Aligarh Muslim University 
ದೇಶ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನ ಗುಂಡಿಕ್ಕಿ ಹತ್ಯೆ: ಕ್ಯಾಂಪಸ್‌ನಲ್ಲಿ ಆತಂಕ..!

ಅಲಿಗಢ (ಉತ್ತರ ಪ್ರದೇಶ): ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ABK ಯೂನಿಯನ್ ಹೈಸ್ಕೂಲ್‌ನಲ್ಲಿ ಕಂಪ್ಯೂಟರ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ 43 ವರ್ಷದ ರಾವ್ ದಾನಿಶ್ ಅಲಿ ಎಂಬುವರನ್ನು, ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ವಿಶ್ವವಿದ್ಯಾಲಯದ (AMU) ಆವರಣದಲ್ಲಿ ಬುಧವಾರ ರಾತ್ರಿ ನಡೆದಿದೆ.
ದಾನಿಶ್ ಅಲಿ ಅವರು ರಾತ್ರಿಯ ಊಟದ ನಂತರ ಸಹೋದ್ಯೋಗಿಗಳೊಂದಿಗೆ ದಿನನಿತ್ಯದ ನಡಿಗೆಗೆ ಹೊರ ಹೋಗಿದ್ದರು. ಮೌಲಾನಾ ಆಜಾದ್ ಲೈಬ್ರರಿ ಬಳಿಯ ಕ್ಯಾಂಟೀನ್ ಸಮೀಪದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ನಕಾಬ್ ಧರಿಸಿದ ದುಷ್ಕರ್ಮಿಗಳು ತಮ್ಮ ಗುರಿಯನ್ನು ದಾಳಿ ಮಾಡಿದ್ದಾರೆ. ತಲೆಗೆ ತಗುಲಿದ ಗುಂಡಿನ ಗಾಯದಿಂದ ಗಂಭೀರವಾಗಿ ಗಾಯಗೊಂಡ ದಾನಿಶ್ ಅವರನ್ನು ತಕ್ಷಣ ಜವಾಹರ್‌ಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು.
ದಾನಿಶ್ ಅಲಿ ಅವರು AMUಯ ಮಾಜಿ ವಿದ್ಯಾರ್ಥಿಯೂ ಆಗಿದ್ದು, ಕಳೆದ 11 ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಘಟನೆಯಿಂದ ವಿಶ್ವವಿದ್ಯಾಲಯದಲ್ಲಿ ಆತಂಕ ಮನೆ ಮಾಡಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ.
AMU ಪ್ರಾಕ್ಟರ್ ಪ್ರೊ. ಮೊಹಮ್ಮದ್ ವಸೀಂ ಅಲಿ ಅವರು ಘಟನೆಯನ್ನು ದೃಢೀಕರಿಸಿ, "ಲೈಬ್ರರಿ ಬಳಿ ಗುಂಡಿನ ಶಬ್ದ ಕೇಳಿ ಬಂದ ನಂತರ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದು ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆರೋಪಿಗಳ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).