ಈ ಮೂವರು ಶಿಕ್ಷಕಿಯರಿಗೆ ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್​: ಪ್ರೀತಿಯ ಬಲೆಗೆ ಬೀಳಿಸಿ ಮಾದಕ ಸುಳಿಗೆ ಸಿಲುಕಿಸುತ್ತಿದ್ದರು! Teachers 
ದೇಶ

ಈ ಮೂವರು ಶಿಕ್ಷಕಿಯರಿಗೆ ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್​: ಪ್ರೀತಿಯ ಬಲೆಗೆ ಬೀಳಿಸಿ ಮಾದಕ ಸುಳಿಗೆ ಸಿಲುಕಿಸುತ್ತಿದ್ದರು! Teachers

ಪ್ರಮುಖ ಮುಖ್ಯಾಂಶಗಳು

  • ವಡಕರ ಎಂಡಿಎಂಎ ಡ್ರಗ್ಸ್ ಪ್ರಕರಣದಲ್ಲಿ ಮೂವರು ಶಿಕ್ಷಕಿಯರ ಬಂಧನ
  • ಇನ್‌ಸ್ಟಾಗ್ರಾಮ್ ಹಾಗೂ ಫುಡ್ ಡೆಲಿವರಿ ಆ್ಯಪ್ ಮೂಲಕ ಡ್ರಗ್ಸ್ ಪೂರೈಕೆ
  • ಜುಂಬಾ ಕ್ಲಾಸ್ ಹಾಗೂ ಬನ್ ಮಾರಾಟದ ಮರೆಯಲ್ಲಿ ಮಾದಕ ದಂಧೆ
  • ಬೆಂಗಳೂರಿನಿಂದ ಡ್ರಗ್ಸ್ ತರಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಗಳು
ತಿರುವನಂತಪುರಂ : ಕೇರಳದ ವಡಕರ ಎಂಡಿಎಂಎ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಶಿಕ್ಷಕಿಯರ ( Teachers ) ಅಸಲಿ ಮುಖವಾಡ ಒಂದೊಂದಾಗಿ ಕಳಚಿಬೀಳುತ್ತಿದ್ದು, ಸಮಾಜದದಲ್ಲಿ ಮಕ್ಕಳಿಗೆ ದಾರಿ ದೀಪವಾಗಬೇಕಿದ್ದ ಶಿಕ್ಷಕಿಯರೇ ಆ ಮಕ್ಕಳನ್ನು ನಶಾ ಲೋಕಕ್ಕೆ ದೂಡುತ್ತಿದ್ದ ಆಘಾತಕಾರಿ ಸಂಗತಿಗಳು ಪೊಲೀಸರ ತನಿಖೆಯಲ್ಲಿ ಬಯಲಾಗಿರುವುದು ತೀವ್ರ ಆಘಾತ ತಂದಿದೆ.
ಬಂಧಿತ ಶಿಕ್ಷಕಿಯರಾದ ಕಾವ್ಯಾ, ಕೀರ್ತನಾ ಹಾಗೂ ವಿ.ಪಿ. ನಿಷ್ಮಾ, ಕಾಲೇಜು ವಿದ್ಯಾರ್ಥಿಗಳನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಇನ್‌ಸ್ಟಾಗ್ರಾಮ್ ಮೂಲಕ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಇವರು, ಪ್ರೀತಿಯ ಬಲೆಯಲ್ಲಿ ಬೀಳುವಂತೆ ನಾಟಕವಾಡುತ್ತಿದ್ದರು. ಪ್ರಚೋದಾತ್ಮಕ ಮಾತುಗಳನ್ನಾಡುತ್ತಿದ್ದರು. ತಮ್ಮ ದಾರಿಗೆ ಬರುತ್ತಿದ್ದಂತೆ ಯಾರೂ ಅನುಮಾನಪಡದಂತೆ ಫುಡ್ ಡೆಲಿವರಿ ಆ್ಯಪ್ ನೆಪದಲ್ಲಿ ಮಾದಕ ವಸ್ತುಗಳನ್ನು ಅವರಿಗೆ ಪೂರೈಸುತ್ತಿದ್ದರು.

ಜುಂಬಾ ಕ್ಲಾಸ್ ಹಾಗೂ ಬನ್ ಮಾರಾಟದ ಮರೆ

ಬೋಧನ ವೃತ್ತಿಯಲ್ಲಿದ್ದ ಕಾರಣ ಇವರ ಮೇಲೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಈ ಸೋಗನ್ನು ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು, ಜುಂಬಾ ತರಗತಿಗಳು ಹಾಗೂ ಬನ್ ಮಾರಾಟದ ಮರೆಯಲ್ಲಿ ಈ ಕರಾಳ ದಂಧೆಯನ್ನು ರಾಜಾರೋಷವಾಗಿ ಮುಂದುವರಿಸಿದ್ದರು.
ಸಂಬಳ ಸಾಲದೆ ಐಷಾರಾಮಿ ಜೀವನ ನಡೆಸುವ ಗೀಳಿಗೆ ಬಿದ್ದಿದ್ದ ಈ ಶಿಕ್ಷಕಿಯರು, ಸ್ವತಃ ತಾವೂ ಡ್ರಗ್ಸ್ ಚಟಕ್ಕೆ ಬಿದ್ದು ನಂತರ ಏಜೆಂಟರಾಗಿ ಬದಲಾಗಿದ್ದರು. ಬೆಂಗಳೂರಿನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಇವರು, ತಮ್ಮ ಆ ಪಯಣದ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಇನ್ನುಳಿದ ಇತರೆ ಶಿಕ್ಷಕರನ್ನೂ ಸಹ ಡ್ರಗ್ಸ್ ಚಟಕ್ಕೆ ತರಲು ಇವರು ಯತ್ನಿಸಿರುವುದು ತನಿಖಾ ತಂಡಕ್ಕೆ ತಿಳಿದುಬಂದಿದೆ. ಡ್ರಗ್ಸ್ ಸಾಗಿಸುತ್ತಿದ್ದ ಡೆಲಿವರಿ ಬಾಯ್ ಸಿಕ್ಕಿಬಿದ್ದ ಬಳಿಕ ಈ ಅಕ್ರಮ ಜಾಲದ ಒಂದೊಂದೇ ಸ್ಫೋಟಕ ಸತ್ಯಗಳು ಹೊರಬಂದಿವೆ.
ಗ್ರಾಮೀಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇರಿ ಜೋಸೆಫ್ ನೇತೃತ್ವದ ವಿಶೇಷ ತಂಡವು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದೆ. ಅಕ್ರಮ ಸಂಪಾದನೆಯ ಹಣ ಎಲ್ಲಿಗೆ ಹೋಗಿದೆ? ಯಾರ ಖಾತೆಗಳಿಗೆ ವರ್ಗಾವಣೆಯಾಗಿದೆ? ಮತ್ತು ಆಸ್ತಿ ಖರೀದಿಗೆ ಬಳಕೆಯಾಗಿದೆಯೇ? ಎಂಬ ಬಗ್ಗೆ ಪೊಲೀಸರು ಕೂಲಂಕಷವಾಗಿ ಶೋಧ ನಡೆಸುತ್ತಿದ್ದಾರೆ, (ಏಜೆನ್ಸೀಸ್​).