ ಜೊತೆಗೇ ಕಲಿಯುವ ಅವಕಾಶವಿದ್ದರೂ ಕೈಗೆ ಬಂದ ತುತ್ತನ್ನು ಕಳೆದುಕೊಂಡಿದ್ದು ತಪ್ಪು" ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. "ಬೆಳವಣಿಗೆ ಬೇಕೆಂದರೆ ಕಂಫರ್ಟ್ ಝೋನ್‌ನಿಂದ ಹೊರಬರಲೇಬೇಕು" ಎಂದು ಸಲಹೆ ನೀಡಿದ್ದಾರೆ.
ಈ ಘಟನೆಯು ಕಾರ್ಪೊರೇಟ್ ಜಗತ್ತಿನಲ್ಲಿ 'Integrity' (ಪ್ರಾಮಾಣಿಕತೆ) ಮತ್ತು 'Growth' (ಬೆಳವಣಿಗೆ) ನಡುವಿನ ಸಮತೋಲನದ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ,(ಏಜೆನ್ಸೀಸ್).