ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಜಗತ್ತಿನ ಉದ್ಯೋಗ ಮಾರುಕಟ್ಟೆಯನ್ನೇ ನುಂಗಿ ಹಾಕುತ್ತಿರುವ ಬೆಳವಣಿಗೆ ಸದ್ಯ ಸಾಫ್ಟ್‌ವೇರ್ ಟೆಕ್ಕಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಎಐ ಆಧಾರಿತ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಜಾಗತಿಕ ಟೆಕ್ ಕಂಪನಿಗಳು ತಮ್ಮ ಕಾರ್ಯವೈಖರಿಯಲ್ಲಿ ಅತಿದೊಡ್ಡ ಬದಲಾವಣೆ ಮಾಡಿಕೊಳ್ಳುತ್ತಿರುವುದೇ ಉದ್ಯೋಗಳ ಕಂಗಾಲಿಗೆ ಕಾರಣವಾಗಿದೆ.
ಅಮೆಜಾನ್, ಮೈಕ್ರೋಸಾಫ್ಟ್, ಓರಾಕಲ್ ಬಳಿಕ ಇದೀಗ ಯುರೋಪ್‌ನ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲೊಂದಾದ ಜರ್ಮನಿಯ ಸಾಫ್ಟ್‌ವೇರ್ ದೈತ್ಯ ಸ್ಯಾಪ್ (SAP) ಸುಮಾರು 10 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿದೆ ಎಂದು ವರದಿಯಾಗಿದೆ. ಎಐ ಕ್ಷೇತ್ರದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಂಪನಿಯು ಈ ನಿರ್ಧಾರಕ್ಕೆ ದಾಪುಗಾಲಿಟ್ಟಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಸ್ಯಾಪ್ ವಜಾ ಪ್ರಕ್ರಿಯೆಯು ಸ್ವಯಂ ನಿವೃತ್ತಿ ಮತ್ತು ಉದ್ಯೋಗಿಗಳ ಸ್ವಯಂ ನಿರ್ಗಮನ ಸೇರಿದಂತೆ ಹಲವು ವಿಧಾನಗಳ ಮೂಲಕ ನಡೆಯಲಿದೆ. ಆದರೆ, ಯಾವ ವಿಭಾಗಗಳ ಉದ್ಯೋಗಿಗಳ ಮೇಲೆ ಈ ಕ್ರಮ ಪರಿಣಾಮ ಬೀರಲಿದೆ ಎಂಬುದನ್ನು ಕಂಪನಿ ಇನ್ನೂ ಯಾವುದೇ ರೀತಿಯಲ್ಲೂ ಬಹಿರಂಗಪಡಿಸಿಲ್ಲ.
ಜಾಗತಿಕವಾಗಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸ್ಯಾಪ್, ವಿಶ್ವದ ಪ್ರಮುಖ ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾಗಿದೆ. ಹಣಕಾಸು ನಿರ್ವಹಣೆ, ಪೂರೈಕೆ ಸರಪಳಿ, ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ವ್ಯವಹಾರಿಕ ಕಾರ್ಯಗಳಿಗೆ ಅಗತ್ಯವಿರುವ ಸಾಫ್ಟ್‌ವೇರ್‌ಗಳನ್ನು ಈ ಕಂಪನಿ ಒದಗಿಸುತ್ತದೆ.
ಕಳೆದ ಎರಡು ವರ್ಷಗಳಲ್ಲಿ ಎಐ ಆಧಾರಿತ ಸಾಫ್ಟ್‌ವೇರ್‌ಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಕೆಲಸಗಳನ್ನು ಸ್ವಯಂಚಾಲಿತಗೊಳಿಸುವುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಲವು ಕಂಪನಿಗಳು ಎಐ ತಂತ್ರಜ್ಞಾನದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿವೆ. ಈಗ ಸ್ಯಾಪ್ ಕೂಡ ತನ್ನ ವಿವಿಧ ಸಾಫ್ಟ್‌ವೇರ್ ಉತ್ಪನ್ನಗಳಲ್ಲಿ ಎಐ ವೈಶಿಷ್ಟ್ಯಗಳನ್ನು ಅಳವಡಿಸುತ್ತಿದೆ. ಅದರಲ್ಲೂ ಕ್ಲೌಡ್ ಸೇವೆಗಳಲ್ಲಿ ಎಐ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸಿದೆ.
