(Teacher Negligence ಚಿತ್ರ X)
ಉತ್ತರ ಪ್ರದೇಶ: ನಗರದ ಕನ್ನೌಜ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವ್ಯವಸ್ಥೆಯ ಬೇಜವಾಬ್ದಾರಿಯನ್ನು ಬಯಲು ಮಾಡುವ ಘಟನೆಯೊಂದು ಬೆಳಕಿಗೆ ಬಂದಿದೆ. ತರಗತಿ ನಡೆಯಬೇಕಾದ ಸಮಯದಲ್ಲಿ ಶಿಕ್ಷಕರೊಬ್ಬರು ನಿದ್ರೆ (
ಮಾಡುತ್ತಿದ್ದು, ಅವರ ಎದುರಲ್ಲೇ ವಿದ್ಯಾರ್ಥಿಗಳು ಮೊಬೈಲ್ ನೋಡುತ್ತಾ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲೇನಿದೆ?
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ 3 ರಿಂದ 4 ನೇ ತರಗತಿಯ ಮಕ್ಕಳಿರುವಂತಹ ತರಗತಿ ಕೊಠಡಿಯಲ್ಲಿ ಶಿಕ್ಷಕರೊಬ್ಬರು ಅಲ್ಲಿದ್ದ ಬೆಂಚ್ ಮೇಲೆ ಮಲಗಿರುವುದನ್ನು ಕಾಣಬಹುದು. ಆದಾಗ್ಯೂ, ಈ ಸಮಯದಲ್ಲಿ ಮಕ್ಕಳೆಲ್ಲರೂ ಪುಸ್ತಕಗಳನ್ನು ಕೈಯಲ್ಲಿ ಹಿಡಿಯುವ ಬದಲಿಗೆ ಶಿಕ್ಷಕರ ಮೊಬೈಲ್ ಹಿಡಿದುಕೊಂಡು ಸುತ್ತಲೂ ಕುಳಿತು ವಿಡಿಯೋಗಳನ್ನು ನೋಡುವುದನ್ನು ತೋರಿಸಲಾಗಿದೆ.
ಈ ವಿಡಿಯೋವನ್ನು 'Zingabad' ಎಂಬ ಎಕ್ಸ್ ಬಳೆಕದಾರರೊಬ್ಬರು ಹಂಚಿಕೊಂಡಿದ್ದು, ಅನೇಕ ಪ್ರತಿಕ್ರಿಯೆಗಳನ್ನು ಸೆಳೆದಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿದ್ದರೂ, ಇಂತಹ ಘಟನೆಗಳು ಶಾಲಾ ನಿರ್ವಹಣೆಯ ಲೋಪಗಳನ್ನು ಎತ್ತಿಹಿಡಿಯುತ್ತವೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ತರಗತಿ ಕೊಠಡಿಯಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಅವಧಿಯಲ್ಲಿ ಈ ರೀತಿಯ ಉದಾಸೀನ ಖಂಡನೀಯ ಎಂದು ಇನ್ನಿತರರು ಕಾಮೆಂಟ್ ಮಾಡಿದ್ದಾರೆ.
ತರಗತಿಯಲ್ಲಿ ಮಾರಕಾಸ್ತ್ರ ಹಿಡಿದು ಹಲ್ಚಲ್ ಎಬ್ಬಿಸಿದ ಹೆಡ್‌ಮಾಸ್ಟ್ರೆಸ್!
ಈ ಹಿಂದೆ ಉತ್ತರ ಪ್ರದೇಶದ ಕೌಶಾಂಬಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಿಖಾ ಸಿಂಗ್ ಶಾಲಾ ಆವರಣಕ್ಕೆ ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ತಂದಿರುವ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯಗಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದು, ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ, ಶಾಲೆಯಲ್ಲಿ ತನ್ನ ಪ್ರಾಣಕ್ಕೆ ಅಪಾಯವಿರುವ ಕಾರಣ ಆತ್ಮರಕ್ಷಣೆಗಾಗಿ ಆಯುಧಗಳನ್ನು ಹೊಂದಿದ್ದೇನೆ ಎಂದು ಶಿಖಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಇಬ್ಬರು ಪಾಲಕರಿಗೆ ಚಾಕು ತೋರಿಸಿದ ಆರೋಪವೂ ಕೇಳಿಬಂದಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ (ಏಜೆನ್ಸೀಸ್).