ಸಾಂದರ್ಭಿಕ ಚಿತ್ರ 
ದೇಶ

ಪೆಟ್ರೋಲ್ ಬೆಲೆಗೆ ಶಿಕ್ಷಕನ ಜಬರ್ದಸ್ತ್ ಸಡ್ಡು; ಬೈಕ್ ಗ್ಯಾರೇಜ್‌ಗೆ... ಕುದುರೆ ರೋಡಿಗೆ! ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸ್ತಿರೋ ವಿಡಿಯೋ.. Fuel Price Hike

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿವೆ
  • ಮಧ್ಯಮ ವರ್ಗದ ಜನರು ಓಡಾಡಲು ವಾಹನ ತೆಗೆಯಬೇಕಾದರೆ ನೂರು ಬಾರಿ ಯೋಚಿಸುವಂತಾಗಿದೆ
  • ಜಾರ್ಖಂಡ್​ನ ಶಿಕ್ಷಕರೊಬ್ಬರು ಈ ಇಂಧನ ಬೆಲೆ ಏರಿಕೆಯ ಸಮಸ್ಯೆಗೆ ಪರ್ಯಾಯ ದಾರಿ ಹುಡುಕಿಕೊಂಡಿದ್ದಾರೆ
  • ಬೈಕ್ ಬಿಟ್ಟು ಕುದುರೆ ಸವಾರಿಯ ಮೂಲಕ ಸರ್ಕಾರದ ಸಮೀಕ್ಷಾ ಕಾರ್ಯ ನಡೆಸುತ್ತಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ವೈರಲ್​ ಆಗಿದೆ
ರಾಂಚಿ: ದೇಶದಲ್ಲಿ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Fuel Price Hike) ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿವೆ. ಮಧ್ಯಮ ವರ್ಗದ ಜನರು ವಾಹನ ತೆಗೆಯಬೇಕಾದರೆ ನೂರು ಬಾರಿ ಯೋಚಿಸುವಂತಾಗಿದೆ. ಆದಾಗ್ಯೂ, ಜಾರ್ಖಂಡ್​ನ ಶಿಕ್ಷಕರೊಬ್ಬರು ಈ ಇಂಧನ ಬೆಲೆ ಏರಿಕೆಯ ಸಮಸ್ಯೆಗೆ ತಾವೇ ಒಂದು ಪರ್ಯಾಯ ದಾರಿಯನ್ನು ಕಂಡುಕೊಂಡಿದ್ದು, ಬೈಕ್ ಬಿಟ್ಟು ಕುದುರೆ ಸವಾರಿಯ ಮೂಲಕ ಸರ್ಕಾರದ ಸಮೀಕ್ಷಾ ಕಾರ್ಯ ನಡೆಸುತ್ತಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಈ ನಡೆ ಭಾರಿ ಸಂಚಲನ ಮೂಡಿಸಿದೆ.

ಘಟನೆ ಏನು?

ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಮುನ್ನಾ ಪ್ರಸಾದ್ ಗುಪ್ತಾ, ಅವರಿಗೆ ರಾಜ್ಕಿಯ ಪ್ರಾಥಮಿಕ ವಿದ್ಯಾಲಯ ಪಂಘಟ್ವಾ ಪ್ರದೇಶದಲ್ಲಿ ಜನಗಣತಿ ಮಾಡಲು ಸೂಚಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇಂಧನ ಪಡೆಯಲು ಕಷ್ಟವಾಗುತ್ತಿರುವುದರಿಂದ ಅವರು ತಮ್ಮ ಕರ್ತವ್ಯಕ್ಕಾಗಿ ಕುದುರೆಯ ಮೇಲೆ ಪ್ರಯಾಣಿಸುತ್ತಿದ್ದಾರೆ. 
ಆದಾಗ್ಯೂ, ಬೈಕ್ ಅಥವಾ ಕಾರನ್ನು ಬಳಸಿ ಕೆಲಸವನ್ನು ಮಾಡುವ ಬದಲಿಗೆ ಶಿಕ್ಷಕ ಜನಗಣತಿ ಕ್ಯಾಪ್​, ಬಿಳಿ ಸಮವಸ್ತ್ರ ಧರಿಸಿ ತಮಗೆ ನಿಗದಿಪಡಿಸಿದ ಪ್ರದೇಶವನ್ನು ತಲುಪಲು ಕುದುರೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. 
ಈ ಬಗ್ಗೆ ಶಿಕ್ಷಕ ಮುನ್ನಾ ಪ್ರಸಾದ್ ಗುಪ್ತಾ ಮಾತನಾಡಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರುತ್ತಿರುವುದರಿಂದ ಸಾಮಾನ್ಯ ಜನರ ಮೇಲೆ ಭಾರವಾದ ಹೊರೆಯನ್ನು ಹಾಕಿದೆ. ಈ ಕಾರಣದಿಂದ ಜನಗಣತಿಗೆ ಕುದುರೆ ಮೇಲೆ ಪ್ರಯಾಣಿಸಲು ನಿರ್ಧರಿಸಿದೆ. ಆದಾಗ್ಯೂ, ಇಂಧನ ಬೆಲೆಗಳು ಗಗನಕ್ಕೇರುತ್ತಿರುವಾಗ, ಕುದುರೆ ಸವಾರಿ ಮಾಡುವುದು ಆರ್ಥಿಕ ಅನುಕೂಲಕರವಾಗಿದೆ ಎಂದು ಹೇಳಿದರು. 
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕರು ಪ್ರತಿಕ್ರಿಯಿಸಿದ್ದು, ಹೆಚ್ಚುತ್ತಿರುವ ಹಣದುಬ್ಬರದ ಮೇಲಿನ ವಿಡಂಬನೆ ಮತ್ತು ಪ್ರಾಯೋಗಿಕ ದೇಸಿ ಪರಿಹಾರ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಶಿಕ್ಷಕರ ಸರಳತೆ ಮತ್ತು ವಿಶಿಷ್ಟ ವಿಧಾನಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ (ಏಜೆನ್ಸೀಸ್​).