ಸ್ಯಾಪ್ಗೆ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುವುದು ಇದೇ ಮೊದಲೇನಲ್ಲ. 2024ರ ಆರಂಭದಲ್ಲಿಯೂ ಕಂಪನಿ ಸುಮಾರು 8 ಸಾವಿರ ಹುದ್ದೆಗಳ ಮೇಲೆ ಪರಿಣಾಮ ಬೀರುವ ಪುನರ್‌ರಚನಾ ಯೋಜನೆಯನ್ನು ಘೋಷಿಸಿತ್ತು. ಆ ಸಂದರ್ಭದಲ್ಲಿ ವ್ಯವಹಾರಿಕ ಎಐ ಸೇರಿದಂತೆ ಭವಿಷ್ಯದ ಬೆಳವಣಿಗೆಗೆ ಪ್ರಮುಖವಾದ ಕ್ಷೇತ್ರಗಳತ್ತ ಹೆಚ್ಚಿನ ಗಮನಹರಿಸುವುದಾಗಿ ತಿಳಿಸಿತ್ತು. ಅಂತೆಯೇ, ಈಗ ಅದನ್ನು ಕಾರ್ಯರೂಪಕ್ಕೆ ತರುತ್ತಿದೆ.
ಉದ್ಯೋಗ ಕಡಿತದ ನಡುವೆಯೂ ಬೆಳವಣಿಗೆಯ ಸಾಧ್ಯತೆ ಹೆಚ್ಚಿರುವ ಕೆಲವು ವಿಭಾಗಗಳಲ್ಲಿ ಕಂಪನಿ ನೇಮಕಾತಿ ಮುಂದುವರಿಸಿದೆ. ಹೀಗಾಗಿ, ಕೆಲವು ಉದ್ಯೋಗಿಗಳಿಗೆ ಹೊಸ ಹುದ್ದೆಗಳಿಗೆ ವರ್ಗಾವಣೆಯಾಗುವ ಅವಕಾಶವಿದ್ದರೆ, ಇನ್ನು ಕೆಲವರು ಕಂಪನಿಯಿಂದ ಹೊರಹೋಗುವ ಸಾಧ್ಯತೆಯಿದೆ.
ಸ್ಯಾಪ್ನ ಈ ಯೋಜನೆ ತಂತ್ರಜ್ಞಾನ ವಲಯದಲ್ಲಿ ನಡೆಯುತ್ತಿರುವ ದೊಡ್ಡ ಬದಲಾವಣೆಯ ಭಾಗವಾಗಿದೆ. ಹಲವು ಪ್ರಮುಖ ಟೆಕ್ ಕಂಪನಿಗಳು ಎಐ ಉತ್ಪನ್ನಗಳು ಮತ್ತು ಡೇಟಾ ಸೆಂಟರ್‌ಗಳ ಮೇಲೆ ಭಾರಿ ಮೊತ್ತ ಹೂಡಿಕೆ ಮಾಡುತ್ತಿವೆ. ಇದರೊಟ್ಟಿಗೆ, ಪುನರಾವರ್ತಿತ ಕೆಲಸಗಳು ಅಥವಾ ಭವಿಷ್ಯದ ಬೆಳವಣಿಗೆಗೆ ಕಡಿಮೆ ಪ್ರಾಮುಖ್ಯತೆ ಹೊಂದಿರುವ ಹುದ್ದೆಗಳನ್ನು ಕಡಿತಗೊಳಿಸುತ್ತಿವೆ ಎಂದು ಕಾರ್ಪೊರೇಟ್ ಆಡಳಿತ ತಜ್ಞ ಕೃಷ್ಣ ಅಯ್ಯರ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).